ಸಾರಾಂಶ
ಹೊನ್ನಾವರ: ಸಿದ್ದಾಪುರ ಘಟ್ಟ ಪ್ರದೇಶಗಳಲ್ಲಿ ವ್ಯಾಪಕವಾದ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಗುಂಡಬಾಳ ನದಿಯಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು, ಗುರುವಾರ ಬೆಳಗ್ಗೆ ನದಿಯಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಳವಾಗಿದೆ. ಪರಿಣಾಮ ನದಿ ಪ್ರದೇಶದ ವ್ಯಾಪ್ತಿಯ ತೋಟ, ಗದ್ದೆ, ಮನೆಗಳಿಗೂ ನೀರು ನುಗ್ಗಿದೆ.
ಗುಂಡಿಬೈಲ್, ಚಿಕ್ಕನಕೋಡ, ಮುಟ್ಟಾ, ಹೆಬೈಲ್, ಕೆಂಚಗಾರ, ಗುಂಡಬಾಳ ದೇವಸ್ಥಾನ ಕೇರಿ, ಹಡಿನಬಾಳ, ಖರ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಥಗೇರಿ, ಕೂಡ್ಲ ನದಿ ತಟದ ಎಡಬಲ ದಂಡೆಯ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ತೀರಾ ತಗ್ಗು ಪ್ರದೇಶಗಳಲ್ಲಿನ ಮನೆಗೆ ನೀರು ಆವರಿಸಿದೆ. ದೋಣಿಯ ಮೂಲಕ ಜನ, ಜಾನುವಾರು ಸಾಗಾಟಕ್ಕೆ ತಾಲೂಕು ಆಡಳಿತ ಸಜ್ಜಾಗಿತ್ತು.ಕಾಳಜಿ ಕೇಂದ್ರಕ್ಕೆ ಜನರನ್ನು ಕರೆತಂದು, ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರದಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ. ನೋಡಲ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ನೆರೆ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಜನತೆ ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ. ಕೆಲವರು ಕಾಳಜಿ ಕೇಂದ್ರಕ್ಕೆ ತೆರಳದೆ ಮುಂಜಾಗ್ರತೆಯಿಂದ ಸ್ಥಳೀಯ ಸಂಬಂಧಿಗಳ ಮನೆಗೆ ತೆರಳಿದ್ದಾರೆ. ಕೆಲವೆಡೆ ರಾತ್ರಿಯಿಂದ ವಿದ್ಯುತ್ ಪೂರೈಕೆ ಇಲ್ಲದರಿಂದ ಮೊಬೈಲ್‌ಗಳಿಗೂ ಚಾರ್ಜ್ ಇಲ್ಲದೇ ನದಿತಟದ ನಿವಾಸಿಗಳ ಸಂಪರ್ಕಿಸುವುದು ಇತರರಿಗೆ ಕಷ್ಟಸಾಧ್ಯವಾಗಿದೆ.ಜಿಲ್ಲಾಧಿಕಾರಿ ಸೂಚನೆಯಂತೆ ನದಿ ಪಾತ್ರದ ಕೆಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಡಿಬೈಲ್ ನಂ. 1, ಹಿರಿಯ ಪ್ರಾಥಮಿಕ ಶಾಲೆ ಗುಂಡಿಬೈಲ್ ನಂ. 2, ಹೆಬೈಲ್ ಅಂಗನವಾಡಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಂಡಬಾಳ ನಂ. 1 ಶಾಲೆಗಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. 65 ಕುಟುಂಬದಿಂದ 149 ಜನರು ಕಾಳಜಿ ಕೇಂದ್ರದಲ್ಲಿದ್ದಾರೆ.
ಕಾಳಜಿ ಕೇಂದ್ರಕ್ಕೆ ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ, ತಹಸೀಲ್ದಾರ್ ರವಿರಾಜ ದೀಕ್ಷಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರೊಂದಿಗೆ ಎಸಿಯವರು ಮಾತನಾಡಿ, ಉಟೋಪಹಾರ, ಮಕ್ಕಳಿಗೆ ಅವಶ್ಯಕ ಆಹಾರ, ಬೆಡ್‌ಶೀಟ್ ಪೂರೈಸುತ್ತೇವೆ. ಯಾವುದೇ ಕಾರಣಕ್ಕೂ ಕಾಳಜಿಕೇಂದ್ರ ಬಿಟ್ಟು ತೆರಳಬೇಡಿ ಎಂದರು.ಕುತ್ತಿಗೆ ಮಟ್ಟದ ನೀರಿನಲ್ಲಿ ಹಾದು ಬಂದೆವು. ಕಾಲು ಜಾರುವ ಭಯ ಇತ್ತು ಎಂದು ವಿಮಲಾ ನಾಯ್ಕ ನೆರೆ ಉದ್ಭವಿಸಿದಾಗ ಆದ ಸಮಸ್ಯೆಯ ಬಗ್ಗೆ ವಿವರಿಸಿದರು. ನೆರೆ ಸಂತ್ರಸ್ತರಾದ ಶಿವಾನಂದ ನಾಯ್ಕ, ಪಾಂಡುರಂಗ ನಾಯ್ಕ, ಪ್ರವೀಣ ನಾಯ್ಕ, ಗೋಪಾಲ ನಾಯ್ಕ ಮಾತನಾಡಿ, 3- 4ದಶಕಗಳಿಂದಲೂ ಇದೇ ಸಮಸ್ಯೆ. ಸಚಿವರಾದವರು ಭೇಟಿ ನೀಡಿ ಭರವಸೆ ನೀಡುತ್ತಾರೆ. ನಂತರದಲ್ಲಿ ಏನು ವ್ಯವಸ್ಥೆ ಮಾಡುವುದಿಲ್ಲ ಎಂದರು.