ಸಾರಾಂಶ
ಎಲ್ಲರೂ ಸಜ್ಜನರ ಸಹವಾಸ ಮಾಡಬೇಕು, ನೀತಿವಂತರಾಗಿರಬೇಕು, ಅನ್ಯಾಯಕ್ಕೆ ಕೈ ಹಾಕಬಾರದು, ಸನ್ಮಾರ್ಗದಲ್ಲಿ ನಡೆಯಬೇಕು. ಇದನ್ನೇ ಭಗವಾನ್ ಬುದ್ಧ, ಕನಕದಾಸರು, ವಿವೇಕಾನಂದರು, ಗಾಂಧೀಜಿ ಹೇಳಿದರು. ಆದರೆ ನಾವು ಅದಕ್ಕೆ ಪೂರಕವಾಗಿ ನಡೆಯುತ್ತಿಲ್ಲ, ಮಾರಕವಾಗಿ ನಡೆಯುತ್ತಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು. ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ ಮಾತುಗಳು ಇಂದಿಗೂ ಕೂಡ ಅನುಷ್ಠಾನಕ್ಕೆ ತರಲು ಆಗುತ್ತಿಲ್ಲ. ಈ ವಿಚಾರದಲ್ಲಿ ಎಡವುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಎಲ್ಲರೂ ಸಜ್ಜನರ ಸಹವಾಸ ಮಾಡಬೇಕು, ನೀತಿವಂತರಾಗಿರಬೇಕು, ಅನ್ಯಾಯಕ್ಕೆ ಕೈ ಹಾಕಬಾರದು, ಸನ್ಮಾರ್ಗದಲ್ಲಿ ನಡೆಯಬೇಕು. ಇದನ್ನೇ ಭಗವಾನ್ ಬುದ್ಧ, ಕನಕದಾಸರು, ವಿವೇಕಾನಂದರು, ಗಾಂಧೀಜಿ ಹೇಳಿದರು. ಆದರೆ ನಾವು ಅದಕ್ಕೆ ಪೂರಕವಾಗಿ ನಡೆಯುತ್ತಿಲ್ಲ, ಮಾರಕವಾಗಿ ನಡೆಯುತ್ತಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ ಬೇಸರ ವ್ಯಕ್ತಪಡಿಸಿದರು.ನಗರದ ಕಲಾಭವನದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ ಸಮಾಜಕ್ಕಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯವಾಗಿದ್ದು, ಸುಮಾರು ೬ನೇ ಶತಮಾನ ಎರಡು ಸಾವಿರ ವರ್ಷಗಳ ಹಿಂದೆ ವಾಸವಾಗಿದ್ದು, ಅಂದು ಅವರು ಆಡಿದ ಮಾತುಗಳು ಪ್ರಸ್ತುತ ಕೂಡ. ಅವರು ಹೇಳಿದ ರೀತಿಯಾಗಿ ನಾವುಗಳೆಲ್ಲಾ ಬದುಕು ಸಾಗಿಸಬೇಕಾಗಿದೆ. ಸತ್ಯದ ಅನ್ವೇಷಣೆಗೆ ಹೊರಟ ಸಿದ್ಧಾರ್ಥನಿಗೆ ಜ್ಞಾನೋದಯವಾಗಿದ್ದು ಸುಮಾರು ೧೨ ವರ್ಷಗಳ ನಂತರ. ಬುದ್ಧ ಯಾವತ್ತೂ ದೈವದ ಬಗ್ಗೆ, ಆತ್ಮದ ಬಗ್ಗೆ ಚರ್ಚೆ ಮಾಡಲಿಲ್ಲ. ಅವರು ಚರ್ಚೆ ಮಾಡಿರುವುದು ಪ್ರಸ್ತುತದ ಬಗ್ಗೆ ಮಾತ್ರ. ಭೂತಕಾಲದ ಬಗ್ಗೆ ಏನು ಹೇಳಲಿಲ್ಲ. ಭವಿಷ್ಯ ಕಾಲದ ಬಗ್ಗೆ ಚಿಂತನೆ ನಡೆಸಲಿಲ್ಲ. ಅವರ ವಿಚಾರ ಇರುವುದು ಕೇವಲ ವರ್ತಮಾನ ಕಾಲಕ್ಕೆ.