ತುಂಗಭದ್ರಾ ಎಡದಂಡೆ ಕಾಲುವೆಗೆ ಏಪ್ರಿಲ್‌ 20ರ ವರೆಗೆ ನೀರು ಹರಿಸಿ

| Published : Mar 20 2025, 01:15 AM IST

ತುಂಗಭದ್ರಾ ಎಡದಂಡೆ ಕಾಲುವೆಗೆ ಏಪ್ರಿಲ್‌ 20ರ ವರೆಗೆ ನೀರು ಹರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆಗೆ ಈಗಾಗಲೇ ರೈತರು ಭತ್ತ ನಾಟಿ ಮಾಡಿದ್ದು ಬೆಳೆ ನಿರ್ವಹಣೆಗೆ ಲಭ್ಯವಾಗಬೇಕಾಗಿದ್ದ ನೀರು ತಲುಪುತ್ತಿಲ್ಲ. ಕೂಡಲೇ ಕೊನೆ ಮತ್ತು ಕೆಳಭಾಗದ ಜಮೀನುಗಳಿಗೆ ವಿತರಣಾ ಮತ್ತು ಉಪಕಾಲುವೆಗಳಿಂದ ನೀರನ್ನು ಏ.೨೦ರ ವರೆಗೂ ಹರಿಸಬೇಕು.

ಕಾರಟಗಿ:

ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತ ಭತ್ತದ ಪೈರು ಉಳಿಸಲು ತುಂಗಭದ್ರಾ ಎಡದಂಡೆ ಕಾಲುವೆಗೆ ಏ. ೨೦ರ ವರೆಗೆ ೩೮೦೦ ಕ್ಯುಸೆಕ್‌ ನೀರು ಹರಿಸಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಬುಧವಾರ ನೀರು ಬಳಕೆದಾರರ ಸಂಘ ಹಾಗೂ ವಿವಿಧ ರೈತ ಸಂಘಗಳ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

ಬೇಸಿಗೆಗೆ ಈಗಾಗಲೇ ರೈತರು ಭತ್ತ ನಾಟಿ ಮಾಡಿದ್ದು ಬೆಳೆ ನಿರ್ವಹಣೆಗೆ ಲಭ್ಯವಾಗಬೇಕಾಗಿದ್ದ ನೀರು ತಲುಪುತ್ತಿಲ್ಲ. ಕೂಡಲೇ ಕೊನೆ ಮತ್ತು ಕೆಳಭಾಗದ ಜಮೀನುಗಳಿಗೆ ವಿತರಣಾ ಮತ್ತು ಉಪಕಾಲುವೆಗಳಿಂದ ನೀರನ್ನು ಏ.೨೦ರ ವರೆಗೂ ಹರಿಸಬೇಕೆಂದು ಒತ್ತಾಯಿಸಿ ಇಲ್ಲಿನ ನೀರಾವರಿ ಕಚೇರಿಯಿಂದ ನವಲಿ ವೃತ್ತದ ವರೆಗೆ ಬೃಹತ್ ಮೆರವಣಿಗೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು.

ಕೊನೆ ಭಾಗದಲ್ಲಿನ ರೈತರು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆಯಿಂದ ಹಾಗೂ ನೀರು ದೊರೆಯದ ಕಾರಣ ಬೆಳೆ ಒಣಗುತ್ತಿವೆ. ರೈತರ ಕಷ್ಟಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಬೆಳೆದ ಭತ್ತ ಮತ್ತು ಇನ್ನಿತರ ಬೆಳೆ ರೈತರ ಕೈಸೇರಬೇಕಾದರೆ ಏ. ೨೦ರ ವರೆಗೆ ಎಡದಂಡೆ ಕಾಲುವೆಗೆ ನೀರು ಹರಿಸಬೇಕು ಎಂದು ಘೋಷಣೆ ಕೂಗಿದರು.

ಈಗಾಗಲೇ ಜಿಲ್ಲೆಯ ಶಾಸಕರು ಹಾಗೂ ಸಂಸದರು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರ ಗಮನಕ್ಕೆ ತಂದಿದ್ದಾರೆ. ಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿನ ಲಭ್ಯವಿದೆ. ೬ ಟಿಎಂಸಿ ನೀರನ್ನು ತುಂಗಭದ್ರಾ ಜಲಾಶಯಕ್ಕೆ ಹರಿಸುವಂತೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶಗೌಡ ಒತ್ತಾಯಿಸಿದರು.

