ಸಾರಾಂಶ
ರಾಮನಗರ: ಬಯಲು ಸೀಮೆ ಜಿಲ್ಲೆಗಳಲ್ಲೊಂದಾದ ರಾಮನಗರದಲ್ಲಿ ಯಾವುದೇ ಶಾಶ್ವತ ನೀರಾವರಿ ಮೂಲಾಧಾರಗಳಿಲ್ಲ. ಹೀಗಾಗಿ ಬೇಸಿಗೆಗೂ ಮುನ್ನವೇ ಕೆರೆಕಟ್ಟೆಗಳು ಮಾತ್ರವಲ್ಲದೆ ಸಣ್ಣ ಜಲಾಶಯಗಳು ಬರಿದಾಗುತ್ತಿರುವುದು ನೀರಿನ ಸಮಸ್ಯೆ ಎದುರಾಗುವ ಆತಂಕ ಶುರುವಾಗಿದೆ.
ಜಿಲ್ಲಾ ಕೇಂದ್ರ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಜನವರಿ ತಿಂಗಳಿನಿಂದಲೇ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಈಗ ಕನಕಪುರದಲ್ಲೂ ನೀರಿನ ಬವಣೆ ಕಾಣಿಸಿಕೊಂಡಿದ್ದು, ಮಾಗಡಿಯಲ್ಲಿ ಸದ್ಯಕ್ಕೆ ಸಮಸ್ಯೆ ಎದುರಾಗಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮಾರ್ಚ್ ವೇಳೆಗೆ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಲಿದೆ.ರಾಮನಗರ ಮತ್ತು ಚನ್ನಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ಎರಡು ಪ್ರಮುಖ ನದಿಗಳಾಗಿರುವ ಶಿಂಷಾ ಮತ್ತು ಅರ್ಕಾವತಿ ಬತ್ತಿ ಹೋಗಿದೆ. ಇದು ಕುಡಿಯುವ ನೀರಿನ ಬವಣೆ ತೀವ್ರವಾಗಲು ಕಾರಣವಾಗಿದೆ.
ಶಿಂಷಾನದಿಯಿಂದ ಚನ್ನಪಟ್ಟಣ ಮತ್ತು ರಾಮನಗರ ಪ್ರದೇಶಕ್ಕೆ ಪ್ರತಿದಿನ 3 ರಿಂದ 4 ಎಂಎಲ್‌ಡಿಯಷ್ಟು ನೀರನ್ನು ಸರಬರಾಜು ಮಾಡಲಾಗುತಿತ್ತು. ಆದರೆ, ಇದೀಗ ನದಿ ಬರಿದಾಗಿದೆ. ಇನ್ನು ಅರ್ಕಾವತಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಂಚನಬೆಲೆಯಿಂದ ನದಿಗೆ ನೀರು ಬಿಡಿಸಲಾಗುತಿತ್ತಾದರೂ ಮಂಚನಬೆಲೆ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ನದಿಗೆ ನೀರನ್ನು ಹೆಚ್ಚಾಗಿ ಬಿಡುತ್ತಿಲ್ಲ. ಇನ್ನು ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು ಹೆಚ್ಚು ನೀರನ್ನು ಮೇಲೆತ್ತಲು ಸಾಧ್ಯವಾಗುತ್ತಿಲ್ಲ.ಮಂಚನಬೆಲೆ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು, ಇಗ್ಗಲೂರು ಜಲಾಶಯದ ನೀರನ್ನು ಬೆಳೆ ಮತ್ತು ಕುಡಿಯಲು ಹಾಗೂ ಹಾರೋಬೆಲೆ ಜಲಾಶಯದ ನೀರನ್ನು ಬೆಳೆಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೀಗ ಜಲಾಶಯಗಳು ಬರಿದಾಗುತ್ತಿರುವುದರಿಂದ ಕುಡಿಯುವ ನೀರಿಗೂ ಪರಿತಪಿಸುವ ಸ್ಥಿತಿ ಬಂದೊದಗಲಿದೆ.
