ಇಂದಿನಿಂದ ವೇದಾವತಿ, ಸುವರ್ಣಮುಖಿ ನದಿಗೆ ನೀರು

| Published : Mar 22 2024, 01:11 AM IST

ಸಾರಾಂಶ

ವಾಣಿ ವಿಲಾಸ ಜಲಾಶಯದಿಂದ ವೇದಾವತಿ ಹಾಗೂ ಸುವರ್ಣಮುಖಿ ನದಿಗೆ ಮಾ.22ರಿಂದ ನೀರು ಹರಿಯಲಿದ್ದು, ಪ್ರತಿ ದಿನ 650 ಕ್ಯೂಸೆಕ್ಸ್‌ನಂತೆ ಒಂದೂವರೆ ತಿಂಗಳ ಕಾಲ ನೀರು ಹರಿಸಲು ಆದೇಶಿಸಲಾಗಿದೆ.

ಹಿರಿಯೂರು: ವಾಣಿ ವಿಲಾಸ ಜಲಾಶಯದಿಂದ ವೇದಾವತಿ ಹಾಗೂ ಸುವರ್ಣಮುಖಿ ನದಿಗೆ ಮಾ.22ರಿಂದ ನೀರು ಹರಿಯಲಿದ್ದು, ಪ್ರತಿ ದಿನ 650 ಕ್ಯೂಸೆಕ್ಸ್‌ನಂತೆ ಒಂದೂವರೆ ತಿಂಗಳ ಕಾಲ ನೀರು ಹರಿಸಲು ಆದೇಶಿಸಲಾಗಿದೆ.

ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಬರಗಾಲ ಉಂಟಾಗಿದ್ದು, ನದಿ ಪಾತ್ರಕ್ಕೆ ನೀರು ಹರಿಯಲಿದೆ. ನದಿ ಪಾತ್ರದ ಇಕ್ಕೆಲಗಳ ಹಳ್ಳಿಗಳ ಜನರ ಮತ್ತು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಈಗಾಗಲೇ ಒಂದು ತಿಂಗಳ ಕಾಲ ತಾಲೂಕಿನ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸಲಾಗಿದ್ದು, ಪ್ರಸ್ತುತ ವಾಣಿವಿಲಾಸ ಜಲಾಶಯದಲ್ಲಿ 114.75 ಅಡಿ ನೀರು ಇದೆ. ಚಳ್ಳಕೆರೆ ತಾಲೂಕಿನ ವ್ಯಾಪ್ತಿಯಲ್ಲಿ ಸಾಗುವ ವೇದಾವತಿ ನದಿಪಾತ್ರದ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಸರ್ಕಾರದ ಆದೇಶದಂತೆ ಶುಕ್ರವಾರದಿಂದ ನೀರು ಹರಿಸಲು ಆದೇಶಿಸಲಾಗಿದೆ. ವಾಣಿವಿಲಾಸ ಜಲಾಶಯದಿಂದ 0.25 ಟಿಎಂಸಿ ನೀರು ವೇದಾವತಿ ನದಿ ಪಾತ್ರದ ಮೂಲಕ ಚಳ್ಳಕೆರೆ ತಾಲೂಕಿಗೆ ಹರಿಯಲಿದೆ. ಜಲಾಶಯದ ಬಲದಂಡೆ ನಾಲೆಗೆ ನೀರು ಹರಿಸಿ ಅಚ್ಚುಕಟ್ಟು ವ್ಯಾಪ್ತಿಯ ಕುಂದಲಗುರ ಬಳಿ ವಿತರಣಾ ತೊಟ್ಟಿಯಿಂದ ಸುವರ್ಣಮುಖಿ ನದಿಗೆ 0.1 ಟಿಎಂಸಿ ನೀರು ಹರಿಸಿ ಅಲ್ಲಿಂದ ನದಿ ಭಾಗದಲ್ಲಿರುವ ಕುಂದಲಗುರ, ಸಮುದ್ರದಹಳ್ಳಿ ಮತ್ತು ಹೂವಿನಹೊಳೆ ಗಡಿಭಾಗದ ಎರಡು ಚೆಕ್ ಡ್ಯಾಂಗಳನ್ನು ತುಂಬಿಸಿ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ವಿವಿ ಸಾಗರ ಡ್ಯಾಂನಿಂದ ಎರಡು ನದಿಗಳಿಗೆ ಪ್ರತಿ ದಿನ 650 ಕ್ಯೂಸೆಕ್ಸ್ ನೀರು ಹರಿಯಲಿದ್ದು, ವೇದಾವತಿ ನದಿಗೆ 350 ಕ್ಯೂಸೆಕ್ಸ್ ಮತ್ತು ಸುವರ್ಣಮುಖಿ ನದಿಗೆ 300 ಕ್ಯೂಸೆಕ್ಸ್ ನೀರು ಹರಿಯಲಿದೆ.

