ಹೊಸಪೇಟೆಯಲ್ಲಿ ಖಾಸಗಿ ಟ್ಯಾಂಕರ್‌ಗೆ ನೀರು ಪೂರೈಕೆಗೆ ಮತ್ತೆ ತಡೆ

| Published : May 30 2024, 12:46 AM IST

ಹೊಸಪೇಟೆಯಲ್ಲಿ ಖಾಸಗಿ ಟ್ಯಾಂಕರ್‌ಗೆ ನೀರು ಪೂರೈಕೆಗೆ ಮತ್ತೆ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಟ್ಯಾಂಕರ್‌ಗೆ ನೀರು ಪೂರೈಕೆ ಮಾಡುವ ವಿಚಾರಕ್ಕೆ ಸಂಬಂಧಿಸಿ ತುರ್ತು ಸಭೆಯ ವರದಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಿದೆ.

ಹೊಸಪೇಟೆ: ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಖಾಸಗಿ ಟ್ಯಾಂಕರ್‌ಗಳಿಗೆ ನೀರು ಪೂರೈಕೆ ಮಾಡುವುದನ್ನು ನಗರಸಭೆ ಪುನಃ ನಿಲ್ಲಿಸಿದ ಹಿನ್ನೆಲೆಯಲ್ಲಿ ನಗರಸಭೆಯ ಕೆಲವು ಸದಸ್ಯರು ಪೌರಾಯಕ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆಯಿತು.ನಗರಸಭೆ ಅಧ್ಯಕ್ಷೆ ಎ.ಲತಾ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ತುರ್ತು ಸಭೆಯಲ್ಲಿ ಖಾಸಗಿ ಟ್ಯಾಂಕರ್‌ಗಳಿಗೆ ನೀರು ಪೂರೈಕೆಗೆ ಅವಕಾಶ ನೀಡಬೇಕು ಎಂಬ ಸದಸ್ಯರ ಒಮ್ಮತದ ನಿರ್ಣಯಕ್ಕೆ ಠರಾವು ಪಾಸ್ ಮಾಡಿ, ವರದಿಯನ್ನು ಜಿಲ್ಲಾಧಿಕಾರಿ ಅನುಮೋದನೆಗೆ ಕಳಹಿಸಿಕೊಡಲಾಗಿದೆ. ಸಭೆಯ ನಿರ್ಣಯದಂತೆ ಖಾಸಗಿ ಟ್ಯಾಂಕರ್‌ಗಳಿಗೆ ನೀರು ಬಿಡುವುದನ್ನು ನಗರಸಭೆ ಮುಂದುವರಿಸಿತ್ತು. ಆದರೆ, ಪುನಃ ಟ್ಯಾಂಕರ್‌ಗೆ ನೀರು ಪೂರೈಕೆ ನಿಲ್ಲಿಸಿದ ಹಿನ್ನೆಲೆಯಲ್ಲಿ ಕೆಂಡಾಮಂಡಲರಾದ ನಗರಸಭೆ ಉಪಾಧ್ಯಕ್ಷ ಶೇಕ್‌ಶಾವಲಿ, ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಕಮಟಿಗಿ ಜಗದೀಶ್, ಗುಜ್ಜಲ ರಾಘವೇಂದ್ರ, ರೂಪೇಶ್ ಸೇರಿ ಇತರರು ಪೌರಾಯುಕ್ತರೊಂದಿಗೆ ವಾಗ್ವಾದಕ್ಕೆ ಇಳಿದರು. ಜಿಲ್ಲಾಧಿಕಾರಿ ಅನುಮೋದನೆ ಕಾಯದೇ ಟ್ಯಾಂಕರ್‌ಗೆ ನೀರು ಪೂರೈಕೆಗೆ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಪೌರಾಯುಕ್ತ ಸಿ.ಚಂದ್ರಪ್ಪ, ಖಾಸಗಿ ಟ್ಯಾಂಕರ್‌ಗಳಿಗೆ ನೀರು ಪೂರೈಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತುರ್ತು ಸಭೆಯ ವರದಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಿದೆ. ಪ್ರಸ್ತುತ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಅಲ್ಲಿಯವರೆಗೆ ಕಾಯಬೇಕು. ನಗರಸಭೆ ಕಳೆದ ೪೫ ದಿನಗಳಿಂದ ಖಾಸಗಿ ವಾಹನಗಳನ್ನು ಬಾಡಿಗೆ ಪಡೆದು, ನಗರದ ಕೆಲ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡಿಸುತ್ತಿದೆ. ಈ ನಡುವೆ ನಗರಸಭೆ ಯಾವುದೇ ಕ್ರಮ ಕೈಗೊಳ್ಳಲು ಬರುವುದಿಲ್ಲ. ನಗರದಲ್ಲಿ ನೀರಿನ ಸಮಸ್ಯೆ ಇದ್ದರೆ ನಗರಸಭೆ ಟ್ಯಾಂಕರ್ ಮೂಲಕವೇ ನೀರು ಪೂರೈಕೆ ಮಾಡಲು ಕ್ರಮ ವಹಿಸಲಾಗುವುದು. ಆದರೆ, ಖಾಸಗಿ ಟ್ಯಾಂಕರ್‌ಗಳಿಗೆ ನೀರು ಪೂರೈಕೆಗೆ ಅವಕಾಶ ನೀಡುವುದಿಲ್ಲ ಎಂದರು.

