ಹುಬ್ಬಳ್ಳಿ:

ಕುಡಿಯುವ ನೀರಿನ ಸಮಸ್ಯೆ, ರಸ್ತೆ ದುರಸ್ತಿ, ಸ್ವಚ್ಛತೆ ಕೊರತೆ, ಚರಂಡಿ ಅವ್ಯವಸ್ಥೆ, ಬೀದಿ ನಾಯಿ ಹಾವಳಿ, ಬೀದಿ ದೀಪಗಳ ಕೊರತೆ ಸೇರಿದಂತೆ ನಗರದ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮೇಯರ್ ದುರ್ಗಮ್ಮ ಬಿಜವಾಡ ಅವರ ಎದುರು ಅಳಲು ತೋಡಿಕೊಂಡರು.

ಹು-ಧಾ ಮಹಾನಗರ ಪಾಲಿಕೆ ಆವರಣದಲ್ಲಿ ಬುಧವಾರ ನಡೆದ ಮೇಯರ್ ಜೊತೆ ಮಾತುಕತೆ (ಫೋನ್-ಇನ್) ಕಾರ್ಯಕ್ರಮದಲ್ಲಿ 30 ಕರೆಗಳ ಮೂಲಕ ಒಟ್ಟು 46 ದೂರುಗಳು ದಾಖಲಾಗಿದ್ದು, ನಗರದ ವಿವಿಧ ವಾರ್ಡ್‌ಗಳ ಸಮಸ್ಯೆಗಳು ಒಂದೊಂದಾಗಿ ಬೆಳಕಿಗೆ ಬಂದವು.

ಶಾಂತಿನಿಕೇತನ ಕಾಲನಿಯ ನಾಗೇಶ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ. ಮಳೆಗಾಲದಲ್ಲಿಯೂ ಕುಡಿಯಲು ನೀರಿಗಾಗಿ ಪರದಾಡುವ ಸ್ಥಿತಿಯಿದೆ ಎಂದು ದೂರಿದರು.

ಪತೇಶ್ವರ ನಗರದ ನಿವಾಸಿಯೊಬ್ಬರು, 7 ದಿನಕ್ಕೊಮ್ಮೆ ಮಾತ್ರ ನೀರು ಬರುತ್ತಿದೆ. ಕೆಲವೆಡೆ ನಿರಂತರವಾಗಿ ನೀರು ಸರಬರಾಜಾಗುತ್ತಿದೆ. ಎಲ್ಲರಿಗೂ ಸಮಾನವಾಗಿ ನೀರು ವಿತರಿಸುವ ವ್ಯವಸ್ಥೆ ಜಾರಿಯಾಗಬೇಕು. ಜತೆಗೆ ವಾರ್ಡ್‌ನ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ತಕ್ಷಣ ದುರಸ್ತಿಗೊಳಿಸುವಂತೆ ಮನವಿ ಮಾಡಿದರು. ರವಿ ನಗರದ ವಿಜಯಾ ಎಂಬುವರು, ಬೀದಿ ನಾಯಿ ಹಾವಳಿ ಹಾಗೂ ಕಳ್ಳರ ಕಾಟ ಹೆಚ್ಚಾಗಿದೆ. ಮಹಿಳೆಯರು ಮತ್ತು ಮಕ್ಕಳು ರಾತ್ರಿ ಹೊರಗೆ ಓಡಾಡಲು ಭಯಪಡುವಂತಾಗಿದೆ. ಪಾಲಿಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.


ನಗರದ ವಿವಿಧ ಭಾಗಗಳ ನಿವಾಸಿಗಳು ಕಸದ ರಾಶಿ, ಸ್ವಚ್ಛತೆ ಇಲ್ಲದಿರುವುದು, ಮಳೆ ಅವಾಂತರ, ಬೀದಿ ದೀಪಗಳ ಸಮಸ್ಯೆ, ಖಾಲಿ ನಿವೇಶನಗಳಲ್ಲಿ ಕಸ ಮತ್ತು ಗಿಡ-ಗಂಟಿಗಳು ಬೆಳೆದು ಆರೋಗ್ಯ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ದೂರು ಸಲ್ಲಿಸಿದರು.

ಪರಿಹಾರಕ್ಕೆ ಆದ್ಯತೆ:

ಕಾರ್ಯಕ್ರಮದಲ್ಲಿ ಬಂದ 46 ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತ್ಯಾಜ್ಯ ವಿಲೇವಾರಿ, ರಸ್ತೆ ದುರಸ್ತಿ, ಶುದ್ಧ ಕುಡಿಯುವ ನೀರು ಹಾಗೂ ಇತರೆ ಮೂಲಸೌಕರ್ಯ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು.

ಈ ವೇಳೆ ಉಪಮೇಯರ್‌ ರತ್ನಾಬಾಯಿ ನಾಝರೆ, ಪಾಲಿಕೆ ಉಪಆಯುಕ್ತ ವಿಜಯಕುಮಾರ ಸೇರಿದಂತೆ ವಿವಿಧ ಅಧಿಕಾರಿಗಳಿದ್ದರು.ಲ್ಯಾಂಡ್‌ಲೈನ್ ನಾಪತ್ತೆ; 25 ನಿಮಿಷ ತಡವಾಗಿ ಆರಂಭ

ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ''''''''ಮೇಯರ್ ಜೊತೆ ಮಾತುಕತೆ'''''''' ಕಾರ್ಯಕ್ರಮ ಲ್ಯಾಂಡ್‌ಲೈನ್ ದೂರವಾಣಿಗಳು ಲಭ್ಯವಾಗದ ಕಾರಣ 11.25ಕ್ಕೆ ಆರಂಭವಾಯಿತು. ಕೊನೆಗೆ ಮೊಬೈಲ್ ಫೋನ್‌ ಮೂಲಕ ಕಾರ್ಯಕ್ರಮ ನಡೆಸಲಾಯಿತು. ಈ ಬಗ್ಗೆ ಸಾರ್ವಜನಿಕರ ಕ್ಷಮೆ ಕೇಳಿದ ಮೇಯರ್, "ಹಿಂದಿನ ಕಾರ್ಯಕ್ರಮದ ಬಳಿಕ ಲ್ಯಾಂಡ್‌ಲೈನ್ ಉಪಕರಣ ತೆಗೆದುಕೊಂಡು ಹೋಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವು ಪತ್ತೆಯಾಗಿಲ್ಲ. ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.