ಕೆ.ಆರ್.ಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು ಅಧಿಕಾರಕ್ಕೆ ಅಂಟಿಕೊಂಡಿದೆ. ರೈತರ ಹಿತಾಸಕ್ತಿ ಬೇಕಾಗಿಲ್ಲ, ಬೇಕಿರುವುದೊಂದೇ ತಮಿಳುನಾಡಿನ ರೈತರ ಹಿತ. ಕರ್ನಾಟಕ ಜನರಿಗೆ ಮೋಸ ಮಾಡಿ ತಮಿಳುನಾಡಿಗೆ ನೀರು ಹರಿಸುವುದು ಯಾವ ಪುರುಷಾರ್ಥಕ್ಕೆ? ಸರ್ಕಾರವನ್ನು ಆಗ್ರಹಿಸಲು ಈ ಪಟಾಪಟ್ಟಿ ಚಡ್ಡಿ ಹಾಕಿಕೊಂಡು ಬಾರುಕೋಲು ಚಳವಳಿ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ತಮಿಳುನಾಡಿಗೆ ನೀರು ಹರಿಸುವುದು ಮುಂದುವರಿದರೆ ಪರಿಣಾಮಕಾರಿಯಾಗಿ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರನ್ನು ಹರಿಸಲಾಗುತ್ತಿದೆ ಎಂದು ಆರೋಪಿಸಿ ಕನ್ನಡ ಸೇನೆ ಸಂಘಟನೆ ಕಾರ್ಯಕರ್ತರು ನಗರದ ಜೆ.ಸಿ.ವೃತ್ತದಲ್ಲಿ ಪಟಾಪಟ್ಟಿ ಚಡ್ಡಿ ಧರಿಸಿ ಬಾರುಕೋಲು ಚಳವಳಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್ ನೇತೃತ್ವದಲ್ಲಿ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಜೆ.ಸಿ.ವೃತ್ತದವರೆಗೂ ಪಟಾಪಟ್ಟಿ ಚಡ್ಡಿ ಧರಿಸಿಕೊಂಡು, ಬಾರುಕೋಲು ಬೀಸುತ್ತಾ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸುವಂತೆ ಘೋಷಣೆ ಕೂಗಿದರು.
ರಾಜ್ಯ ಸರ್ಕಾರ ನೀರು ಹರಿಸುವುದಿಲ್ಲವೆಂದು ಹೇಳಿ ನಿರಂತರವಾಗಿ ನೀರು ಹರಿಸುತ್ತಿದೆ. ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದೇ ರೀತಿ ನೀರು ಹರಿಸಿದರೆ ಕೆಆರ್‌ಎಸ್ ಅಣೆಕಟ್ಟೆ ಬರಿದಾಗುತ್ತದೆ. ನೀರು ಹರಿಸಲ್ಲ ಎಂದು ನೀರು ಬಿಟ್ಟು ಜನರನ್ನು ದಾರಿ ತಪ್ಪಿಸುತ್ತಿರುವ ಸರ್ಕಾರದ ನಡೆ ಖಂಡನೀಯವಾಗಿದೆ ಎಂದು ಕಿಡಿಕಾರಿದರು.ತಮಿಳುನಾಡು ಮುಖ್ಯಮಂತ್ರಿ ವಿಜಯ್ ಹಾಗೂ ಸ್ಟ್ಯಾಲಿನ್ ಓಲೈಕೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಯಾವುದೇ ಸರ್ಕಾರ ಬರಲಿ, ಮೊದಲು ತಮಿಳುನಾಡಿಗೆ ನೀರು ಹರಿಸುತ್ತದೆ. ಇದು ಯಾವ ನ್ಯಾಯ? ನಮ್ಮ ಜಿಲ್ಲೆಯ ಸಂಸದ ಮತ್ತು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಕಾವೇರಿ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ. ಉಸ್ತುವಾರಿ ಸಚಿವರು ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆ.ಆರ್.ಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು ಅಧಿಕಾರಕ್ಕೆ ಅಂಟಿಕೊಂಡಿದೆ. ರೈತರ ಹಿತಾಸಕ್ತಿ ಬೇಕಾಗಿಲ್ಲ, ಬೇಕಿರುವುದೊಂದೇ ತಮಿಳುನಾಡಿನ ರೈತರ ಹಿತ. ಕರ್ನಾಟಕ ಜನರಿಗೆ ಮೋಸ ಮಾಡಿ ತಮಿಳುನಾಡಿಗೆ ನೀರು ಹರಿಸುವುದು ಯಾವ ಪುರುಷಾರ್ಥಕ್ಕೆ? ಸರ್ಕಾರವನ್ನು ಆಗ್ರಹಿಸಲು ಈ ಪಟಾಪಟ್ಟಿ ಚಡ್ಡಿ ಹಾಕಿಕೊಂಡು ಬಾರುಕೋಲು ಚಳವಳಿ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ತಮಿಳುನಾಡಿಗೆ ನೀರು ಹರಿಸುವುದು ಮುಂದುವರಿದರೆ ಪರಿಣಾಮಕಾರಿಯಾಗಿ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಶೋಭಾ, ಸೌಭಾಗ್ಯ, ರವಿ, ನಾಗೇಂದ್ರ ಭಾಗವಹಿಸಿದ್ದರು.