ಈತ ಮಹಾನ್ ಮೇಧಾವಿ ಎಂದರು.ಆಸೆಯೇ ದುಃಖಕ್ಕೆ ಕಾರಣ:
ಈ ಜಗತ್ತಿನಲ್ಲಿ ಎಲ್ಲರೂ ದುಃಖದಲ್ಲೇ ಇರುತ್ತಾರೆ. ಆಸೆಯೇ ದುಃಖಕ್ಕೆ ಮೂಲ ಕಾರಣ. ದುಃಖ ತ್ಯಜಿಸಿ ಹೇಗೆ ಹೊರಬರುವುದು, ಅದಕ್ಕೆ ಮಾರ್ಗಗಳು ಯಾವುದು ಎಂದರೇ ಅಷ್ಟ ಮಾರ್ಗಗಳನ್ನು ಕಂಡು ಹಿಡಿದಿದ್ದಾರೆ. ಸರಿಯಾದ ಕ್ರಿಯೆ, ಸರಿಯಾದ ಆಲೋಚನೆ, ಸರಿಯಾದ ದೃಷ್ಟಿ, ಸವಿಸ್ತಾರವಾದ ಚಿಂತನೆ, ಏಕಾಗ್ರತೆ, ಸರಿಯಾದ ಜೀವನ ಉಪಾಯ ಇಂತಹ ಅಷ್ಟ ಮಾರ್ಗಗಳನ್ನು ಹಾಕಿಕೊಟ್ಟಿದ್ದಾರೆ ಎಂದು ಕಿವಿಮಾತು ಹೇಳಿದರು. ಇಂತಹ ಮಾರ್ಗಗಳನ್ನು ನಾವು ಅನುಸರಿಸಿಕೊಂಡು ಸಮಾಧಾನದಿಂದ ಹೋಗಬೇಕು. ಇದನ್ನ ಇವತ್ತು ಒಂದು ದಿನ ಮಾತ್ರ ಕೇಳಿಕೊಂಡು ಹೋದರೇ ಸಾಧ್ಯವಾಗುವುದಿಲ್ಲ. ಇದನ್ನ ನಮ್ಮ ಮಕ್ಕಳಲ್ಲಿ, ನಮ್ಮ ಮನೆಗಳಲ್ಲಿ ಮಾತನಾಡಿ ಶಾಂತಿ, ಸಂಯಮದಿಂದ ಜೀವನ ನಡೆಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ಎರಡು ಸಾವಿರ ವರ್ಷಗಳ ಹಿಂದೆ ಹೇಳಿದ ಮಾತುಗಳು ಇಂದಿಗೂ ಕೂಡ ಅನುಷ್ಠಾನಕ್ಕೆ ತರಲು ಆಗುತ್ತಿಲ್ಲ. ಈ ವಿಚಾರದಲ್ಲಿ ಎಡವುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ಬುದ್ಧ ತನ್ನ ಕಾಲಮಾನದಲ್ಲಿ ಜಗತ್ತು ಎಂತಹ ಸತ್ಯಗಳಿಂದ ದೂರವಾಗಿದೆ ಎಂದು ಮತ್ತೊಮ್ಮೆ ನೆನಪಿಸಿಕೊಟ್ಟಿದ್ದಾರೆ. ಬುದ್ಧ ಬಂದು ಅದನ್ನೆ ವಚನದಲ್ಲಿ ಹೇಳಿದ್ದಾರೆ. ೭೫೦ ವರ್ಷಗಳ ನಂತರ ಗಾಂಧಿ ಬಂದು ಇದನ್ನೇ ಪ್ರಸ್ತಾಪ ಮಾಡುತ್ತಾರೆ. ಬ್ರಹ್ಮ, ವಿಷ್ಣು, ಮಹೇಶ್ವರ ಇದ್ದ ಹಾಗೆ ಬುದ್ಧ, ಬಸವ ಹಾಗೂ ಗಾಂಧೀಜಿ ನಮ್ಮ ಪರಂಪರೆಯ ತ್ರಿಮೂರ್ತಿಗಳು ಎಂದು ಹೇಳಿದರು.