ಸರ್ಕಾರ ರೈತರ ಬೆಳೆಗೆ ಸಮಸ್ಯೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಜಲ ಸಂಪನ್ಮೂಲ ಇಲಾಖೆ ಸಚಿವರು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಅನ್ನದಾತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ರೈತ ಮುಖಂಡ ಶರಣಪ್ಪ ದೊಡ್ಡಮನಿ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಶರಣೇಗೌಡ ಮಾ.ಪಾಟೀಲ್, ದಶರಥರೆಡ್ಡಿ ಚೆನ್ನಳ್ಳಿ, ಮರಿಯಪ್ಪ ಸಾಲೋಣಿ, ಕೆ. ಶರಣಪ್ಪ, ನೀರಿಗಾಗಿ ಒತ್ತಾಯಿಸಿದರು.

ಅಚ್ಚುಕಟ್ಟು ಪ್ರದೇಶದ ಗಂಗಾವತಿ, ಕಾರಟಗಿ, ಸಿಂಧನೂರು, ಮಾನ್ವಿ, ಸಿರಿವಾರ, ಮಸ್ಕಿ ತಾಲೂಕುಗಳ ರೈತರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮೂಲಕ ಜಲ ಸಂಪನ್ಮೂಲ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ, ಯರಡೋಣ, ಕಿಂದಿ ಕ್ಯಾಂಪ್, ಚೆನ್ನಳ್ಳಿ, ಮುಕ್ಕುಂದ ನೀರು ಬಳಕೆದಾರರ ಸಂಘದ ಸದಸ್ಯರು ಸೇರಿದಂತೆ ರೈತ ಮುಖಂಡ ಚಾಮರಸ ಪಾಟೀಲ್, ಬಸವರಾಜ ಕುಲಕರ್ಣಿ, ಮಲ್ಲೇಶಪ್ಪ ಸಾಹುಕಾರ ಮುಕ್ಕುಂದ, ಬೋಳಾ ಶ್ರೀನಿವಾಸ್, ನಾಗನಗೌಡ, ನಾಗನಗೌಡ ಸಿದ್ರಾಂಪುರ, ಪ್ರಸಾದ್ ದೇವಿಕ್ಯಾಂಪ್, ಮೌನೇಶ್ ಕುರಿ, ಪರಮೇಶಗೌಡ ಸೇರಿ ವಿವಿಧ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ನೀರಾವರಿ ಇಲಾಖೆ ಅಧಿಕಾರಿಗಳಿಗೆ ಘೇರಾವ್

ರೈತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆ ಅಧಿಕಾರಿ ಕಿರಣ್ ಕುಮಾರ್ ಇವರ ವಾಹನಕ್ಕೆ ಪ್ರತಿಭಟನಾನಿರತ ರೈತರು ರೈತರು ಘೇರಾವ್ ಹಾಕಿದರು. ೩೧ನೇ ವಿತರಣಾ ಕಾಲುವೆ ಕೊನೆ ಭಾಗಕ್ಕೆ ಈವರಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ಪರಿಸ್ಥಿತಿ ಹೀಗಾದರೆ ಹೇಗೆ?, ಸಾವಿರಾರು ರು. ಖರ್ಚು ಮಾಡಿ ಬೆಳೆ ಬೆಳೆಯಲಾಗಿದೆ. ಅಕ್ರಮ ನೀರಾವರಿ ಹೆಚ್ಚಾಗಿದೆ. ಇದು ಹೀಗೆ ಮುಂದುವರೆದರೆ ನಮ್ಮ ಪರಿಸ್ಥಿತಿ ಏನು? ಮುಂದಿನ ದಿನಗಳಲ್ಲಿ ನೀರಾವರಿ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಬೇಕು. ರೈತರಿಗೆ ಸಮಸ್ಯೆ ಆಗದ ರೀತಿ ಸೂಕ್ತ ಕ್ರಮವಹಿಸಿ ಟೇಲೆಂಡ್ ಭಾಗಕ್ಕೂ ನೀರು ತಲುಪಿಸುವಂತೆ ಒತ್ತಾಯಿಸಿ ಘೇರಾವ್ ಹಾಕಿದರು. ಒಂದು ಹಂತಕ್ಕೆ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿತ್ತು. ಇದೇ ವೇಳೆ ಉಳಿದ ರೈತರನ್ನು ಸಮಾಧಾನ ಪಡಿಸಿದ ಬಳಿಕ ಪರಿಸ್ಥಿತಿ ತಿಳಿಯಲಾಯಿತು.