ರಾಮನಗರ: ನೀರಿನ ದರ ಹೆಚ್ಚಳ ವಿರುದ್ಧ ಸಿಡಿದೆದ್ದು ಬೀದಿಗಿಳಿದ ಮಹಿಳೆಯರು ಮಂಗಳವಾರ ರಾಮನಗರದ ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು

ರಾಮನಗರ: ನೀರಿನ ದರ ಹೆಚ್ಚಳ ವಿರುದ್ಧ ಸಿಡಿದೆದ್ದು ಬೀದಿಗಿಳಿದ ಮಹಿಳೆಯರು ಮಂಗಳವಾರ ರಾಮನಗರದ ಜಲಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ನಗರದ ವಿವಿಧ ಬಡಾವಣೆಗಳ ಮಹಿಳೆಯರು ಜಲ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿದರಲ್ಲದೆ ನಮಗೆ ನೀರಿನ ಮೀಟರ್ ಬೇಡವೇ ಬೇಡ ಮೀಟರ್ ಕಿತ್ತೊಗೆಯುತ್ತೇವೆ, ಬಡವರಾದ ನಾವು ಬದುಕುವುದು ಹೇಗೆ, ಹೊಸ ಬಿಲ್ ನಾವು ಕಟ್ಟುವುದಿಲ್ಲ. ಮೀಟರ್ ಬೇಡ ತೆಗೆದುಹಾಕಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಈ ವೇಳೆ ಮಾತನಾಡಿದ ನರಸೀಬಾಯಿ, ರಾಮನಗರದಲ್ಲಿ ಮನೆಗಳಿಗೆ ಸರಬರಾಜಾಗುವ ನೀರಿನ ಬಿಲ್ 250 ಕಟ್ಟುತ್ತಿದ್ದೇವೊ. ಈಗ ಕಾವೇರಿ ನೀರನ್ನು ದಿನದ 24 ಗಂಟೆ ಸರಬರಾಜು ಮಾಡುತ್ತೇವೆ ಎಂದು ಮೀಟರ್ ಹಾಕಿದ ಮೇಲೆ 3 ರಿಂದ 4 ಸಾವಿರ ಬಿಲ್ ಬರುತ್ತಿದೆ. ಅದರಲ್ಲೂ 24 ಗಂಟೆ ನೀರು ಬರುವುದಿಲ್ಲ. ಕೇವಲ ಎರಡು ಗಂಟೆ ಮಾತ್ರ ನೀರು ಬರುತ್ತದೆ. ಹೆಚ್ಚಿನ ನೀರು ರಸ್ತೆಯಲ್ಲಿ ಪೋಲಾಗುತ್ತಿದೆ. ಅದಕ್ಕೆ ಮಾತ್ರ ಇವರಲ್ಲಿ ಲೆಕ್ಕವಿಲ್ಲ ಎಂದು ಕಿಡಿಕಾರಿದರು.

ಜಲಮಂಡಳಿ ಬಡವರಿಂದ ನೀರಿಗೆ ದುಪ್ಪಟ್ಟು ದರ ವಸೂಲಿ ಮಾಡುತ್ತಿದೆ. ಕೂಡಲೇ ಮೀಟರ್ ಹಾಕಿರುವುದನ್ನು ಅವರೇ ತೆರವು ಮಾಡಬೇಕು. ನೀರಿಗೆ ಹೆಚ್ಚಿನ ಬಿಲ್ ನೀಡಿದಲ್ಲಿ ಮತ್ತಷ್ಟು ಉಗ್ರ ಹೋರಾಟವನ್ನು ಜಲಮಂಡಳಿ ಮಹಿಳೆಯರಿಂದ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮತ್ತೊಬ್ಬ ಮಹಿಳೆ ಎನ್. ಗಿರಿಜಮ್ಮ ಮಾತನಾಡಿ, ಜಲ ಮಂಡಲಿ ಮನಸೋ ಇಚ್ಛೆ ನೀರಿನ ದರ ಹೆಚ್ಚಳ ಮಾಡಿದೆ. ಬಡವರು ಮತ್ತು ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರಿಗೆ ನೀರಿನ ಬಿಲ್ ಪಾವತಿಸುವುದು ಕಷ್ಟಕರವಾಗಿದೆ. ಕೂಡಲೇ ಮೀಟರ್ ಗಳನ್ನು ತೆಗೆದು ಮೊದಲಿನಂತೆಯೇ ಕನಿಷ್ಠ ನೀರಿನ ದರವನ್ನು ನಿಗದಿ ಪಡಿಸಬೇಕು. ಇಲ್ಲದಿದ್ದರೆ ಜಲಮಂಡಳಿ ವಿರುದ್ಧ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ ಪೆಕ್ಟರ್ ತನ್ವೀರ್ ರವರು, ಮಹಿಳೆಯರ ಸಮಸ್ಯೆಯನ್ನು ಜಲಮಂಡಳಿ ಇಇ ಪುಟ್ಟಯ್ಯ ಅವರ ಗಮನಕ್ಕೆ ತಂದರು. ಆನಂತರ ಸ್ಥಳಕ್ಕೆ ಬಂದ ಜೆಇ ಶಿವಕುಮಾರ್, ಸಮಸ್ಯೆ ಕೇಳಿ ನಿಮ್ಮ ನಿಮ್ಮ ಮನೆ ತೋರಿಸಿ ಮೀಟರ್ ಚೆಕ್ ಮಾಡುತ್ತೇವೆ. ಹಾಗೇನಿದ್ದರೂ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.ಆನಂತರ ಮಹಿಳೆಯರು ಅಧಿಕಾರಿಗಳನ್ನು ನೀರಿನ ಮೀಟರ್ ಗಳನ್ನು ಪರಿಶೀಲಿಸಲು ಕರೆದೋಯ್ದರು.