ಮಾಜಿ ಶಾಸಕ ಆನಂದ ಸಿಂಗ್ ಅವರು ಸಮಾಜ ಸೇವೆ ಮೂಲಕ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು. ಈ ವೇಳೆ ಆರಂಭದಲ್ಲಿ ಮಾಡಿದ್ದು, ಕ್ಷೇತ್ರದಲ್ಲಿ ಜನರಿಗೆ ಉಚಿತ ನೀರು ಕೊಡುವ ಯೋಜನೆಯನ್ನು ಹಾಕಿಕೊಂಡರು. ಖಾಸಗಿ ಟ್ಯಾಂಕರ್ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉಚಿತ ನೀರು ಪೂರೈಕೆ ಮಾಡುತ್ತಿದ್ದರು. ಟ್ಯಾಂಕರ್ ಮೇಲೆ ಆನಂದ ಸಿಂಗ್ ಭಾವಚಿತ್ರ ಇರುವ ಫೋಟೋ ಇರುತ್ತಿತ್ತು. ಕಳೆದ ವಿಧಾನ ಸಭೆಯಲ್ಲಿ ಆನಂದ ಸಿಂಗ್ ಅವರ ಪುತ್ರ ಸಿದ್ಧಾರ್ಥ್ ಸಿಂಗ್ ಗವಿಯಪ್ಪನವರ ವಿರುದ್ಧ ಪರಾಜಯಗೊಂಡರು. ಈಗ ಕ್ಷೇತ್ರದಲ್ಲಿ ಸಿದ್ಧಾರ್ಥ್ ಸಿಂಗ್ ಫೋಟೋ ಹೊಂದಿರುವ ಎರಡು ಟ್ಯಾಂಕರ್‌ಗಳ ಮೂಲಕ ಕೆಲವೆಡೆ ಉಚಿತ ನೀರು ಪೂರೈಕೆ ಕಾರ್ಯ ನಡೆಯುತ್ತಿದೆ. ಇದರ ಕ್ರೆಡಿಟ್ ತಪ್ಪಿಸಲು ಎಂದು ಶಾಸಕ ಗವಿಯಪ್ಪನವರು, ಪೌರಾಯುಕ್ತರ ಮೂಲಕ ಟ್ಯಾಂಕರ್‌ಗಳಿಗೆ ನೀರು ಪೂರೈಕೆ ಮಾಡುವುದನ್ನು ನಿಲ್ಲಿಸಿದ್ದಾರೆ ಎಂಬುದು ಕೆಲ ನಗರಸಭೆ ಸದಸ್ಯರ ಆರೋಪ.

ಇದನ್ನು ಅಲ್ಲೆಗಳೆದಿರುವ ಶಾಸಕ ಗವಿಯಪ್ಪ, ಬೇಸಿಗೆ ಹಂಗಾಮಿನಲ್ಲಿ ಇಡೀ ೨೪ ಸಾವಿರ ಎಕರೆ ಪ್ರದೇಶದ ಭೂಮಿಗೆ ನೀರು ಹರಿಸಿ ರೈತರನ್ನು ಉಳಿಸಿರುವೆ. ಆನಂದ ಸಿಂಗ್ ಅವರ ಎರಡು ಟ್ಯಾಂಕರ್‌ಗೆ ನಾನೇಕೆ ಮಾತನಾಡಲಿ? ಎಂದಿದ್ದಾರೆ. ಒಟ್ಟಾರೆ, ನೀರಿನ ವಿಚಾರವಾಗಿ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಹಗ್ಗಜಗ್ಗಾಟ ಮುಂದುವರೆದಿದೆ.

ಖಾಸಗಿ ಟ್ಯಾಂಕರ್‌ಗಳಿಗೆ ನೀರು ಪೂರೈಕೆ ವಿಚಾರದಲ್ಲಿ ನಗರಸಭೆ ತುರ್ತುಸಭೆಯ ವರದಿ ಇನ್ನು ನನ್ನ ಕೈಸೇರಿಲ್ಲ. ವರದಿ ಕೈ ಸೇರಿದ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್.

ಮಾಜಿ ಸಚಿವ ಆನಂದ ಸಿಂಗ್ ಅವರಿಗೆ ಸೇರಿದ ೨ ಟ್ಯಾಂಕರ್‌ಗಳಿಗೆ ನೀರು ಪೂರೈಕೆಗೆ ಕೆಲ ಸದಸ್ಯರು ಒತ್ತಾಯ ಮಾಡುತ್ತಿದ್ದಾರೆ. ಈ ವಿಚಾರ ಕುರಿತು ಈಗಾಗಲೇ ತುರ್ತು ಸಭೆ ನಡೆಸಿ, ವರದಿಯನ್ನು ಜಿಲ್ಲಾಧಿಕಾರಿ ಅನುಮೋದನೆಗೆ ಕಳುಹಿಸಲಾಗಿದೆ ಎನ್ನುತ್ತಾರೆ ಹೊಸಪೇಟೆ ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ.