ಲಿಂಗನಮಕ್ಕಿ ಜಲಾಶಯದಿಂದ ಇಂದು ನೀರು ಬಿಡುಗಡೆ

| Published : Aug 01 2024, 12:17 AM IST

ಸಾರಾಂಶ

ಮಲೆನಾಡಿನ ಅತಿದೊಡ್ಡ ಜಲಾಶಯವಾಗಿರುವ ಲಿಂಗನಮಕ್ಕಿಯಿಂದ ನೀರು ಬಿಡಲು ನಿರ್ಧರಿಸಿರುವ ಕಾರಣ ನದಿ ಪಾತ್ರದ ಜನರಿಗೆ ಅಧಿಕಾರಿಗಳು ಅಲರ್ಟ್‌ ಘೋಷಣೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಕಳೆದ ಬಾರಿ ಮಳೆ ಕೊರತೆಯಿಂದಾಗಿ ಸೊರಗಿದ್ದ ಜಲಾಶಯಗಳು ಈ ಬಾರಿ ಮಳೆ ಅಬ್ಬರಕ್ಕೆ ಮೈದುಂಬಿ ಕಂಗೊಳಿಸುತ್ತಿವೆ.

ಮಳೆಗಾಲ ಆರಂಭದಲ್ಲೇ ತುಂಗೆ ಭರ್ತಿಯಾಗಿ ನದಿಯತ್ತ ಹರಿಯುತ್ತಿದ್ದಾಳೆ. ಇತ್ತ ಭದ್ರೆಯೂ ಮೈದುಂಬಿ ಹರಿಯುತ್ತಿದ್ದಾಳೆ. ಈಗ ರಾಜ್ಯದ ವಿದ್ಯುತ್ ಬೇಡಿಕೆಯ ಶೇ .25ರಷ್ಟು ಪೂರೈಸುವ ಲಿಂಗನಮಕ್ಕಿ ಜಲಾಶಯದ ಸರದಿ.

1819 ಅಡಿ ಗರಿಷ್ಠ ಮಟ್ಟವನ್ನು ಹೊಂದಿರುವ ಜಲಾಶಯ ಸದ್ಯ 1812.65 ಅಡಿಗೆ ತಲುಪಿದ್ದು, ಶೇ.86.51 ರಷ್ಟು ಭರ್ತಿಯಾಗಿದೆ. ಭರ್ತಿಗೆ ಇನ್ನೂ ಐದು ಅಡಿ ಯಷ್ಟು ಮಾತ್ರ ಬಾಕಿ ಉಳಿದಿದ್ದು, ಗುರುವಾರ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇರುವುದರಿಂದ ಜು.1ರಂದು ಜಲಾಶಯದಿಂದ 10 ಸಾವಿರ ಕ್ಯುಸೆಕ್‌ ನೀರನ್ನು ಕ್ರಸ್ಟ್‌ಗೇಟ್‌ ಮೂಲಕ ಹೊರಬಿಡಲು ನಿರ್ಧಾರ ಮಾಡಲಾಗಿದೆ.

ಮಲೆನಾಡಿನ ಅತಿದೊಡ್ಡ ಜಲಾಶಯವಾಗಿರುವ ಲಿಂಗನಮಕ್ಕಿಯಿಂದ ನೀರು ಬಿಡಲು ನಿರ್ಧರಿಸಿರುವ ಕಾರಣ ನದಿ ಪಾತ್ರದ ಜನರಿಗೆ ಅಧಿಕಾರಿಗಳು ಅಲರ್ಟ್‌ ಘೋಷಣೆ ಮಾಡಿದ್ದಾರೆ. ನದಿಪಾತ್ರದ ಹಳ್ಳಿಗಳಿಗೆ ತೆರಳಿ ಮೈಕ್‌ ಅನೌನ್ಸ್‌ಮೆಂಟ್‌ ಮಾಡಿದ ಅಧಿಕಾರಿಗಳು ಸುರಕ್ಷಿತ ಸ್ಥಳಗಳಿಗೆ ತರಳುವಂತೆ ಸೂಚನೆ ನೀಡಿದ್ದಾರೆ.