ಪ್ರತಿಭಟನೆಯಲ್ಲಿ ಎನ್. ಮಹದೇವರಾವ್, ಚೇತನ್, ಎಸ್. ಅನಿತಾ, ಎಂ. ಸುಷ್ಮಾ, ಪದ್ಮಾವತಿ, ಅರ್ಚನಾ ಬಾಯಿ, ಸುಮ, ಕಾಮಾಕ್ಷಮ್ಮ, ಎನ್. ರಾಧಾ, ಶ್ಯಾಮಲಾ, ಸುಮಾ, ಪಾರ್ವತಮ್ಮ, ಶಂಕರ್, ಮಹೇಶ್, ಅನಂತರಾಮು, ಎ.ಎನ್. ನರಸಿಂಹಮೂರ್ತಿ, ಶಾರದಾಬಾಯಿ, ಎನ್. ಭವಾನಿ, ಮಮತ, ಎನ್. ಸತೀಶ್, ಮಹದೇವಮ್ಮ, ರಾಮು, ಚಂದ್ರಬಾಯಿ, ನಿರ್ಮಲಾ, ಚಂಪಕಾ ಮತ್ತಿತರರು ಭಾಗವಹಿಸಿದ್ದರು.

ಕೋಟ್ ........

ನಗರಸಭೆಯಲ್ಲಿ ಗೃಹ, ಗೃಹೇತರ ಹಾಗೂ ವಾಣಿಜ್ಯ ಬಳಕೆ ನೀರಿನ ಮಾಸಿಕ ದರವನ್ನು ಶೇಕಡ 60ರಷ್ಟು ಹೆಚ್ಚಿಸುವ ತೀರ್ಮಾನ ಮಾಡುವಾಗ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ವಿರೋಧ ಮಾಡಲೇ ಇಲ್ಲ. ಸರ್ವಾಧಿಕಾರಿ ಧೋರಣೆಗೆ ಸದಸ್ಯರು ಕಟ್ಟು ಬಿದ್ದ ಪರಿಣಾಮ ಈಗ ನಾಗರೀಕರು ತೊಂದರೆ ಅನುಭವಿಸುವಂತಾಗಿದೆ. ಜನ ಪರ ಆಡಳಿತ ಎಂದು ಹೇಳಿಕೊಂಡು ಅಧಿಕಾರ ನಡೆಸಿದವರು, ಜನರ ಮೇಲೆಯೇ ಬೆಟ್ಟದಷ್ಟು ಹೊರೆ ಹೆಚ್ಚಿಸಿ ಹೋಗಿದ್ದಾರೆ.

-ಬೈರೇಗೌಡ, ಮಾಜಿ ಸದಸ್ಯರು, ನಗರಸಭೆ, ರಾಮನಗರ.

24ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ಜಲ ಮಂಡಳಿ ಕಚೇರಿ ಎದುರು ಮಹಿಳೆಯರು ಪ್ರತಿಭಟನೆ ನಡೆಸಿದರು.