ಮಹಾಪರಿನಿರ್ವಾಣ ದಿನ: ಬೆಂಗಳೂರಿನ ಅಕ್ಕ ಐ.ಎ.ಎಸ್. ಅಕಾಡೆಮಿ ಮುಖ್ಯಸ್ಥ ಡಾ. ಶಿವಕುಮಾರ್ ಉಪನ್ಯಾಸದಲ್ಲಿ ಮಾತನಾಡಿ, ಬುದ್ಧ ಪೂರ್ಣಿಮೆಯನ್ನು ಭಗವಾನ್ ಬುದ್ಧನ ಜನ್ಮ, ಸತ್ಯದ ಜ್ಞಾನ ಮತ್ತು ಮಹಾಪರಿನಿರ್ವಾಣ ಎಂದು ಪರಿಗಣಿಸಲಾಗಿದೆ. ಬುದ್ಧ ಪೂರ್ಣಿಮೆಯು ಬುದ್ಧನ ಜೀವನಕ್ಕೆ ಸಂಬಂಧಿಸಿಲ್ಲ. ಆದರೆ ಈ ಪೂರ್ಣಿಮಾ ದಿನಾಂಕದಂದು, ಕಾಡಿನಲ್ಲಿ ಅಲೆದಾಡುವ ಮತ್ತು ಕಠಿಣ ತಪಸ್ಸು ಮಾಡಿದ ನಂತರ, ಬುದ್ಧನು ಬೋಧಗಯಾದಲ್ಲಿನ ಬೋಧಿ ವೃಕ್ಷದ ಕೆಳಗೆ ಸತ್ಯದ ಜ್ಞಾನವನ್ನು ಪಡೆದನು ಎನ್ನುವ ಕಾರಣಕ್ಕಾಗಿ ಆಚರಿಸಲಾಗುತ್ತದೆ. ಗೌತಮ ಬುದ್ಧರು ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಲು ಜನರನ್ನು ಪ್ರೇರೇಪಿಸಿದವರು. ಬುದ್ಧ ಪೂರ್ಣಿಮೆಯಂದು, ಭಗವಾನ್ ಬುದ್ಧನ ಅನುಯಾಯಿಗಳು ಅವರ ಬೋಧನೆಗಳನ್ನು ಆಲಿಸುತ್ತಾರೆ ಮತ್ತು ಅವರು ತೋರಿಸಿದ ಮಾರ್ಗವನ್ನು ಅನುಸರಿಸುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ ಎಂದರು. ಧಮ್ಮಬೋಧಿ ಮತ್ತು ಬಿಕ್ಕು ಸಂಘದ ಬಿಕ್ಕು ದಿವ್ಯ ಸಾನಿಧ್ಯವಹಿಸಿ ಮಾತನಾಡುತ್ತಾ, ಪ್ರಪಂಚದಲ್ಲಿ ಅಶಾಂತಿಯುತ ವಾತಾವರಣ ಸೃಷ್ಟಿಯಾಗಿರುವ ಪ್ರಸ್ತುತ ಸಂದರ್ಭದಲ್ಲಿ ಬುದ್ಧರ ಶಾಂತಿಯ ಸಂದೇಶ ಎಲ್ಲರಿಗೂ ಮಾದರಿ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಬುದ್ಧರ ೨೫೬೯ನೇ ಜಯಂತಿ ಆಚರಿಸುತ್ತಿರುವುದು ಸಂತೋಷದ ವಿಚಾರ, ಇದೇ ಮೊದಲ ಬಾರಿಗೆ ಕರ್ನಾಟಕ ಸರಕಾರ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಬುದ್ಧ ಎಂದರೆ ಬೆಳಕು:
