8 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ: ಸಿಇಒ ಪಾಂಡೆ

| Published : Mar 20 2024, 01:17 AM IST

8 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ: ಸಿಇಒ ಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ 17 ಗ್ರಾಪಂ ವ್ಯಾಪ್ತಿಯ 8 ಗ್ರಾಮಗಳಿಗೆ ಈಗ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ.

ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಸೂಕ್ತ ಕ್ರಮಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೀಗಾಗಿ, ಕುಡಿಯುವ ನೀರಿಗೆ ಆಸರೆಯಾಗಿದ್ದ ಬೋರ್‌ವೆಲ್‌ಗಳು ಬರಿದಾಗಿವೆ. ಜಿಲ್ಲೆಯ 17 ಗ್ರಾಪಂ ವ್ಯಾಪ್ತಿಯ 8 ಗ್ರಾಮಗಳಿಗೆ ಈಗ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಹೇಳಿದ್ದಾರೆ.

ಜಿಪಂ ಜೆ.ಎಚ್. ಪಟೇಲ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಸೂಕ್ತ ಕ್ರಮವಹಿಸಲಾಗುವುದು ಎಂದರು.

ಜಿಲ್ಲೆಯ 7 ತಾಲೂಕುಗಳು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ನಾಲ್ಕು ತಾಲೂಕುಗಳ 17 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 33 ಸಮಸ್ಯಾತ್ಮಕ ಗ್ರಾಮಗಳಿಗೆ ಹಾಗೂ ಇತರ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು ಕುಕನೂರು ತಾಲೂಕುಗಳ ಗ್ರಾಪಂಗಳ ಪೈಕಿ 17 ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ 8 ಗ್ರಾಮಗಳಲ್ಲಿ 10 ಟ್ಯಾಂಕರ್‌ಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇತರೆ 25 ಗ್ರಾಮಗಳಿಗೆ 28 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ಗಂಗಾವತಿ ತಾಲೂಕಿನ ಗ್ರಾಮಗಳಲ್ಲಿರುವ ಕೆರೆಗಳನ್ನು ತುಂಗಭದ್ರಾ ನದಿ ನೀರಿನ ಮೂಲಕ ತುಂಬಿಸಲಾಗಿದ್ದು, ಪ್ರಸ್ತುತ ಹಂತದಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆ ಇಲ್ಲ. ಕನಕಗಿರಿ ಮತ್ತು ಕಾರಟಗಿ ತಾಲೂಕುಗಳಲ್ಲಿ ಸಹ ಸದ್ಯ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಕನಕಗಿರಿ ತಾಲೂಕಿನ ಗ್ರಾಮಗಳಲ್ಲಿ 26 ಬೋರ್‌ವೆಲ್‌ಗಳನ್ನು ಫ್ಲಷಿಂಗ್ ಮಾಡಲು ಗುರುತಿಸಿದ್ದ, ಬೋರ್‌ವೆಲ್‌ ಫ್ಲಷಿಂಗ್ ಮಾಡುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ಸಿಇಒ ಅವರು ಮಾಹಿತಿ ನೀಡಿದರು.

ಬರಪೀಡಿತ ತಾಲೂಕುಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಪ್ರತಿ ತಾಲೂಕಿಗೆ ₹25 ಲಕ್ಷಗಳಂತೆ ಒಟ್ಟು 7 ತಾಲೂಕುಗಳಿಗೆ ₹175 ಲಕ್ಷ ಹಾಗೂ ತುರ್ತು ಕುಡಿಯುವ ನೀರಿನ ಕಾಮಗಾರಿಗಾಗಿ ಕೊಪ್ಪಳ ಜಿಲ್ಲೆಗೆ ₹140 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಬರ ನಿರ್ವಹಣೆಗಾಗಿ ಡಿಸಿ ಪಿಡಿ ಖಾತೆಗೆ ₹16 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪೂರೈಸಲಾಗುತ್ತಿರುವ ಕುಡಿಯುವ ನೀರಿನ ಪರೀಕ್ಷೆಯನ್ನು ನಿಯಮಿತವಾಗಿ ಕೈಗೊಳ್ಳಲು ಸಂಬಂಧಿಸಿದ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ನೀರಿನ ಪರೀಕ್ಷೆಗಾಗಿ ಕೊಪ್ಪಳ ಹಾಗೂ ಕುಷ್ಟಗಿಯಲ್ಲಿ 2 ಪ್ರಯೋಗಾಲಯಗಳಿದ್ದು, ನೀರು ಬಳಕೆಗೆ ಯೋಗ್ಯವಿದ್ದರೆ ಮಾತ್ರ ನೀರು ಪೂರೈಸಲಾಗುತ್ತದೆ ಎಂದು ಅವರು ತಿಳಿಸಿದರು.

ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ನಿಯಮಿತವಾಗಿ ಟಾಸ್ಕ್‌ಫೋರ್ಸ್ ಸಮಿತಿ ಸಭೆಗಳನ್ನು ಆಯೋಜಿಸಿ ಜನವಸತಿ ಪ್ರದೇಶಗಳಲ್ಲಿಯ ಕುಡಿಯುವ ನೀರಿನ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಕ್ತ ನಿರ್ದೇಶನ ನೀಡಲಾಗಿದೆ. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ, ಗ್ರಾಮ ಪಂಚಾಯತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕುಡಿಯುವ ನೀರಿನ ಸಹಾಯವಾಣಿ ತೆರೆಯಲಾಗಿದ್ದು, ಸಹಾಯವಾಣಿಗಳ ಸಂಖ್ಯೆಗಳನ್ನು ಜಿಲ್ಲೆಯಲ್ಲಿ ಪ್ರಚುರಪಡಿಸಲಾಗಿದೆ. ಸಹಾಯವಾಣಿಗಳ ಮೂಲಕ ದಾಖಲಾದ ದೂರುಗಳನ್ನು 24 ಗಂಟೆಯೊಳಗಾಗಿ ಪರಿಹರಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ 6366 ಖಾಸಗಿ ಬೋರ್‌ವೆಲ್‌ಗಳಿದ್ದು, ಇದರಲ್ಲಿ 898 ಬೋರ್‌ವೆಲ್‌ಗಳನ್ನು ಗುರುತಿಸಿ, ಬಾಡಿಗೆ ಪಡೆಯಲು ಕ್ರಮ ವಹಿಸಲಾಗುತ್ತಿದೆ. 150 ಬೋರ್‌ವೆಲ್‌ಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಖಾಸಗಿ ಬೋರ್‌ವೆಲ್‌ಗಳ ಬಗ್ಗೆ ಮಾಹಿತಿ ನೀಡಿದರು.34 ವಾರಗಳ ವರೆಗೆ ಮೇವು ಲಭ್ಯ:

ಕೊಪ್ಪಳ ಜಿಲ್ಲೆಯಲ್ಲಿ 2,94,880 ದನ ಮತ್ತು ಎಮ್ಮೆಗಳು, 7,97,945 ಕುರಿ-ಮೇಕೆಗಳಿವೆ. 5,10,954.04 ಟನ್ ಮೇವು ಲಭ್ಯವಿದ್ದು, ಈ ಮೇವು 34 ವಾರಗಳ ವರೆಗೆ ಬಳಕೆಯಾಗಲಿದೆ ಎಂದು ಸಿಇಒ ತಿಳಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಡಿ. ಮಂಜುನಾಥ ಉಪಸ್ಥಿತರಿದ್ದರು.