ನೀರು ಸಂಗ್ರಹಿಸುವ ಟ್ಯಾಂಕರ್‌ಗಳು ಸಂಪೂರ್ಣ ಹಾಳಾಗಿದ್ದು ಸುತ್ತಮುತ್ತ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಟ್ಯಾಂಕ್‌ನಲ್ಲಿ ಯಾರಾದರು ಬಿದ್ದು ಮೃತಪಟ್ಟರೆ ನಶೆಯಲ್ಲಿ ನೀರಿನ ಏನಾದರೂ ಬೆರೆಸಿದರೂ ಜನರಿಗೆ ತೊಂದರೆಯಾಗಲಿದೆ.
ಹುಬ್ಬಳ್ಳಿ:
ಮಹಾನಗರಕ್ಕೆ ನೀರು ಸರಬರಾಜು ಮಾಡಲು ಸಂಗ್ರಹಿಸುವ ನೀರಿನ ಬೃಹತ್ ಟ್ಯಾಂಕ್ ಹಾಗೂ ಅದರ ಸುತ್ತಲಿನ ಪ್ರದೇಶ ಅಭಿವೃದ್ಧಿಪಡಿಸಿ ನಿರ್ವಹಿಸಬೇಕೆಂದು ಪಾಲಿಕೆ ಸದಸ್ಯರು ಆಗ್ರಹಿಸಿದರು.ಸಾಮಾನ್ಯ ಸಭೆಯಲ್ಲಿ ವೀರಣ್ಣ ಸವಡಿ, ನೀರು ಸಂಗ್ರಹಿಸುವ ಟ್ಯಾಂಕರ್‌ಗಳು ಸಂಪೂರ್ಣ ಹಾಳಾಗಿದ್ದು ಸುತ್ತಮುತ್ತ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಟ್ಯಾಂಕ್‌ನಲ್ಲಿ ಯಾರಾದರು ಬಿದ್ದು ಮೃತಪಟ್ಟರೆ ನಶೆಯಲ್ಲಿ ನೀರಿನ ಏನಾದರೂ ಬೆರೆಸಿದರೂ ಜನರಿಗೆ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.ಟ್ಯಾಂಕರ್ ಸುತ್ತಲು ಕಾಂಪೌಂಡ್ ನಿರ್ಮಿಸಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಪೊಲೀಸ್ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಸಭಾನಾಯಕ ಈರೇಶ ಅಂಟಗೇರಿ, ತಿಪ್ಪಣ್ಣ ಮಜ್ಜಗಿ, ಇಮ್ರಾನ್ ಎಲಿಗಾರ್, ಸುವರ್ಣ ಕಲ್ಲಕುಂಟ್ಲಾ ಸೇರಿದಂತೆ ಅನೇಕ ಸದಸ್ಯರು ಧ್ವನಿಗೂಡಿಸಿದರು. ಇದಕ್ಕೆ ಸ್ಪಂದಿಸಿದ ಮೇಯರ್, ಟ್ಯಾಂಕರ್ ನಿರ್ವಹಣೆ ಬಗ್ಗೆ ಸಂಪೂರ್ಣ ವರದಿ ಸಲ್ಲಿಸಲು ಸೂಚಿಸಿದರು. ತೋಟಗಾರಿಕೆ ಇಲಾಖೆಯಿಂದ ಸುತ್ತಲು ಹಸಿರುಕರಣ ಮಾಡಿದರೆ ಎಲ್ ಆ್ಯಂಡ್ ಟಿ ಕಂಪನಿ ಸರಿಯಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಫುಟ್‌ಪಾತ್ ಅತಿಕ್ರಮಣ:ನಗರದಲ್ಲಿ ಫುಟ್‌ಪಾತ್ ಅತಿಕ್ರಮಣದಿಂದ ಜನರು ಬೇಸತ್ತಿದ್ದಾರೆ. ದುರ್ಗದ ಬೈಲ್, ಗೋಕುಲ ರಸ್ತೆ, ಕೊಪ್ಪಿಕರ ರಸ್ತೆ, ಕೇಶ್ವಾಪುರ ಸೇರಿದಂತೆ ಅನೇಕ ಕಡೆ ಪಾದಚಾರಿ ರಸ್ತೆ ಅತಿಕ್ರಮಣ ಮಾಡಲಾಗಿದೆ. ಮಾರುಕಟ್ಟೆ ಪ್ರದೇಶದಲ್ಲಿ ಅಲೆದಾಡಲು ಜಾಗವಿಲ್ಲವಾಗಿದೆ. ತಕ್ಷಣ ಪಾಲಿಕೆ ಅಧಿಕಾರಿಗಳು 12 ವಲಯದಲ್ಲಿ ಪಾದಚಾರಿ ರಸ್ತೆ ತೆರವು ಕಾರ್ಯಚರಣೆ ಮಾಡಬೇಕು ಎಂದು ಸದಸ್ಯ ಶಿವು ಮೆಣಸಿನಕಾಯಿ ಆಗ್ರಹಿಸಿದರು. ಮೇಯರ್ ಮಾತನಾಡಿ, ಪಾದಚಾರಿ ರಸ್ತೆ ತೆರವಿಗೆ ಅಧಿಕಾರಿಗಳಿಗೆ ಸೂಚಿಸಿದರು.
