ಮತ್ತೆ ತಮಿಳುನಾಡಿಗೆ ನೀರು: ಕಕಜವೇ ಖಂಡನೆ
KannadaprabhaNewsNetwork | Published : Nov 03 2023, 12:30 AM IST
ಮತ್ತೆ ತಮಿಳುನಾಡಿಗೆ ನೀರು: ಕಕಜವೇ ಖಂಡನೆ
ಸಾರಾಂಶ
ಚನ್ನಪಟ್ಟಣ: ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕುಡಿಯುವ ನೀರಿಗೂ ತಾತ್ಪಾರ್ಯ ಉಂಟಾಗಿರುವ ಹೊತ್ತಿನಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಮತ್ತೆ 15 ದಿನ ನೀರು ಹರಿಸುವಂತೆ ಆದೇಶಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಚನ್ನಪಟ್ಟಣ: ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ಕುಡಿಯುವ ನೀರಿಗೂ ತಾತ್ಪಾರ್ಯ ಉಂಟಾಗಿರುವ ಹೊತ್ತಿನಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಮತ್ತೆ 15 ದಿನ ನೀರು ಹರಿಸುವಂತೆ ಆದೇಶಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಗರದ ಕಾವೇರಿ ಸರ್ಕಲ್‌ನಲ್ಲಿ ನಡೆಸುತ್ತಿರುವ 100 ದಿನಗಳ ಪ್ರತಿಜ್ಞೆಯ ಹೋರಾಟದ 29ನೇ ದಿನದ ಪ್ರತಿಭಟನೆಯಲ್ಲಿನ ಭಾಗಿಯಾಗಿ ಅವರು ಮಾತನಾಡಿದರು. ಮಳೆಯ ಅಭಾವದಿಂದ ರಾಜ್ಯದ ಜಲಾಶಯಗಳು ಸಂಪೂರ್ಣ ಖಾಲಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಹ ಮೂರನೇ ಬೆಳೆಗೆ ತಮಿಳುನಾಡಿಗೆ ಮತ್ತೆ ೧೫ದಿನಗಳ ಕಾಲ 2600 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿರುವುದು ಸರಿಯಲ್ಲ. ಇಲ್ಲಿನ ಜನರಿಗೆ ಕುಡಿಯುವ ನೀರಿಗೂ ಸಮಸ್ಯೆಯಾಗಿರುವ ಹೊತ್ತಿನಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಹೇಗೆ ಎಂದು ಪ್ರಶ್ನಿಸಿದರು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಅನುಮಾನ ಕಾಡುತ್ತಿದೆ. ರಾಜಕೀಯ ಪಕ್ಷಗಳು ನಾಡು, ನುಡಿ, ಜಲದ ವಿಚಾರ ಬಂದಾಗ ರಾಜಕಾರಣ ಮಾಡುವುದನ್ನು ಬಿಟ್ಟು ಒಂದಾಗಿ ಹೋರಾಟ ಮಾಡಬೇಕು. ತಮ್ಮ ರಾಜಕೀಯಕ್ಕಿಂತ ರಾಜ್ಯದ ಹಿತ ಕಾಪಾಡಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ರಾಜ್ಯ ಸರ್ಕಾರವು ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜೊತೆಗೆ ಮುಂದೆ ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಗೆ ಶೀಘ್ರವೇ ಅಡಿಗಲ್ಲು ಹಾಕಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ , ರಾಜ್ಯ ಉಪಾಧ್ಯಕ್ಷ ರಂಜಿತ್ ಗೌಡ, ಮತ್ತೀಕೆರೆ ವಿಎಸ್‌ಎಸ್‌ನ ಮಾಜಿ ಅಧ್ಯಕ್ಷ ರಮೇಶ್ ಹೊಟ್ಟಿಗನಹೊಸಹಳ್ಳಿ, ತಾಲೂಕು ಗೌರವಾಧ್ಯಕ್ಷ ಚಿಕ್ಕಣ್ಣಪ್ಪ, ರಮೇಶ್, ಪುಟ್ಟಪ್ಪಾಜಿ, ಆಟೋಘಟಕದ ಸಿದ್ದಪ್ಪಾಜಿ, ಮಂಜು, ಪುನೀತ್ ಇತರರಿದ್ದರು. ಪೊಟೋ೨ಸಿಪಿಟಿ೧: ಚನ್ನಪಟ್ಟಣ ಕಾವೇರಿ ಸರ್ಕಲ್‌ನಲ್ಲಿ ಕಕಜವೇ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.