ಸತ್ಯಕ್ಕೆ ಸಾಕ್ಷಿ ಕೇಳುವ ಕಾಲಘಟ್ಟದಲ್ಲಿ ನಾವಿದ್ದೇವೆ: ಡಾ ಸಿ ಎನ್ ಮಂಜುನಾಥ್

| Published : Jun 03 2024, 12:30 AM IST

ಸತ್ಯಕ್ಕೆ ಸಾಕ್ಷಿ ಕೇಳುವ ಕಾಲಘಟ್ಟದಲ್ಲಿ ನಾವಿದ್ದೇವೆ: ಡಾ ಸಿ ಎನ್ ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವರು ಸಮಾಜದ ಜನರ ರಕ್ತ ಹೀರಿ ಕಿರುಕುಳ ಕೊಟ್ಟು ಸಮಾಜಕ್ಕೆ ಭಾರವಾಗಿ ಬದುಕುವವರಿದ್ದಾರೆ. ಅದೇ ರೀತಿ ಸಮಾಜಕ್ಕೆ ಆಸ್ತಿಯಾದವರೂ ಇದ್ದಾರೆ. ಅವರ ಬದುಕು ಸಮಾಜಕ್ಕೆ ಸಂದೇಶವಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬ ಬಗ್ಗೆ ಪದವಿ ಶಿಕ್ಷಣ ಆರಂಭಿಸುವ ಅವಶ್ಯಕತೆ ಇದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸೂಚ್ಯವಾಗಿ ಹೇಳಿದರು.

ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಸಂಘ, ಇಂಡುವಾಳು ಎಚ್.ಹೊನ್ನಯ್ಯ ಕುಟುಂಬ ವರ್ಗದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಇಂಡುವಾಳು ಎಚ್.ಹೊನ್ನಪ್ಪ ಅವರನ್ನು ಕುರಿತ ‘ನೆಲದ ಕಣ್ಣು’ ಕೃತಿ ಬಿಡುಗಡೆ ಹಾಗೂ ‘ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿ’ ಪ್ರದಾನ ಸಮಾರಂಭ, ಇಂಡುವಾಳು ಎಚ್.ಹೊನ್ನಪ್ಪ ಸೇವಾ ಟ್ರಸ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಎಷ್ಟೋ ಜನರಿಗೆ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕೆಂಬ ಅರಿವೇ ಇಲ್ಲ. ಅದಕ್ಕಾಗಿ ಯುವಕರಿಗೆ ಶಿಕ್ಷಣ ನೀಡುವ ಅಗತ್ಯವಿದೆ. ಏಕೆಂದರೆ ಈ ನಾಲಿಗೆಯಲ್ಲಿ ಅಮೃತವೂ ಇದೆ, ವಿಷವೂ ಇದೆ. ನಾಲಿಗೆಯಿಂದ ಆಗುವ ಗಾಯ ಎಂದಿಗೂ ಮಾಯುವುದಿಲ್ಲ ಎಂದು ಹೇಳಿದರು.

ಏನು ಮಾತನಾಡಬೇಕು ಎನ್ನುವುದು ಜ್ಞಾನ, ಎಷ್ಟು ಮಾತನಾಡಬೇಕು ಎನ್ನುವುದು ವ್ಯಕ್ತಿತ್ವ, ಹೇಗೆ ಮಾತನಾಡಬೇಕೆಂಬುದು ಕೌಶಲ್ಯ, ಮಾತನಾಡಬೇಕೊ ಅಥವಾ ಮಾತನಾಡಬಾರದೋ ಎನ್ನುವುದು ವಿವೇಕ. ಇದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಹೇಗೆ ಮಾತನಾಡುವುದನ್ನು ಕಲಿಯಬೇಕು ಎಂದು ಹೇಳಿದರು.

ಕೃಷಿ ಈ ನೆಲದ ಕಣ್ಣು. ಆಧುನಿಕ ಜಗತ್ತಿನಲ್ಲಿ ಅದು ಕುರುಡಾಗುತ್ತಿದೆ. ದಿನೇ ದಿನೇ ಕೃಷಿ ಭೂಮಿ ಕ್ಷೀಣಿಸಲಾರಂಭಿಸಿದ್ದು ಭೂತಾಯಿಯ ಸೇವೆಯಲ್ಲಿ ತೊಡಗಬೇಕಿದ್ದ ಹಳ್ಳಿಗಾಡಿನ ಜನರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸಣ್ಣಪುಟ್ಟ ಕೆಲಸಗಳಿಗೆ ನಗರ, ಪಟ್ಟಣಗಳಿಗೆ ವಲಸೆ ಹೋಗಿ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಕೃಷಿ ಭೂಮಿಯನ್ನು ಹಾಳುಗೆಡುವುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.

