ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಸರಕಾರದ ಬಹುಗ್ರಾಮ ಯೋಜನೆಯಡಿ ಮೂರು ತಾಲೂಕುಗಳ ೧೬ ಗ್ರಾಮಗಳಿಗೆ ೨೦೭ ಕೋಟಿ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಒದಗಿಸುದಾಗಿ ಗ್ರಾಮೀಣ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್ ಎಸ್.ಎಸ್. ಹುಕ್ಕೇರಿ ತಿಳಿಸಿದರು.ಇಲ್ಲಿನ ಗ್ರಾ.ಪಂ ಕಚೇರಿಯಲ್ಲಿ ಅಧ್ಯಕ್ಷೆ ಲಲಿತಾ ಉಪಸ್ಥಿತಿಯಲ್ಲಿ ನಡೆದ ಬಹುಗ್ರಾಮ ಯೋಜನೆಯ ನೀರು ಪೂರೈಕೆ ಕುರಿತ ಸಭೆಯಲ್ಲಿ ಅವರು ಯೋಜನೆಯ ವಿವರಣೆ ನಿಡಿದರು. ಪುತ್ತೂರು ತಾಲೂಕಿನ ಬಜತ್ತೂರು, ಉಪ್ಪಿನಂಗಡಿ, ಹಿರೇಬಂಡಾಡಿ, ಬೆಳ್ತಂಗಡಿ ತಾಲೂಕಿನ ಕೊಕ್ಕಡ ನಿಡ್ಲೆ, ಪಟ್ರಮೆ, ಕಳಂಜ, ಕಡಬ ತಾಲೂಕಿನ ಸವಣೂರು, ಬೆಳಂದೂರು, ಪೆರಾಬೆ, ಅಲಂಕಾರು, ರಾಮಕುಂಜ, ಕೊಯಿಲ, ಗೋಳಿತೊಟ್ಟು , ನೆಲ್ಯಾಡಿ ಸೇರಿದಂತೆ ೧೬ ಗ್ರಾಮಗಳಿಗೆ ನೀರು ಪೂರೈಕೆಗೆ ಸರಕಾರದಿಂದ ೨೦೭ ಕೋಟಿ ಮಂಜೂರುಗೊಂಡಿರುವುದಾಗಿ ತಿಳಿಸಿದರು.ಯೋಜನೆಯ ನೀಲ ನಕ್ಷೆಯ ಪ್ರಕಾರ ಬಜತ್ತೂರು ಗ್ರಾಮದಲ್ಲಿ ನೀರಿನ ಟ್ಯಾಂಕ್ ರಚಿಸಿ ಅಲ್ಲಿಂದ ಉಪ್ಪಿನಂಗಡಿ ಗ್ರಾಮದ ಮಠ , ಹಿರೇಬಂಡಾಡಿ ಗ್ರಾಮದಿಂದ ರಾಮನಗರ ಲಕ್ಷ್ಮೀನಗರಕ್ಕೆ ಶುದ್ಧನೀರು ಒದಗಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯಿತಿ ಸದಸ್ಯ ಯು.ಟಿ. ಮಹಮ್ಮದ್ ತೌಸಿಫ್, ಈಗಾಗಲೇ ಕೇಂದ್ರ ಸರಕಾರದ ಜಲಜೀವನ್ ಯೋಜನೆಯಲ್ಲಿ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆದಿದೆ ಎಂದು ವ್ಯಾಪಕ ದೂರುಗಳು ಕೇಳಿ ಬಂದಿದೆ. ನೂತನವಾಗಿ ರಚಿಸಿದ ಟ್ಯಾಂಕ್‌ಗಳ ಸೋರಿಕೆ , ಭೂಮಿ ಮೇಲ್ಭಾಗದಲ್ಲೇ ಪೈಪು ಅಳವಡಿಸಿರುವುದು, ನೀರು ಬಾರದಿದ್ದರೂ ಮೀಟರ್ ತಿರುಗುವುದು ಮೊದಲಾದ ದೂರು ಕೇಳಿ ಬರುತ್ತಿದೆ. ಈ ಮಧ್ಯೆ ಹೊಸ ಯೋಜನೆ ಜಾರಿಗೆ ತಂದು ಮತ್ತಷ್ಟು ಸಮಸ್ಯೆ ಉಂಟಾಗದಿರಲಿ. ಸಮರ್ಪಕವಾಗಿ ಅನುಷ್ಠಾನಿಸುವಂತೆ ತಿಳಿಸಿದರು. ಗ್ರಾ.ಪಂ. ಸದಸ್ಯ ಅಬ್ದುಲ್ ರಶೀದ್ ಬಹು ಗ್ರಾಮ ಯೋಜನೆ ಅನುಷ್ಠಾನಗೊಳಿಸುವ ಸಮಯದಲ್ಲಿ ಗುಣಮಟ್ಟದ ಖಾತ್ರಿ, ತತ್ ಸಂಬಂಧಿತ ಐದು ವರ್ಷಗಳ ನಿರ್ವಹಣೆಯನ್ನು ಗುತ್ತಿಗೆದಾರರೇ ನಿಭಾಯಿಸಿದರೆ ಮಾತ್ರ ಯೋಜನೆ ಒದಗಿಸಿ . ಮನಸೋಇಚ್ಛೆ ಕಾಮಗಾರಿ ಮಾಡಿ ಕಣ್ಮರೆಯಾಗುವುದಾದರೆ ಕಾಟಚಾರದ ಕಾಮಗಾರಿ ನಮ್ಮ ಗ್ರಾಮಕ್ಕೆ ಅಗತ್ಯವಿಲ್ಲ ಎಂದರು.
ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀಪ ಪ್ರಭು, ನೀರು ನೈರ್ಮಲ್ಯ ಸಮಿತಿಯ ಸಿದ್ದೀಕ್ ಕೆಂಪಿ, ಬಿಲ್ ಕಲೆಕ್ಟರ್ ಇಸಾಕ್, ಉಮೇಶ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.