ಲಿಂಗನಮಕ್ಕಿ ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 159ಟಿಎಂಸಿ ಇದ್ದು, ಶೇ 86ರಷ್ಟು ಪ್ರಮಾಣ ಪ್ರಸಕ್ತ ಭರ್ತಿಯಾದಂತಾಗಿದೆ. ಒಳಹರಿವು ಬುಧವಾರ ಬೆಳಿಗ್ಗೆಯ ಮಾಪನದಂತೆ 82 ಸಾವಿರ ಕ್ಯೂಸೆಕ್ ಇದ್ದು, ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಿದ್ದು ನೀರಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆ ನೀರು 1816ರ ಗಡಿಯನ್ನು ದಾಟಿದ ನಂತರ ಮೇಲಧಿಕಾರಿಗಳು ಮತ್ತು ಕೇಂದ್ರ ಕಚೇರಿಯ ಆದೇಶದ ಮೇರೆಗೆ ಒಳಹರಿವನ್ನು ಗಮನದಲ್ಲಿಟ್ಟುಕೊಂಡು ಕ್ರಸ್ಟ್‌ ಗೇಟಿನ ಮೂಲಕ ಹೊರಹರಿಸಲಾಗುವುದು ಎಂದು ಕೆಪಿಸಿ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ ಕೇವಲ 1787.45 ಅಡಿ ನೀರು ಸಂಗ್ರಹವಾಗಿತ್ತು. ಈ ಬಾರಿಗೆ ಇದನ್ನು ಹೋಲಿಕೆ ಮಾಡಿ ನೋಡಿದಾಗ ಸುಮಾರು 25 ಅಡಿ ನೀರು ಹೆಚ್ಚುವರಿಯಾಗಿ ಈ ಬಾರಿ ಸಂಗ್ರಹವಾಗಿದೆ. ಹೆಚ್ಚಿನ ಮಳೆಯ ನಿರೀಕ್ಷೆಯನ್ನು ಹವಾಮಾನ ತಜ್ಞರು ನೀಡಿರುವುದರಿಂದ ಶೀಘ್ರವೇ ಲಿಂಗನಮಕ್ಕಿ ಭರ್ತಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ.

ಜಿಲ್ಲೆಯಲ್ಲಿ ಬುಧವಾರ ಸರಾಸರಿ 40.94 ಮಿ.ಮೀ ಮಳೆಯಾಗಿದ್ದು, ಹೊಸನಗರ ತಾಲ್ಲೂಕಿನಾದ್ಯಂತ ಕಳೆದ 24 ಗಂಟೆಯಲ್ಲಿ ಇಲ್ಲಿನ ಚಕ್ರಾ ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು, 201 ಮಿ.ಮೀ ಮಳೆಯಾಗಿದೆ. ಮಾಣಿ 185 ಮಿ.ಮೀ, ಯಡೂರು 188 ಮಿ.ಮೀ, ಹುಲಿಕಲ್ 189 ಮಿ.ಮೀ, ಮಾಸ್ತಿಕಟ್ಟೆ 186 ಮಿ.ಮೀ, ಸಾವೇಹಕ್ಲು 155 ಮಿ.ಮೀ ಮಳೆಯಾಗಿದೆ.

ನಿರಂತರ ಮಳೆಯಿಂದಾಗಿ ಈ ಭಾಗದ ಜಲಾಶಯಗಳ ಒಳ ಹರಿವು ಏರಿಕೆಯಾಗಿದೆ. ಮಾಣಿ ಜಲಾಶಯಕ್ಕೆ 10788 ಕ್ಯೂಸೆಕ್ ಒಳ ಹರಿವು ಇದೆ. ಪಿಕ್‌ಅಪ್‌ಗೆ 4195 ಕ್ಯೂಸೆಕ್ ಒಳ ಹರಿವು ಇದೆ. ಚಕ್ರಾ ಜಲಾಶಯಕ್ಕೆ 1011 ಕ್ಯೂಸೆಕ್ ಒಳ ಹರಿವು, 1848 ಕ್ಯೂಸೆಕ್ ಹೊರ ಹರಿವು ಇದೆ. ಸಾವೇಹಕ್ಲಿಗೆ 3509 ಕ್ಯೂಸೆಕ್ ಒಳ ಹರಿವು, 2007 ಕ್ಯೂಸೆಕ್ ಹೊರ ಹರಿವು ಇದೆ.