ಸಾರಾಂಶ
ಶಿಕಾರಿಪುರ: ತಾಲೂಕಿನ ಎಲ್ಲ ಹೋಬಳಿಗೆ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗಿದ್ದು, ಕೂಡಲೇ ತಾಳಗುಂದ, ಉಡಗಣಿ, ಹೊಸೂರು, ಕಸಬಾ ಹೋಬಳಿಯ ಕೆರೆಗಳಿಗೆ ನೀರನ್ನು ತುಂಬಿಸಿದಲ್ಲಿ ಮಾತ್ರ ಬೇಸಿಗೆಯಲ್ಲಿ ಕೊಳವೆ ಬಾವಿಗಳು ಅಂತರ್ಜಲದಿಂದ ಸಮೃದ್ಧವಾಗಲಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ತುರ್ತಾಗಿ ಗಮನಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ ತಿಳಿಸಿದರು.
ಗುರುವಾರ ಪಟ್ಟಣದ ನೀರಾವರಿ ಇಲಾಖೆ ಕಚೇರಿ ಎದುರು ಕೆರೆಗಳಿಗೆ ಏತ ನೀರಾವರಿ ಮೂಲಕ ಕೂಡಲೇ ನೀರು ಹಾಯಿಸುವಂತೆ ಆಗ್ರಹಿಸಿ ನಡೆದ ರೈತರ ಪ್ರತಿಭಟನೆಯಲ್ಲಿ ಮಾತನಾಡಿದರು.ಕಳೆದ ವರ್ಷ ಬರಗಾಲವಿದ್ದು ಈ ಬಾರಿ ಉತ್ತಮ ಮಳೆಯಾಗಿದೆ, ಆದರೆ ಕೆರೆಗಳು ಮಾತ್ರ ನೀರಿಲ್ಲದೆ ಬರಿದಾಗುತ್ತಿವೆ. ಈ ಸಂದರ್ಭದಲ್ಲಿ ತುಂಗಭದ್ರ ನದಿಯಲ್ಲಿ ನೀರು ಯಥೇಚ್ಚವಾಗಿ ಹರಿಯುತ್ತಿದ್ದು, ನೂತನವಾಗಿ ನಿರ್ಮಿಸಿರುವ ಲಿಫ್ಟ್ ಇರಿಗೇಶನ್ (ಏತ ನೀರಾವರಿ ಯೋಜನೆಯ) ಮೂಲಕ ನೀರನ್ನು ಕೆರೆಗಳಿಗೆ ಹರಿಸಿ ಮರು ತುಂಬಿಸಬೇಕು. ಇದರಿಂದಾಗಿ ಕೊಳವೆ ಬಾವಿಗಳಲ್ಲಿನ ಅಂತರ್ಜಲ ಸಮೃದ್ಧವಾಗಲಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದೆ ರೈತರ ಬದುಕು ಹಸನಾಗಲಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ಕೂಡಲೇ ಗಮನಹರಿಸಬೇಕು ಎಂದು ಆಗ್ರಹಿಸಿದರು. ಹತ್ತು ದಿನಗಳ ಒಳಗಾಗಿ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳದೆ ಹೋದಲ್ಲಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡು ಜನ, ಜಾನುವಾರುಗಳ ಜೊತೆಗೆ ಆಗಮಿಸಿ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ಕಸಬಾ ಹೋಬಳಿಯ ಕಾಳೇನಹಳ್ಳಿ ಲಿಫ್ಟ್ ಇರಿಗೇಶನ್‌ನ ವಿದ್ಯುತ್ ಬಿಲ್ ಬಾಕಿ ಇದ್ದು, ಇದುವರೆಗೂ ಪಾವತಿಸಿಲ್ಲ. ಈ ಬಗ್ಗೆ ಕೂಡಲೇ ಗಮನಹರಿಸಿ ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸಿ ಎಂದು ಒತ್ತಾಯಿಸಿದರು. ಬಳಿಕ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಣ್ಣ ಗೌಡರು, ತಾಲೂಕು ಅಧ್ಯಕ್ಷ ರಾಜಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜಣ್ಣ, ಉಪಾಧ್ಯಕ್ಷ ಪ್ರದೀಪ್, ಮುಖಂಡ ವೀರೇಶ್, ಹನುಮಂತರಾವ್, ಶಿವಯೋಗಿ, ರಾಜು.ಪಿ, ಯೋಗೀಶ್, ಸಂತೋಷ್, ಬಸವರಾಜ್, ಮಹೇಶಪ್ಪ ಮತ್ತಿತರರು ಹಾಜರಿದ್ದರು.