ಕೃಷಿಯನ್ನು ಉಳಿಸುವ ದೃಷ್ಟಿಯಿಂದ ಈ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಕೆರೆ-ಕಟ್ಟೆಗಳನ್ನು ನಿರ್ಮಿಸುವುದು, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಆಸ್ಪತ್ರೆ, ಶಾಲಾ- ಕಾಲೇಜುಗಳನ್ನು ನಿರ್ಮಿಸುವ ಮೂಲಕ ಸಮಾಜವನ್ನು ಸುಧಾರಣೆಯತ್ತ ಮುನ್ನಡೆಸಬೇಕು ಎಂದು ಸಲಹೆ ನೀಡಿದರು.

ಸ್ವಾಭಿಮಾನಿಗಳು, ಸಾಧಕರು ಮತ್ತು ಸಂಸ್ಕಾರವಂತರ ಸಾಧನೆಗಳನ್ನು ನೆನೆಸಿಕೊಂಡಾಗ ಸಾಧನೆ ಮಾಡುವುದಕ್ಕೆ ಪ್ರೇರಣೆ ಬಂದಂತಾಗುತ್ತದೆ. ಮಹನೀಯರು ಮಾಡುವಂತಹ ಸಾಧನೆಗಳು ಪುಸ್ತಕದ ರೂಪದಲ್ಲಿ ದಾಖಲಾಗಬೇಕು. ಏಕೆಂದರೆ ಸತ್ಯಕ್ಕೆ ಸಾಕ್ಷಿ ಕೇಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಾಧಕರು ಮಾಡುವಂತಹ ಸಾಧನೆಗಳು ಭವಿಷ್ಯದ ಯುವಕರಿಗೆ ಮಾರ್ಗದರ್ಶಕವಾಗಬೇಕು ಎಂದು ಹೇಳಿದರು.

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ. ಹಾಗೆಯೇ ಆದರ್ಶವಿಲ್ಲದೆ ಸತ್ತರೆ ಬದುಕಿಗೆ ಅವಮಾನ ಎನ್ನುವುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ಸಾಧಕರಾಗಿ ಹೊರ ಹೊಮ್ಮಬೇಕು ಎಂದು ತಿಳಿಸಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ ಮಾತನಾಡಿ, ಕೆಲವರು ಸಮಾಜದ ಜನರ ರಕ್ತ ಹೀರಿ ಕಿರುಕುಳ ಕೊಟ್ಟು ಸಮಾಜಕ್ಕೆ ಭಾರವಾಗಿ ಬದುಕುವವರಿದ್ದಾರೆ. ಅದೇ ರೀತಿ ಸಮಾಜಕ್ಕೆ ಆಸ್ತಿಯಾದವರೂ ಇದ್ದಾರೆ. ಅವರ ಬದುಕು ಸಮಾಜಕ್ಕೆ ಸಂದೇಶವಾಗಿರುತ್ತದೆ. ಅಂತಹವರನ್ನು ಗುರುತಿಸಿ, ಗೌರವಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಫುಟ್‌ಬಾಲ್ ಆಟಗಾರ ಬಿ.ವೆಂಕಟ್ ಅವರಿಗೆ ಎಚ್.ಹೊನ್ನಪ್ಪ ಕ್ರೀಡಾ ಪ್ರಶಸ್ತಿಯನ್ನು ನೀಡಲಾಯಿತು. ನಂತರ ಇಂಡುವಾಳು ಎಚ್.ಹೊನ್ನಪ್ಪ ಅವರನ್ನು ಕುರಿತ ‘ನೆಲದ ಕಣ್ಣು’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕೃತಿ ಕುರಿತು ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಸಂಘದ ಜಯಪ್ರಕಾಶಗೌಡ, ಕೃತಿ ಕರ್ತೃ ಎಂ.ಎಸ್.ಅನಿತಾ, ಡಾ.ಎಚ್.ಆದರ್ಶ್ ಹೊನ್ನಪ್ಪ ಭಾಗವಹಿಸಿದ್ದರು.