ಆಲಮಟ್ಟಿ:ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿನ ನೀರಾವರಿಗಾಗಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಜು.28ರಿಂದ ನ.20ರವರೆಗೆ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಆಲಮಟ್ಟಿ:

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಮುಂಗಾರು ಹಂಗಾಮಿನ ನೀರಾವರಿಗಾಗಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ಜು.28ರಿಂದ ನ.20ರವರೆಗೆ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.

ನೀರಾವರಿ ಸಲಹಾ ಸಮಿತಿ (ಐಸಿಸಿ) ಪೂರ್ಣ ಪ್ರಮಾಣದಲ್ಲಿ ರಚನೆಯಾಗದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವರ ಅನುಮೋದನೆಯ ಮೇರೆಗೆ ಐಸಿಸಿ ಸದಸ್ಯ ಕಾರ್ಯದರ್ಶಿಯೂ ಆಗಿರುವ ಭೀಮರಾಯನಗುಡಿ ಕಾಲುವೆ ವಲಯದ ಮುಖ್ಯ ಎಂಜಿನಿಯರ್ ಅಭಿಮನ್ಯು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.

ಆಲಮಟ್ಟಿಯಲ್ಲಿ 97.27 ಟಿಎಂಸಿ ಮತ್ತು ನಾರಾಯಣಪುರದಲ್ಲಿ 19.32 ಟಿಎಂಸಿ ಸೇರಿ ಒಟ್ಟು 115.59 ಟಿಎಂಸಿ ಅಡಿ ಬಳಕೆಯೋಗ್ಯ ನೀರು ಸಂಗ್ರಹವಿದೆ. ಆಲಮಟ್ಟಿಗೆ 73,461 ಕ್ಯುಸೆಕ್ ಒಳಹರಿವು ಇದೆ.

ನೀರು ಬಿಡುವ ವೇಳಾಪಟ್ಟಿ: ಜು.28ರಿಂದ ಆ.10ರವರೆಗೆ 14 ದಿನ ನೀರು ಹರಿಸಲಾಗುವುದು. ನಂತರ 10 ದಿನ ಬಂದ್ ಮತ್ತು 14 ದಿನ ನೀರು ಹರಿಸುವ ವಾರಾಬಂಧಿ ಪದ್ಧತಿ ಜಾರಿಯಾಗಲಿದೆ. ಒಟ್ಟು 66 ದಿನ ನೀರು ಹರಿಸಿ, 50 ದಿನ ಕಾಲುವೆಗಳನ್ನು ಬಂದ್ ಇರಿಸಲಾಗುವುದು. ರೈತರ ಒತ್ತಾಯ ಮತ್ತು ಜನಪ್ರತಿನಿಧಿಗಳ ಮನವಿಯ ಹಿನ್ನೆಲೆಯಲ್ಲಿ ಕೈಗೊಂಡಿರುವ ಈ ನಿರ್ಧಾರದಿಂದ ಮುಂಗಾರು ಬೆಳೆಗಳಿಗೆ ನೀರಿನ ಭರವಸೆ ದೊರೆತಂತಾಗಿದೆ.

ನೀರು ಬಿಡುವ ದಿನಾಂಕ -ಒಟ್ಟು 66 ದಿನ:

1. ಜು.28 ರಿಂದ ಆ.10 ರವರೆಗೆ - 14 ದಿನ

2. ಆ.21 ರಿಂದ ಸೆ.3 ರವರೆಗೆ - 14 ದಿನ

3. ಸೆ.14 ರಿಂದ ಸೆ.27 ರವರೆಗೆ - 14 ದಿನ

4. ಅ.8 ರಿಂದ ಅ.21 ರವರೆಗೆ - 14 ದಿನ

5. ನ.1 ರಿಂದ ನ.10 ರವರೆಗೆ - 10 ದಿನ

ಗಮನಿಸಿ: ಆಲಮಟ್ಟಿ ಜಲಾಶಯದ ಒಳಹರಿವು 11,000 ಕ್ಯುಸೆಕ್‌ಗೂ ಅಧಿಕ ಇದ್ದರೆ ಕಾಲುವೆಗೆ ಯಾವುದೇ ವಾರಾಬಂಧಿ ಇಲ್ಲದೆ ನಿರಂತರ ನೀರು ಹರಿಯಲಿದೆ.

ಕಾಲುವೆ ಬಂದ್ ಇರುವ ಅವಧಿ - ಒಟ್ಟು 50 ದಿನ:

1. ಆ.11 ರಿಂದ ಆ.20 ರವರೆಗೆ - 10 ದಿನ

2. ಸೆ.4 ರಿಂದ ಸೆ.13 ರವರೆಗೆ - 10 ದಿನ

3. ಸೆ.28 ರಿಂದ ಅ.7 ರವರೆಗೆ - 10 ದಿನ

4. ಅ.22 ರಿಂದ ಅ.31 ರವರೆಗೆ - 10 ದಿನ

5. ನ.11 ರಿಂದ ನ.20 ರವರೆಗೆ - 10 ದಿನ