ನೀರಿಗಾಗಿ ನಾರಿಯರಿಂದ ಖಾಲಿ ಕೊಡ ಪ್ರದರ್ಶನ

| Published : Dec 17 2023, 01:46 AM IST

ಸಾರಾಂಶ

ಅದರಲ್ಲಿ ವಾರಕೊಮ್ಮೆ ನೀರು ಬಿಡುತ್ತಿದ್ದು, ಕೆಲಕಡೆ ಬಂದರೆ ಇನ್ನೂ ಕೆಲ ಕಡೆ ಬರುವುದೇ ಇಲ್ಲ. ಇದರಿಂದ ಪಕ್ಕದ ವಾರ್ಡ್‌ಗೆ ಹೋಗಿ ಗಂಟೆಗಟ್ಟಲೆ ನಿಂತು ನೀರು ತರಬೇಕಾಗಿದೆ. ಇದರಿಂದ ಅಲ್ಲಿನ ಜನರಿಂದ ಕಿತ್ತಾಡಿಕೊಂಡು ನೀರು ತರಬೇಕಾದ ಪರಿಸ್ಥಿತಿ ಎದುರಾಗಿದೆ.

ಕುರುಗೋಡು: ಸಮೀಪದ ಕುಡುತಿನಿ ಪಟ್ಟಣದ 19ನೇ ವಾರ್ಡಿನ ಮಹಿಳೆಯರು ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಖಾಲಿ ಬಿಂದಿಗೆ ಹಿಡಿದು ಪಟ್ಟಣ ಪಂಚಾಯಿತಿ ಮುಂದೆ ಕೆಲ ಗಂಟೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮಹಿಳೆಯರು ಮಾತನಾಡಿ, 19ನೇ ವಾರ್ಡಿನಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ವಾಸವಿದೆ. ಆದರೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಬೇಸಿಗೆ ಸಮೀಪಿಸುವುದಕ್ಕೆ ದಿನಗಳೇ ದೂರವಿದ್ದು, ಅದರ ಒಳಗೆ ನೀರಿನ ಸಮಸ್ಯೆ ಕಾಡಲಾರಂಭಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅದರಲ್ಲಿ ವಾರಕೊಮ್ಮೆ ನೀರು ಬಿಡುತ್ತಿದ್ದು, ಕೆಲಕಡೆ ಬಂದರೆ ಇನ್ನೂ ಕೆಲ ಕಡೆ ಬರುವುದೇ ಇಲ್ಲ. ಇದರಿಂದ ಪಕ್ಕದ ವಾರ್ಡ್‌ಗೆ ಹೋಗಿ ಗಂಟೆಗಟ್ಟಲೆ ನಿಂತು ನೀರು ತರಬೇಕಾಗಿದೆ. ಇದರಿಂದ ಅಲ್ಲಿನ ಜನರಿಂದ ಕಿತ್ತಾಡಿಕೊಂಡು ನೀರು ತರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.

19ನೇ ವಾರ್ಡಿನ ಪಪಂ ಸದಸ್ಯೆ ಆರ್. ಸಾಲಮ್ಮ ರಾಮಚಂದ್ರಪ್ಪ ಮಾತನಾಡಿ, ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇದರಿಂದ ಮಹಿಳೆಯರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಬೇರೆಕಡೆ ಹೋಗಿ ನೀರು ತರಬೇಕಾಗಿದೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಹಳ ಸಲ ತಂದಿದ್ದೇನೆ ಎಂದರು.

ನೀರಿನ ಸಮಸ್ಯೆ:

ಬೇಸಿಗೆ ಬರುವ ಮುಂಚಿತವಾಗಿ ಕುಡುತಿನಿ ಪಟ್ಟಣದಲ್ಲಿ ಕೆಲ ವಾರ್ಡ್‌ಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ತಲೆದೋರಿದೆ. ಸಮಸ್ಯೆ ಪರಿಹರಿಸುವ ಕಾರ್ಯವನ್ನು ಪಪಂ ಆಡಳಿತ ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕೂಡ 3 ಮತ್ತು 4ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ ಪಟ್ಟಣ ಪಂಚಾಯಿತಿ ಸದಸ್ಯ ಹಾಲಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ನಾಗಮ್ಮ ಕಾಳಮ್ಮ, ಶಂಕ್ರಮ್ಮ, ಜ್ಯೋತಿ, ದುರುಗಮ್ಮ, ಮಹಿಳೆಯರು ಇದ್ದರು.