ನಾವೂ ಹಿಂದೂಗಳು, ರಾಮಭಕ್ತರು: ಶಾಸಕ ಡಾ.ಅಜಯ ಸಿಂಗ್‌

| Published : Jan 25 2024, 02:07 AM IST

ಸಾರಾಂಶ

ಚುನಾವಣಾ ಕಾರಣದಿಂದ ರಾಮನಿಗೂ ಕೇಂದ್ರ ಸರ್ಕಾರದಿಂದ ಕೇಸರೀಕರಣ ಮಾಡಲಾಗಿದೆ. ತಿರುಪತಿ, ಶ್ರೀಶೈಲಕ್ಕೆ ಹೋಗ್ತೇವೆಂದ ಮೇಲೆ ಅಯೋಧ್ಯೆಗೂ ಹೋಗುತ್ತೇವೆ ಎಂದು ಜೇವರ್ಗಿ ಶಾಸಕ ಡಾ.ಅಜಯ ಸಿಂಗ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಾವೂ ಹಿಂದೂಗಳು, ರಾಮಭಕ್ತರು. ನಾವೂ ಅಯೋಧ್ಯೆಗೆ ಹೋಗುತ್ತೇವೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ, ಕಲಬುರಗಿ ಜಿಲ್ಲೆ ಜೇವರ್ಗಿ ಶಾಸಕ ಡಾ. ಅಜಯಸಿಂಗ್‌ ಹೇಳಿದರು.

ಯಾದಗಿರಿಯ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕೆಕೆಆರ್‌ಡಿಬಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಅಯೋಧ್ಯೆಗೆ ಕಾಂಗ್ರೆಸ್ಸಿಗರು ಹೋಗುತ್ತಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಜಯಸಿಂಗ್‌, ಹೌದು, ನಾವು ಅಯೋಧ್ಯೆಗೆ ಹೋಗುತ್ತೇವೆ. ನಾವೆಲ್ಲರೂ ಹಿಂದೂ, ರಾಮಭಕ್ತರಿದ್ದೇವೆ. ರಾಮಮಂದಿರ ಕೇವಲ ಒಂದು ಪಕ್ಷಕ್ಕೆ ಸೀಮಿತ ಅಲ್ಲ ಎಂದರು. ತಿರುಪತಿ, ಶ್ರೀಶೈಲಕ್ಕೆ ನಾವು ಹೋಗುತ್ತೇವೆಂದ ಮೇಲೆ ರಾಮಮಂದಿರಕ್ಕೆ ಯಾಕೆ ಹೋಗಬಾರದು? ಅಯೋಧ್ಯೆಗೂ ನಾವು ಹೋಗುತ್ತೇವೆ ಎಂದು ಪ್ರತಿಕ್ರಿಯಿಸಿದರು.

ನಮ್ಮ ಇಡೀ ದೇಶದಲ್ಲಿರುವ 134 ಕೋಟಿ ಜನಸಂಖ್ಯೆ ಪಕ್ಷಬೇಧ, ಜಾತಿಬೇಧ-ಭಾವ ಬಿಟ್ಟು ಹೋಗಬೇಕು. ರಾಮಮಂದಿರ ನಿರ್ಮಾಣ ಕಾರ್ಯ ಅಪೂರ್ಣ ವಿಚಾರವಾಗಿ ಶಂಕರಾರ್ಯ ಮಠದವರು ಹೇಳಿದ್ದಾರೆ. ಆದರೆ, ಚುನಾವಣೆ ಕಾರಣದಿಂದ ರಾಮನಿಗೂ ಕೇಸರೀಕರಣ ಪ್ರಯತ್ನ. ಮಾಡಲಾಗಿದೆ. ನಾವೆಲ್ಲರೂ ಹಿಂದೂಗಳು, ಅವಸರದ ಬದಲು ಸರಿಯಾಗಿ ಮಾಡಬೇಕಿತ್ತು ಅನ್ನೋದು ನಮ್ಮ ಪಕ್ಷದ ಆಪಾದನೆ ಎಂದು ಅವರು ಹೇಳಿದರು.

ಶೆಟ್ಟರ್‌ ಬಿಜೆಪಿ ಸೇರ್ಪಡೆ ವಿಚಾರ ಉಹಾಪೋಹ:

ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಬಿಜೆಪಿ ಸೇರ್ಪಡೆ ವಿಚಾರವಾಗಿ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಡಾ.ಅಜಯಸಿಂಗ್‌ ಅವರು, ಇವೆಲ್ಲ ಉಹಾಪೋಹಗಳು. ಕಾಂಗ್ರೆಸ್ ಪಕ್ಷ ಅವರನ್ನು ಗುರುತಿಸಿ, ಎಂಎಲ್ಸಿ ಮಾಡಿದೆ. ಸಹಜವಾಗಿ ಅವರ ಭೇಟಿಯಾದರೆ, ಇದಕ್ಕೆ ಉಹಾಪೋಹ ಕಲ್ಪಿಸಲಿಕ್ಕಾಗದು ಎಂದರು.