ಕ್ರಿ.ಪೂ. ೬೨೩ನೇ ವೈಶಾಖ ಹುಣ್ಣಿಮೆ ದಿನದಂದು ಜನಿಸಿದ ಭಗವಾನ್ ಬುದ್ಧರು ತಮ್ಮ ೨೯ನೇ ವಯಸ್ಸಿನಲ್ಲಿ ಸಾಂಸಾರಿಕ ಜೀವನ, ಸಂಪತ್ತು ರಾಜ್ಯಾಧಿಕಾರ ತೊರೆದು ತಮ್ಮ ೩೫ನೇ ವಯಸ್ಸಿನಲ್ಲಿ ಜ್ಞಾನೋದಯ ಪಡೆದು ತಮ್ಮ ೮೦ನೇ ವಯಸ್ಸಿನಲ್ಲಿ ಪರಿನಿಬ್ಬಾಣ ಹೊಂದುತ್ತಾರೆ. ಕಾಕತಾಳೀಯ ಎಂಬಂತೆ ಈ ಮೂರು ಘಟನೆಗಳು ಪವಿತ್ರ ವೈಶಾಖ ಹುಣ್ಣಿಮೆ ದಿನದಂದೇ ಘಟಿಸುತ್ತವೆ. ಈ ದಿನವನ್ನು ಪ್ರಪಂಚದಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ ಎಂದು ವಿವರಿಸಿದರು. ಬುದ್ಧ ಎಂದರೆ ಬೆಳಕು ಅಥವಾ ಜ್ಞಾನ. ಗೌತಮ ಬುದ್ಧ ಭಾರತದ ನೆಲದಲ್ಲಿ ಜನ್ಮತಾಳಿದ ಮಾನವೀಯತೆಯ ಮೂಲ ಜೀವಧಾತು. ಬೌದ್ಧ ಧರ್ಮದ ಸ್ಥಾಪಕ ಗೌತಮ ಬುದ್ಧರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಡರೆ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.ಭಗವಾನ್ ಬುದ್ಧ ಜಯಂತಿಯ ಅಂಗವಾಗಿ ಕಲಾಭವನದ ಆವರಣದಲ್ಲಿ ಹೊಯ್ಸಳ ಚಿತ್ರಕಲಾ ಪರಿಷತ್ತುನ ಚಿತ್ರಕಲಾ ಪ್ರದರ್ಶನವನ್ನು ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಲ್ಲಾ ಪಂಚಾಯತ್ ಉಪನಿರ್ದೇಶಕ ಚಂದ್ರಶೇಖರ್, ದಮ್ಮಾಚಾರಿ, ಭಾರತಿಯ ಬೌದ್ಧ ಮಹಾಸಭಾ ಅಧ್ಯಕ್ಷ ಬಸವರಾಜು, ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಮಲ್ಲಯ್ಯ ಬೌದ್ಧ, ಎನ್.ಬಿ. ವೀರಭದ್ರಯ್ಯ, ಅನಂತಸ್ವಾಮಿ, ತೋಟೇ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ದೂದ್‌ಫೀರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಖಜಾಂಚಿ ಕೆ.ಆರ್. ಹೇಮಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್.ಪಿ. ತಾರನಾಥ್ ಇತರರು ಉಪಸ್ಥಿತರಿದ್ದರು. ಯದೀಶ್ ಅವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.ಫೊಟೋ:ಕಲಾಭವನದಲ್ಲಿ ನಡೆದ ಬುದ್ಧ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.ಫೊಟೋ:
ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.