ನಾವು ಸೋತಿದೀವಿ ಸತ್ತಿಲ್ಲ: ನಿಖಿಲ್ ಕುಮಾರಸ್ವಾಮಿ

| Published : Dec 01 2024, 01:33 AM IST

ಸಾರಾಂಶ

ಚನ್ನಪಟ್ಟಣ: ಚುನಾವಣೆಯಲ್ಲಿ ನಾನು ಮೂರು ಬಾರಿ ಸೋತಿರಬಹುದು, ಆದರೆ ಎದೆಗುಂದುವುದಿಲ್ಲ. ಚನ್ನಪಟ್ಟಣ ಉಪಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಯಾವುದೇ ಮುಖಂಡರು, ಕಾರ್ಯಕರ್ತರು ಕಣ್ಣಲ್ಲಿ ನೀರು ಹಾಕಬೇಡಿ. ನಾವು ಸೋತಿರಬಹುದು ಅಷ್ಟೇ ಆದರೆ ಸತ್ತಿಲ್ಲ ಎಂದು. ನನಗಿನ್ನು ೩೫ ವರ್ಷ ವಯಸ್ಸು. ರಾಜ್ಯದ ಜನತೆಯ ಆಶೀರ್ವಾದ ನಮ್ಮ ಜತೆ ಇದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಚನ್ನಪಟ್ಟಣ: ಚುನಾವಣೆಯಲ್ಲಿ ನಾನು ಮೂರು ಬಾರಿ ಸೋತಿರಬಹುದು, ಆದರೆ ಎದೆಗುಂದುವುದಿಲ್ಲ. ಚನ್ನಪಟ್ಟಣ ಉಪಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಯಾವುದೇ ಮುಖಂಡರು, ಕಾರ್ಯಕರ್ತರು ಕಣ್ಣಲ್ಲಿ ನೀರು ಹಾಕಬೇಡಿ. ನಾವು ಸೋತಿರಬಹುದು ಅಷ್ಟೇ ಆದರೆ ಸತ್ತಿಲ್ಲ ಎಂದು. ನನಗಿನ್ನು ೩೫ ವರ್ಷ ವಯಸ್ಸು. ರಾಜ್ಯದ ಜನತೆಯ ಆಶೀರ್ವಾದ ನಮ್ಮ ಜತೆ ಇದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ತಾಲೂಕಿನ ಕೂಡ್ಲೂರು ಗ್ರಾಮದ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರ, ೨೩ನೇ ತಾರೀಖಿನ ಫಲಿತಾಂಶ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೂ ಕ್ಷೇತ್ರದ ಜನ ೮೭ಸಾವಿರಕ್ಕೂ ಹೆಚ್ಚು ಮತ ನೀಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರಿಗೆ ಧೈರ್ಯ ತುಂಬುತ್ತೇವೆ ಎಂದರು.

ಉಪಚುನಾವಣೆಯಲ್ಲಿ ಇಡೀ ರಾಜ್ಯ ಸರ್ಕಾರವನ್ನೇ ಎದುರಿಸಿದ್ದೀರಿ. ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು ಉದ್ವೇಗಕ್ಕೆ ಒಳಗಾಗಿ ಫಲಿತಾಂಶದ ನೈತಿಕ ಹೊಣೆ ಹೊರ್ತೀನಿ ಅಂದಿದ್ದಾರೆ. ಆದರೆ ಎಲ್ಲರೂ ಸಾಮೂಹಿಕವಾಗಿ ನೈತಿಕ ಹೊಣೆ ಹೊರಬೇಕಿದೆ ಎಂದರು.

ನಿಮ್ಮ ಆಶಿರ್ವಾದ ಇರಲಿ: ಕುಮಾರಣ್ಣಗೆ ಮೂರು ಬಾರಿ ಆಪರೇಷನ್ ಆದರೂ, ಪಕ್ಷ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಅವರ ಏಕಾಂಗಿ ಹೋರಾಟಕ್ಕೆ ಬೆಂಬಲ ನೀಡಿದ್ದು ಇದೇ ಚನ್ನಪಟ್ಟಣ ತಾಲೂಕು. ೨೦೧೮ರಲ್ಲಿ ಕುಮಾರಣ್ಣ ರಾಮನಗರ, ಚನ್ನಪಟ್ಟಣ ಎರಡೂ ಕಡೆ ಸ್ಪರ್ಧೆ ಮಾಡಿದರು. ಎರಡೂ ಕಡೆ ಗೆದ್ದು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚನ್ನಪಟ್ಟಣ ಉಳಿಸಿಕೊಂಡಿದ್ರು. ಎರಡು ಬಾರಿ ಕುಮಾರಣ್ಣನ ಅನುಪಸ್ಥಿತಿಯಲ್ಲಿ ಚುನಾವಣೆ ಮಾಡಿ ಗೆಲ್ಲಿಸಿದ್ದೀರಿ. ಇಂದು ಕೂಡಾ ಹಳ್ಳಿಹಳ್ಳಿಗಳಿಂದ ಬಂದು ಬೆಂಬಲ ಕೊಡ್ತಿದ್ದೀರಿ ನಿಮ್ಮ ಸಹಕಾರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದರು.

