ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ನೀರಿನ ಭವಣೆ ನಿವಾರಿಸಲು ಫೆಬ್ರುವರಿ ಮೊದಲ ವಾರದಲ್ಲಿ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಅಂದಾಜು ೧೭೫ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಜನರಿಗೆ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಭವಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಆಲಮಟ್ಟಿ ಜಲಾಶಯದಿಂದ ಅವಳಿ ಜಿಲ್ಲೆಯಲ್ಲಿರುವ ಎಲ್ಲ ಕೆರೆಗಳಿಗೆ ನೀರು ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಕೊಲ್ಹಾರ, ಬಸವನಬಾಗೇವಾಡಿ, ನಿಡಗುಂದಿ ತಾಲೂಕುಗಳು ಬರಗಾಲಕ್ಕೆ ಒಳಗಾಗಿರುವುದರಿಂದಾಗಿ ತೀವ್ರ ಕುಡಿಯುವ ನೀರಿನ ತೊಂದರೆ ಉಂಟಾಗಿರುತ್ತದೆ. ತಾಲೂಕುಗಳಲ್ಲಿ ಜನ-ಜಾನುವಾರುಗಳಿಗೆ ತುರ್ತಾಗಿ ಕುಡಿಯುವ ನೀರನ್ನು ಒದಗಿಸಬೇಕಾಗಿದೆ. ಮುಳವಾಡ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೊಲ್ಹಾರ, ನಿಡಗುಂದಿ ಮತ್ತು ಬಸವನಬಾಗೇವಾಡಿ ತಾಲೂಕುಗಳ ರೈತರು ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಂಬಂಧ ಮತ್ತು ಕೆರೆಗಳನ್ನು ತುಂಬಿಸುವ ಸಂಬಂಧ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸುತ್ತಿದ್ದಾರೆ. ಅವರು ಯಾವುದೇ ಕಾನೂನು ಕೈಗೆ ತೆಗೆದುಕೊಳ್ಳದೇ ಸಂಯಮದಿಂದ ಇರಬೇಕು ಎಂದು ಮನವಿ ಮಾಡಿದರು.ಈಗಾಗಲೇ ಕೃಷ್ಣಾ ಭಾಗ್ಯ ಜಲ ನಿಗಮದಿಂದ ೨೦೨೩-೨೪ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಣೆಕಟ್ಟುಗಳ ವ್ಯಾಪ್ತಿಯಲ್ಲಿ ಬರುವ ನೀರಾವರಿ ಯೋಜನೆಗಳಾದ ನಾರಾಯಣಪುರ ಎಡದಂಡೆ ಹಾಗೂ ಬಲದಂಡೆ ಮತ್ತು ಆಲಮಟ್ಟಿ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ರೈತರ ಅನುಕೂಲಕ್ಕಾಗಿ ಮೆಣಸಿನಕಾಯಿ ಹಾಗೂ ಬಾಕಿ ಉಳಿದಿರುವ ಬೆಳೆಗಳನ್ನು ಸಂರಕ್ಷಿಸುವ ಸಲುವಾಗಿ ೨.೭೫ ಟಿಎಂಸಿ ನೀರನ್ನು ಜ.೬ ರಂದು ಕೈಗೊಂಡಿರುವ ನಿಗಮದ ನಿರ್ಣಯದಂತೆ ನೀರನ್ನು ಬಿಡಲಾಗಿದೆ ಎಂದು ತಿಳಿಸಿದರು.ಕೋಟ್...
ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಣಯವಾದ್ದಂತೆ ಅವಳಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಭವಣೆ ನಿವಾರಿಸಲು ಕೆರೆಗಳಿಗೆ ಜಲಾಶಯದಿಂದ ನೀರು ತುಂಬಿಸಲಾಗುವುದು. ಕೆರೆ ತುಂಬುವ ಯೋಜನೆಗೋಸ್ಕರ ೬ ಟಿಎಂಸಿ ನೀರನ್ನು ನಿಗದಿಪಡಿಸಿದ್ದು. ಫೆಬ್ರುವರಿ ಮೊದಲ ವಾರದಲ್ಲಿ ೧.೫ ಟಿಎಂಸಿ ನೀರನ್ನು ಕೆರೆಗಳಿಗೆ ಬಿಡಲಾಗುವುದು. ಜನರು ಆತಂಕ ಪಡಬಾರದು.ಶಿವಾನಂದ ಪಾಟೀಲ, ಸಚಿವರು.