ತಾಂತ್ರಿಕ ಸಮಿತಿ:ಇಲ್ಲಿಯ ಅಮರಗೋಳದಲ್ಲಿ ಕೈಗಾರಿಕಾಭಿವೃದ್ಧಿಗೆ ಮೀಸಲಿಡಲಾಗಿದ್ದ ಆರ್ಯಭಟ್ ಐಟಿ ಪಾರ್ಕ್ ಸದ್ಯದ ಸ್ಥಿತಿ, ಯಾವ ಕಂಪನಿ ಬಂದರೆ ಜನರಿಗೆ ಅನುಕೂಲ ಹಾಗೂ ಯಾವ ರೀತಿ ಜಾಗ ವಿತರಿಸಬೇಕು ಎಂಬುವುದರ ಕುರಿತು ಹೊಸ ಸದನ ಸಮಿತಿ ಮಾಡಿ ವರದಿ ನೀಡಲು ಮೇಯರ್ ಜ್ಯೋತಿ ಪಾಟೀಲ ಆಯುಕ್ತ ಡಾ. ರುದ್ರೇಶ ಘಾಳಿ ಅವರಿಗೆ ಸೂಚಿಸಿದರು.
ತಾಂತ್ರಿಕ ಸಮಿತಿ ಮಾಡಲಾಗಿದೆ ಎಂದು ಸಭೆಯಲ್ಲಿ ರುದ್ರೇಶ ತಿಳಿಸಿದಾಗ, ತಾಂತ್ರಿಕ ಸಮಿತಿಯಲ್ಲಿ ಐಟಿಗೆ ಸಂಬಂಧಪಟ್ಟವರು ಇರಲಿ. ಪಾಲಿಕೆಯ ಕೆಲ ಸದಸ್ಯರನ್ನು ಸೇರಿಸಿ ಎಂದು ಸವಡಿ ಸಲಹೆ ನೀಡಿದರು. ಬಳಿಕ ಅದಕ್ಕೂ ಮುನ್ನ ಸದನ ಸಮಿತಿ ಮಾಡಿ ಸದ್ಯದ ಪರಿಸ್ಥಿತಿ ಏನಾಗಿದೆ ಎಂಬುದರ ವರದಿ ನೀಡುವಂತೆ ಮೇಯರ್ ತಿಳಿಸಿದರು.ಆಸ್ತಿ ಕರ ಜೂ. ೩೦ರ ವರೆಗೆ ವಿಸ್ತರಣೆ
ಆಸ್ತಿ ಕರ ಸಂದಾಯ ಮಾಡಲು ರಿಯಾಯಿತಿ ನೀಡುವ ಅವಧಿ ವಿಸ್ತರಿಸಬೇಕು ಎಂದು ಸಭಾ ನಾಯಕ ಈರೇಶ ಅಂಚಗೇರಿ ಪ್ರಸ್ತಾಪಿಸಿದರು. ಆಸ್ತಿ ತೆರಿಗೆ ಸಾರ್ವಜನಿಕರು ಸಂದಾಯ ಮಾಡುವುದು ಇನ್ನೂ ಬಾಕಿ ಇದೆ. ರಿಯಾಯಿತಿ ದರದಲ್ಲಿ ಆಸ್ತಿಕರ ಪಾವತಿಸಲು ಮೇ ೩೦ಕ್ಕೆ ಕೊನೆಯ ದಿನವಾಗಿದೆ. ಅದನ್ನು ಜೂನ್ 30ರ ವರೆಗೆ ವಿಸ್ತರಿಸಬೇಕು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಜೂ. 30ರ ವರೆಗೆ ವಿಸ್ತರಿಸಲು ಅಧಿಕಾರಿಗಳಿಗೆ ಸೂಚಿಸಿದರು.