ಸಾರಾಂಶ
ಶಿರಸಿ: ತಾಲೂಕಿನ ಇಸಳೂರು ಗ್ರಾಪಂ ವ್ಯಾಪ್ತಿಯ ಸಣ್ಣಕೇರಿಯ ಪುರಾತನ ಇತಿಹಾಸ ಹೊಂದಿರುವ ೩ ಎಕರೆ ವಿಸ್ತೀರ್ಣದ ಕೆರೆ ಪುನಶ್ಚೇತನ ಕಾಮಗಾರಿಗೆ ಸೋಮವಾರ ಗಣ್ಯರ ಸಮ್ಮುಖದಲ್ಲಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಚಾಲನೆ ನೀಡಿದರು.
ಆನಂತರ ಮಾತನಾಡಿದ ಶ್ರೀನಿವಾಸ ಹೆಬ್ಬಾರ್, ನಗರದ ಪ್ರದೇಶದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ಪ್ರತಿ ಕಡೆಗಳಲ್ಲಿಯೂ ನೀರಿನ ಅಭಾವ ಕಾಡುತ್ತಿದ್ದು, ಕೆರೆ, ಬಾವಿ ಇದ್ದರೆ ಇಷ್ಟೊಂದು ಅಭಾವ ಇರುತ್ತಿರಲಿಲ್ಲ. ೨೦೧೭ ಸಹಾಯಕ ಆಯುಕ್ತರಾಗಿದ್ದ ರಾಜು ಮೊಗವೀರ ನೀರಿನ ಅಭಾವ ಮನಗಂಡು ಒಂದು ಸಂಘಟನೆ ಮಾಡಬೇಕೆಂದು ನಿರ್ಧರಿಸಿದ್ದರು. ಆಗ ಅವರ ನೇತೃತ್ವದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಅಸ್ತಿತ್ವಕ್ಕೆ ಬಂದಿದೆ. ಆನಂತರ ಸಾಕಷ್ಟು ಕೆರೆಗಳನ್ನು ಅಭಿವೃದ್ಧಿಪಡಿಸಲಾಯಿತು. ಈ ಸಂದರ್ಭದಲ್ಲಿ ರಾಜು ಮೊಗವೀರ ಅವರನ್ನು ನೆನಪು ಮಾಡಿಕೊಳ್ಳಬೇಕು ಎಂದರು.ಕೆರೆ ಅತಿಕ್ರಮಣ ಮಾಡುತ್ತಿದ್ದೇವೆ. ಜಲಮೂಲಗಳನ್ನು ಮುಚ್ಚಿ ಮನೆ ಕಟ್ಟುತ್ತಿದ್ದೇವೆ. ಇದರಿಂದ ನೀರಿನ ಅಭಾವ ಇನ್ನಷ್ಟು ತಲೆದೋರುತ್ತಿದೆ ಎಂದ ಅವರು, ನೀರಿನ ಬಾಟಲಿ ಕಂಪನಿಗಳು ಕೋಟ್ಯಂತರ ರು. ಗಳಿಸುತ್ತವೆ. ಆದರೆ ಕೆರೆ ಅಭಿವೃದ್ಧಿಯ ಬಗ್ಗೆ ಗಮನವಹಿಸುತ್ತಿಲ್ಲ. ಜಲಮೂಲಗಳನ್ನು ಸಂರಕ್ಷಿಸಿಕೊಂಡರೆ ಎಂದಿಗೂ ನೀರಿನ ತುಟಾಗ್ರತೆ ಎದುರಾಗುವುದಿಲ್ಲ. ಅಚ್ಚುಕಟ್ಟಾಗಿ ಅಭಿವೃದ್ಧಿ ಪಡಿಸುವುದು ನಮ್ಮ ಗುರಿ ಎಂದು ಹೇಳಿದರು.
ಜೀವಜಲ ಕಾರ್ಯಪಡೆ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ವಿ.ಪಿ. ಹೆಗಡೆ ವೈಶಾಲಿ ಮಾತನಾಡಿ, ಹಣ ಎಲ್ಲರ ಬಳಿ ಇರುತ್ತದೆ. ಆದರೆ ಅದನ್ನು ಸಮಾಜಕ್ಕೆ ವಿನಿಯೋಗಿಸುವ ಬುದ್ಧಿ ಇರುವುದಿಲ್ಲ. ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ತಮ್ಮ ಸ್ವಂತ ಖರ್ಚಿನಲ್ಲಿ ೨೪ನೆಯ ಕೆರೆ ಮಾಡುತ್ತಿದ್ದಾರೆ. ಅವರ ಕಾರ್ಯ ಇತರರಿಗೆ ಮಾದರಿ ಎಂದರು.ಜೀವಜಲ ಕಾರ್ಯಪಡೆ ಸದಸ್ಯ ಹಾಗೂ ಎಂಜಿನಿಯರ್ ಅನಿಲ ನಾಯ್ಕ ಮಾತನಾಡಿ, ೭ ವರ್ಷಗಳ ಹಿಂದೆ ಸ್ಥಾಪಿತವಾದ ಜೀವ ಜಲ ಕಾರ್ಯಪಡೆ ಶ್ರೀನಿವಾಸ ಹೆಬ್ಬಾರ ಮೂಲಕ ಅನೇಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ನಗರದ ಸುತ್ತಮುತ್ತಲಿನ ಕೆರೆ ಅಭಿವೃದ್ಧಿ ಮಾಡಿದ್ದರಿಂದ ಸುತ್ತಲಿನ ಬಾವಿಯಲ್ಲಿ ನೀರು ಇದೆ. ಜಲಮೂಲ ಸಂರಕ್ಷಿಸಲು ಜೀವಜಲ ಕಾರ್ಯಪಡೆಯು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು.
ಇಸಳೂರು ಗ್ರಾಪಂ ಸದಸ್ಯ ಪ್ರಸನ್ನ ಹೆಗಡೆ, ನವೀನ ಶೆಟ್ಟಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿದರು. ಊರಿನ ಪ್ರಮುಖರಾದ ನಾರಾಯಣ ಶೆಟ್ಟಿ, ಶಿವಾನಂದ ಭಟ್ಟ ಹಾಗೂ ನೂರಾರು ಸಾರ್ವಜನಿಕರು ಇದ್ದರು.ವೈಯಕ್ತಿಕ ಹಣದಿಂದ ಸಂಪಿನಕೆರೆ ಅಭಿವೃದ್ಧಿ ಮಾಡುತ್ತೇನೆ. ಅಭಿವೃದ್ಧಿ ಕಾರ್ಯಕ್ಕೆ ಅನುಮತಿ ನೀಡಲು ನಗರಸಭೆ ಬಳಿ ವಿನಂತಿಸಿಕೊಂಡರೂ, ಅನುಮತಿ ನೀಡುತ್ತಿಲ್ಲ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ ಕೆಲವರು ರಾಜಕೀಯ ಹಿತಾಸಕ್ತಿ ಮುಂದಿಟ್ಟುಕೊಂಡು ಕೆರೆ ಅಭಿವೃದ್ಧಿಗೆ ಅನುಮತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳುತ್ತಾರೆ.