ನಾವು ಯಾವತ್ತೂ ಒಳ್ಳೆದೇ ಮಾಡ್ತೇವೆ : ಸಿಎಂ ಸಿದ್ದರಾಮಯ್ಯ

| N/A | Published : Sep 27 2025, 12:00 AM IST / Updated: Sep 27 2025, 09:47 AM IST

Siddaramaiah

ಸಾರಾಂಶ

ಧರ್ಮಸ್ಥಳ ಗ್ರಾಮ ಪ್ರಕರಣ ಕುರಿತು ಎಸ್‌ಐಟಿ ತನಿಖೆ ಕ್ರಮವನ್ನು ಸ್ವಾಗತಿಸಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ‘ನಾವು ಯಾವಾಗಲೂ ಒಳ್ಳೆಯದೇ ಮಾಡುತ್ತೇವೆ’ ಎಂದಿದ್ದಾರೆ.

  ಬೆಂಗಳೂರು :  ಧರ್ಮಸ್ಥಳ ಗ್ರಾಮ ಪ್ರಕರಣ ಕುರಿತು ಎಸ್‌ಐಟಿ ತನಿಖೆ ಕ್ರಮವನ್ನು ಸ್ವಾಗತಿಸಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ‘ನಾವು ಯಾವಾಗಲೂ ಒಳ್ಳೆಯದೇ ಮಾಡುತ್ತೇವೆ’ ಎಂದಿದ್ದಾರೆ.

ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ನಾವು ಯಾವಾಗಲೂ ಒಳ್ಳೆಯದೇ ಮಾಡುತ್ತೇವೆ. ಅದು ಬಿಟ್ಟು ಬೇರೆ ಏನೂ ಮಾಡಲ್ಲ’ ಎಂದಷ್ಟೇ ಹೇಳಿದರು.

ಕಾಂಗ್ರೆಸ್‌ ತೊಂದ್ರೆ ನೀಡಲ್ಲ- ಡಿಸಿಎಂ:

ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದು, ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಕಾಂಗ್ರೆಸ್‌ ಸರ್ಕಾರ ಯಾವತ್ತೂ ಯಾರಿಗೂ ತೊಂದರೆ ನೀಡಿಲ್ಲ. ನಮ್ಮ ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ತಪ್ಪು ಮಾಡಿದವರಿಗೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಇವತ್ತಿನವರೆಗೂ ನಾವು ಧರ್ಮಸ್ಥಳ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿಲ್ಲ. ಅಧಿಕಾರಿಗಳ ಬಳಿ ಮಾಹಿತಿ ಕೇಳಿಲ್ಲ. ಇಷ್ಟು ದಿನಗಳ ಕಾಲ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ನಾವು ಮಾತಾಡಿದ್ದೇವೆ. ಮುಂದೆ ಅಂತಿಮ ವರದಿ ಬರಲಿ, ನಂತರ ಮಾತಾಡೋಣ ಎಂದು ಸ್ಪಷ್ಟಪಡಿಸಿದರು.

ಧರ್ಮಸ್ಥಳ ಕೇಸ್ ತನಿಖೆ ತಡೆವ  ಅಂಶ ಸುಪ್ರೀಂ ಆದೇಶದಲ್ಲಿಲ್ಲ 

 ಬೆಂಗಳೂರು :  ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಅನಧಿಕೃತವಾಗಿ ಹೂತುಹಾಕಿದ ಆರೋಪಕ್ಕೆ ಸಂಬಂಧಿಸಿ ಪೊಲೀಸರು ಎಫ್‌ಐಆರ್ ದಾಖಲಿಸುವ ಅಥವಾ ಸರ್ಕಾರ ತನಿಖೆಯನ್ನು ಎಸ್ಐಟಿಗೆ ವಹಿಸುವುದನ್ನು ತಡೆಯುವಂತಹ ಯಾವುದೇ ಅಂಶಗಳು ಸುಪ್ರಿಂ ಕೋರ್ಟ್‌ ಆದೇಶದಲ್ಲಿ ಉಲ್ಲೇಖವಾಗಿಲ್ಲ ಎಂದು ಪ್ರಕರಣದ ದೂರುದಾರನ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ವಿ. ಧನಂಜಯ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ದೂರುದಾರ (ಚಿನ್ನಯ್ಯ) ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮೆರಿಟ್‌ ಆಧಾರದಲ್ಲಿ ಸುಪ್ರೀಂ ಕೋರ್ಟ್‌ ವಜಾಗೊಳಿಸಿಲ್ಲ. ಬದಲಾಗಿ ಪ್ರಕರಣ ದಾಖಲಿಸಿರುವಲ್ಲಿ ಮಾಡಿರುವ ವಿಳಂಬದ ಅಂಶ ಆಧರಿಸಿ ಅರ್ಜಿ ವಜಾಗೊಳಿಸಿದೆ ಎಂದಿದ್ದಾರೆ.

ಚಿನ್ನಯ್ಯ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ವಜಾಗೊಳಿಸಿರುವ ವಿಷಯ ಮುಚ್ಚಿಡಲಾಗಿದೆ. ಈ ಅಂಶ ಪರಿಗಣಿಸದೆ ಸರ್ಕಾರ ಸಹ ದೂರುದಾರನ ದೂರು ಆಧರಿಸಿ ಎಸ್‌ಐಟಿ ರಚಿಸಿದೆ ಎಂಬ ಚರ್ಚೆಗಳು ನಡೆದಿದ್ದವು.

Read more Articles on