ಜಿಲ್ಲಾ ಕೇಂದ್ರದಲ್ಲಿ 15ದಿನಕ್ಕೊಮ್ಮೆ ನೀರು ಪೂರೈಕೆ :ರಾಮನಗರದಲ್ಲಿ ಕುಡಿಯುವ ನೀರಿನ ಬವಣೆ ತಾರಕ್ಕೇರಿದೆ. ಕೆಲ ಬಡಾವಣೆಗಳಿಗೆ 15 ದಿನಕ್ಕೊಮ್ಮೆ ಒಂದು ಗಂಟೆಗಳ ಕಾಲ ಜಲಮಂಡಳಿ ನೀರು ಪೂರೈಕೆ ಮಾಡುತ್ತಿದ್ದು, ಕೆಲ ವಾರ್ಡುಗಳಿಗೆ 18 ದಿನಗಳಿಗೆ ಒಂದು ಬಾರಿ ನೀರು ಪೂರೈಕೆ ಮಾಡಲಾಗುತ್ತಿದೆ. ರಾಮನಗರ ಪಟ್ಟಣ ಪ್ರದೇಶದಲ್ಲಿ 1.30 ಲಕ್ಷ ಮಂದಿ ಜನಸಂಖ್ಯೆ ಇದ್ದು, ಪ್ರತಿದಿನ 17.55 ಎಂಎಲ್‌ಡಿ (ಮಿಲಿಯನ್ ಲೀಟರ್ ಫರ್ ಡೇ) ನೀರಿನ ಅಗತ್ಯತೆ ಇದೆಎಂದು ಜಲಮಂಡಳಿ ಅಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ, ಪ್ರಸ್ತುತ ಪೂರೈಕೆಯಾಗುತ್ತಿರುವ11.50 ಎಂಎಲ್‌ಡಿ ಮಾತ್ರ. 6.55 ಎಂಎಲ್‌ಡಿ ಯಷ್ಟು ನೀರಿ ಕೊರತೆ ಎದುರಾಗಿದೆ. ನಗರದ 11 ವಾರ್ಡುಗಳಿಗೆ ಅರ್ಕಾವತಿ ನದಿಯಿಂದ ನೀರು ಪಂಪ್ ಮಾಡಲಾಗುತ್ತಿದೆ. ಅರ್ಕಾವತಿ ನದಿಯಿಂದ ಪ್ರತಿದಿನ 4 ಎಂಎಲ್ ಡಿ ನೀರು ಲಭ್ಯವಾಗುತ್ತಿದ್ದು, 3.79 ಎಂಎಲ್ ಡಿ ನೀರು ಕೊಳವೆ ಬಾವಿಗಳಿಂದ, 7.50 ಎಂಎಲ್ ಡಿ ನೀರು ಶಿಂಷಾ ನದಿ ಮತ್ತು ಬಿಡಬ್ಲುಎಸ್ಎಸ್ಬಿ ಬ್ಯಾಕ್ವಾಷ್ ವಾಟರ್ ನಿಂದ ಲಭ್ಯವಾಗುತ್ತಿದೆ.
ಬೊಂಬೆನಗರಿಯಲ್ಲೂ ತಪ್ಪದ ಬವಣೆ:ಚನ್ನಪಟ್ಟಣದಲ್ಲೂ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಚನ್ನಪಟ್ಟಣ ನಗರ ಪ್ರದೇಶಕ್ಕೆ ಪ್ರತಿದಿನ 12 ಎಂಎಲ್‌ಡಿಯಷ್ಟು ನೀರು ಬೇಕಿದ್ದು ಇದೀಗ 6 ಎಂಎಲ್ ಡಿಯಷ್ಟು ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಕೊಳವೆ ಬಾವಿಗಳಿಂದ 2 ಎಂಎಲ್‌ಡಿಯಷ್ಟು ನೀರು ಪೂರೈಕೆಯಾಗುತ್ತಿದೆ. ಇದರಿಂದಾಗಿ 4 ದಿನಗಳಿಗೆ ಒಂದು ಬಾರಿ 1 ತಾಸುಗಳ ಕಾಲ ನೀರು ಪೂರೈಕೆ ಮಾಡಲಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ ವಾರಕ್ಕೊಮ್ಮೆ ಬಿಡುವ ಪರಿಸ್ಥಿತಿ ಎದುರಾಗಲಿದೆ.
ಮಾಗಡಿ ಮತ್ತು ಕನಕಪುರದಲ್ಲಿ ಸದ್ಯಕ್ಕಿಲ್ಲ ಸಮಸ್ಯೆ :ಕನಕಪುರ ಮತ್ತು ಮಾಗಡಿಯಲ್ಲಿ ನೀರಿನ ಬವಣೆ ತುಸು ಕಡಿಮೆ ಇದೆ. ಮಾಗಡಿ ಪಟ್ಟಣಕ್ಕೆ 2.80 ಎಂಎಲ್‌ಡಿಯಷ್ಟು ನೀರು ಬೇಕಿದ್ದು, ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಮಂಚನಬೆಲೆ ಜಲಾಶಯದಿಂದ ಶುದ್ಧೀಕರಿಸದೆ ನೀರು ಪೂರೈಕೆ ಮಾಡುತ್ತಿದ್ದಾರೆ ಎಂಬ ದೂರು ಸಾರ್ವಜನಿಕರದ್ದಾಗಿದೆ. ಇನ್ನು ಕನಕಪುರಕ್ಕೆ ಪ್ರತಿದಿನ 8.75 ಎಂಎಲ್‌ಡಿ ನೀರು ಬೇಕಿದ್ದು 5.50 ಎಂಎಲ್‌ಡಿಯಷ್ಟು ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಎರಡು ದಿನಗಳಿಗೆ ಒಂದು ತಾಸು ಕನಕಪುರಕ್ಕೆ ನೀರು ಸರಬರಾಜಾಗುತ್ತಿದೆ.22ಕೆಆರ್ ಎಂಎನ್ 7.ಜೆಪಿಜಿ
ಸಂಗ್ರಹ ಚಿತ್ರ.