ತಾಲೂಕಿನ ಎಡನಾಲ ಮತ್ತು ಬಲನಾಲೆಗಳ ಮೂಲಕ ಈಗಾಗಲೇ ಹರಿದ ನೀರಿನಿಂದ ತೋಟಗಾರಿಕೆ ಖುಷ್ಕಿ ಭೂಮಿ ಸೇರಿದಂತೆ ಸುಮಾರು 12.135 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಲಾಗಿದೆ. ಬಬ್ಬೂರು, ಹೊಸಯಳನಾಡು, ಮಲ್ಲೇಣು, ಟಿಬಿ ಗೊಲ್ಲರಹಟ್ಟಿ, ಐನಹಳ್ಳಿ, ಬ್ಯಾಡರಹಳ್ಳಿ ಬಿದರಕೆರೆ ಹಾಗೂ ಬಲನಾಲದ ಆದಿವಾಲ, ಇಕ್ಕನೂರು, ಟಿ.ನಾಗೇನಹಳ್ಳಿ, ಕೂಡ್ಲಹಳ್ಳಿ ಭಾಗದ ತೋಟಗಳು ನೀರು ಹರಿಸುವಿಕೆಯಿಂದ ಜೀವ ಉಳಿಸಿಕೊಂಡು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಅಲ್ಲದೆ ನಾಲೆಗಳ ಅಕ್ಕಪಕ್ಕದ ಭಾಗದಲ್ಲಿ ಅಂತರ್ಜಲಮಟ್ಟ ವೃದ್ಧಿಗೂ ಸಹಕಾರಿಯಾಗಿದೆ.

ವೇದಾವತಿ ನದಿ ಮೂಲಕ ನೀರು ಹರಿಯುವುದರಿಂದ ಕಾತ್ರಿಕೇನಹಳ್ಳಿ ಬ್ಯಾರೇಜ್, ಲಕ್ಕವನಹಳ್ಳಿ, ಆಲೂರು, ಪಿಟ್ಲಾಲಿ, ತೊರೆ ಒಬೇನಹಳ್ಳಿ, ಕೂಡ್ಲಹಳ್ಳಿ ಚೆಕ್ ಡ್ಯಾಂಗಳು ತುಂಬಿ ಹರಿಯಲಿವೆ. ಸುವರ್ಣಮುಖಿ ನದಿಗೆ ನೀರು ಹರಿಸುವುದರಿಂದ ಸಮುದ್ರದಹಳ್ಳಿ, ಕುಂದಲಗುರ ಹಾಗೂ ಹೂವಿನಹೊಳೆ ಗ್ರಾಮಗಳ ಬಳಿ ನಿರ್ಮಿಸಿರುವ ಚೆಕ್ ಡ್ಯಾಂಗಳು ತುಂಬಲಿದೆ. ಇದಲ್ಲದೆ ಚಳ್ಳಕೆರೆ ತಾಲೂಕಿನ ಕೆಲವು ಬ್ರಿಡ್ಜ್ ಕಂಬ್ಯಾರೇಜ್‌ಗಳು ಸಹ ತುಂಬಲಿದ್ದು, ನೀರಿನ ಬವಣೆ ಸ್ವಲ್ಪ ಮಟ್ಟಿಗಾದರೂ ನೀಗಲಿದೆ.