ಲಾಯದುಣಸಿ ಕೆರೆಗೆ ಜಲಾಶಯಿಂದ ನೀರು ಹರಿಸಿ

| Published : Jun 25 2025, 11:47 PM IST

ಸಾರಾಂಶ

2014-15ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ ₹ 144 ಕೋಟಿ ಖರ್ಚು ಮಾಡಿ ಕನಕಗಿರಿ ಕ್ಷೇತ್ರಾದ್ಯಂತ ಕೆರೆ ತುಂಬುವ ಯೋಜನೆ ಪೂರ್ಣಗೊಳಿಸಿದೆ. ಯೋಜನೆ ಪೂರ್ಣಗೊಂಡು ಹತ್ತಾರು ವರ್ಷ ಕಳೆದಿವೆ. ಆದರೆ, ಈ ವರೆಗೂ ಲಾಯದುಣಸಿ ಕೆರೆಗೆ ನೀರು ತುಂಬಿಸದೆ ಈ ಭಾಗದ ಜನರಿಗೆ ಅನ್ಯಾಯ ಮಾಡಲಾಗಿದೆ.

ಕನಕಗಿರಿ:

ತಾಲೂಕಿನ ಹುಲಿಹೈದರ್‌ ಹೋಬಳಿ ವ್ಯಾಪ್ತಿಯ ಲಾಯದುಣಸಿ ಕೆರೆಗೆ ತುಂಗಭದ್ರಾ ಅಥವಾ ಆಲಮಟ್ಟಿ ಡ್ಯಾಮ್‌ನಿಂದ ನೀರು ತುಂಬಿಸುವಂತೆ ಆಗ್ರಹಿಸಿ ಬುಧವಾರ ರೈತ ಸಂಘ ಕಲ್ಯಾಣ ಕರ್ನಾಟಕ ಹಾಗೂ ಹಸಿರು ಸೇನೆ ಮತ್ತು ಅಖಿಲ ಭಾರತ ಕೃಷಿ ಗ್ರಾಮೀಣ ಕಾರ್ಮಿಕರ ಸಂಘದಿಂದ ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಕೃಷಿ ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆಂಚಪ್ಪ ಹಿರೇಖೇಡ ಮಾತನಾಡಿ, 2014-15ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ ₹ 144 ಕೋಟಿ ಖರ್ಚು ಮಾಡಿ ಕನಕಗಿರಿ ಕ್ಷೇತ್ರಾದ್ಯಂತ ಕೆರೆ ತುಂಬುವ ಯೋಜನೆ ಪೂರ್ಣಗೊಳಿಸಿದೆ. ಯೋಜನೆ ಪೂರ್ಣಗೊಂಡು ಹತ್ತಾರು ವರ್ಷ ಕಳೆದಿವೆ. ಆದರೆ, ಈ ವರೆಗೂ ಲಾಯದುಣಸಿ ಕೆರೆಗೆ ನೀರು ತುಂಬಿಸದೆ ಈ ಭಾಗದ ಜನರಿಗೆ ಅನ್ಯಾಯ ಮಾಡಲಾಗಿದೆ. ಈ ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ರೈತಪರ ಸಂಘಟನೆಗಳು ಹಲವಾರು ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ ಎಂದರು.

ರೈತ ಮುಖಂಡ ಮರಿಯಪ್ಪ ಸಾಲೋಣಿ ಮಾತನಾಡಿ, ಕನಕಗಿರಿ ಭಾಗದ ರೈತರು ಸಾಕಷ್ಟು ಬಾರಿ ಶಾಸಕರು ಮತ್ತು ಸಚಿವರನ್ನು ಭೇಟಿಯಾಗಿ ಮೌಖಿಕವಾಗಿ ಲಾಯದುಣಸಿ ಕೆರೆಗೆ ನೀರು ಬಿಡಲು ಮನವಿ ಮಾಡಿದ್ದೇವೆ. ನೆಪ ಮಾತ್ರಕ್ಕೆ ಒಂದೆರಡು ದಿನ ಕೆರೆಗೆ ನೀರು ಬಿಟ್ಟು ಮತ್ತೆ ಬಂದ್ ಮಾಡಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಕೆರೆಗೆ ನೀರು ಹರಿದು ಬರದೆ ಇರುವುದರಿಂದ ಈ ಪ್ರದೇಶದ ಕೊಳವೆಬಾವಿಗಳ ನೀರಿನ ಮಟ್ಟ ಕುಸಿದಿದ್ದು ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಲಾಯದುಣಸಿ ಕೆರೆಗೆ ಈಗಾಗಲೇ ಆಲಮಟ್ಟಿ ಡ್ಯಾಮಿನಿಂದ ಪೈಪ್‌ಲೈನ್ ಮಾಡಲಾಗಿದ್ದು ಆ ನೀರು ಸಹ ಕೆರೆಗೆ ಬಿಟ್ಟಿಲ್ಲ. ಇತ್ತ ಮಳೆಯೂ ಕೈಕೊಟ್ಟಿದೆ. ರೈತರಿಗೆ ಅನುಕೂಲವಾಗುವಂತೆ ತುಂಗಭದ್ರಾ ಅಥವಾ ಆಲಮಟ್ಟಿ ನದಿಯಿಂದ ನೀರು ಹರಿಸಿ ಕೆರೆ ತುಂಬಿಸಬೇಕೆಂದು ಒತ್ತಾಯಿಸಿದರು.

ಸಣ್ಣ ನೀರಾವರಿ ಇಲಾಖೆಯ ಎಇಇ ಜಗನ್ನಾಥ ಜೊತಗುಂಡಗಿ ಮಾತನಾಡಿ, ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಮುಂದಿನ ವಾರದಲ್ಲಿ ನದಿ ನೀರು ಬಿಡಲಾಗುತ್ತಿದ್ದು, ನೀರಿನ ಪ್ರಮಾಣ ನೋಡಿಕೊಂಡು ಲಾಯದುಣಸಿ ಕೆರೆಗೆ ನೀರು ಬಿಡಲಾಗುವುದು. ಜು. 10ರ ನಂತರ ಕೃಷ್ಣ ಜಲ ಭಾಗ್ಯ ನಿಗಮದ ಪೈಪ್‌ಲೈನ್‌ ಮೂಲಕ ನೀರು ಹರಿಸುವ ಯೋಚನ ಇದೆ ಎಂದರು.

ರೈತ ಮುಖಂಡರಾದ ರಾಮಣ್ಣ ಜಾಡಿ, ಸಣ್ಣ ಹನುಮಂತ, ವಿರೂಪಣ್ಣ ಪೂಜಾರ, ಹೊಳಿಯಪ್ಪ ಲಾಯದುಣಸಿ, ಅಮರಯ್ಯಸ್ವಾಮಿ, ರಾಜಪ್ಪ ಲಾಯದುಣಸಿ, ರಾಮಣ್ಣ ಬಸಾಪುರ, ಬಾಳಪ್ಪ ಬಂಡಿಗೇರಿ, ಕೆರೆ ಹನುಮಪ್ಪ ಕಾರಟಗಿ ಸೇರಿದಂತೆ ಇತರರಿದ್ದರು.