ನಾನು ಮನೆಯಲ್ಲಿ ಕೂರುವವನಲ್ಲ: ೨೦೦೪ರಲ್ಲಿ ಜೆಡಿಎಸ್ ೫೪ ಸೀಟ್ ಪಡೆದಿತ್ತು. ಮುಂದಿನ ಚುನಾವಣೆಗೆ ಅದೇ ರೀತಿಯ ಹೋರಾಟ ಮಾಡಬೇಕು. ಕಾರ್ಯಕರ್ತರು, ಮುಖಂಡರು ನಮಗೆ ಬಲ ತುಂಬಬೇಕು. ಸೋತ ಮಾತ್ರಕ್ಕೆ ನಾನು ಮನೆಯಲ್ಲಿ ಕೂರುವವನಲ್ಲ. ಮೂರು ಬಾರಿ ಸೋತಿದ್ದರೂ ಎದೆಗುಂದುವುದಿಲ್ಲ. ಯಾವುದೇ ಮುಖಂಡರು, ಕಾರ್ಯಕರ್ತರು ಕಣ್ಣೀರು ಹಾಕಬೇಡಿ. ರಾಜ್ಯದ ಜನತೆಯ ಆಶೀರ್ವಾದ ನಮಗಿದೆ ಎಂದರು.

ಕೊಟ್ಟ ಮಾತು ವಾಪಸ್‌ ಪಡೆಯಲ್ಲ:

ಸರ್ಕಾರದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ. ನಮ್ಮ ತಂದೆಯವರಿಗೆ 8 ಬಾರಿ ಅವಕಾಶ ಕೊಟ್ಟಿದ್ದೀರಿ. ನಾನು ಸೋತಿದ್ದೇನೆ ಅಂದಾಕ್ಷಣ ಕೊಟ್ಟ ಮಾತು ವಾಪಸ್‌ ಪಡೆಯಲ್ಲ. ಕುಮಾರಣ್ಣ ಅವರು ಕೇಂದ್ರ ಸಚಿವರಾಗಿದ್ದಾರೆ. ಅವರಿಗೆ ಸಿಕ್ಕಿರೋ ಅವಕಾಶದಲ್ಲಿ ಕೆಲಸ ಮಾಡುತ್ತಾರೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಕೆಲಸ ಮಾಡ್ತೇವೆ ಎಂದರು.

ಜನಾಭಿಪ್ರಾಯಕ್ಕೆ ತಲೆಬಾಗಲೇಬೇಕು:

ಕುಮಾರಣ್ಣ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರು. ಆದರೆ ಜನಾಭಿಪ್ರಾಯಕ್ಕೆ ನಾವು ತಲೆಬಾಗಲೇಬೇಕು. ಯಾರ ಮೇಲೂ ದೂರುವ ಪ್ರಶ್ನೆ ಇಲ್ಲ. ಎಲ್ಲರೂ ಸಾಮೂಹಿಕ ಹೊಣೆ ಹೊತ್ತು ಮುಂದೆ ಜಿಲ್ಲೆಯ ನಾಲ್ಕು ಕ್ಷೇತ್ರ ಗೆಲ್ಲುವ ಗುರಿ ಇಟ್ಟು ಕೊಳ್ಳೊಣ. ಎಲ್ಲರ ಮುಖದಲ್ಲಿ ನಗು ಇರಲಿ, ಯಾರೂ ಬೇಸರ ಮಾಡಿಕೊಳ್ಳೊದು ಬೇಡ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದರು.

ಬಾಕ್ಸ್‌............

ನೈತಿಕ ಹೊಣೆ ಹೊತ್ತು ರಾಜೀನಾಮೆ: ಜಯಮುತ್ತು

ಚನ್ನಪಟ್ಟಣ: ನಿಖಿಲ್ ಮೇಲೆ ಎರಡು ಪಕ್ಷದ ಕಾರ್ಯಕರ್ತರು ಒತ್ತಡ ಹೇರಿ ಸ್ಪರ್ಧೆಗೆ ನಿಲ್ಲಿಸಿದ್ದೆವು. ಆದರೆ ಕ್ಷೇತ್ರದ ಜನರ ಮನ ಮುಟ್ಟುವಲ್ಲಿ ವಿಫಲವಾಗಿದ್ದೇವೆ. ಸಣ್ಣಪುಟ್ಟ ವ್ಯತ್ಯಾಸಗಳಿಂದ ಸೋಲು ಅನುಭವಿಸಬೇಕಾಯ್ತು. ಹಾಗಾಗಿ ಈ ಸೋಲಿನ ನೈತಿಕ ಹೊಣೆ ನಾನೇ ಹೊರುತ್ತೇನೆ. ಪಕ್ಷದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಚ್.ಸಿ ಜಯಮುತ್ತು ಘೋಷಿಸಿದರು.

ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯಗಳನ್ನ ಕೊಟ್ಟಿದೆ. ಚುನಾವಣೆ ಹಿಂದಿನ ದಿನ ಹಣ ಬಿಡುಗಡೆ ಮಾಡಿ ಜನರ ದಾರಿ ತಪ್ಪಿಸಿದೆ. ಮುಂದೆ ನಿಖಿಲ್ ಕುಮಾರಸ್ವಾಮಿಗೆ ಒಳ್ಳೆಯ ಭವಿಷ್ಯ ಇದೆ. ಕ್ಷೇತ್ರದ ಜನತೆಗೆ ಜೊತೆಗೆ ನಿಖಿಲ್ ಇದ್ದು ಪಕ್ಷ ಮುನ್ನಡೆಸಲಿದ್ದಾರೆ ಎಂದು ಹೇಳಿದರು.

ಪೊಟೋ೩೦ಸಿಪಿಟಿ೧:

ಚನ್ನಪಟ್ಟಣದಲ್ಲಿ ನಡೆದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.

ಪೊಟೋ೩೦ಸಿಪಿಟಿ೨:

ಚನ್ನಪಟ್ಟಣದಲ್ಲಿ ನಡೆದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಕಾರ್ಯಕರ್ತರು.