ನಮ್ಮ ವಿರುದ್ಧ ಕಾನೂನು ಹೋರಾಟ ಮಾಡಿದರೆ ನಾವು ರೆಡಿ

| Published : Aug 25 2024, 01:58 AM IST

ಸಾರಾಂಶ

ಸಂಪರ್ಕ, ಸಂವಹನದ ಕೊರತೆಯಿಂದ ಜೆಡಿಎಸ್ ನಾಯಕರು, ನಮ್ಮ ನಡುವೆ ಅಂತರ ಇದೆ. ವಿಶ್ವಾಸ ಕಡಿಮೆಯಾಗಿದೆ ಎಂದ ಅವರು, ನಮ್ಮ ನೈತಿಕತೆ ಬಗ್ಗೆ ಮಾತನಾಡುವ ಸಂತೋಷ್, ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡವಿದ್ದು ಯಾರು ಎಂಬುದನ್ನು ಹೇಳಲಿ ಎಂದು ಆಗ್ರಹಿಸಿದರು. ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಒಂದೇ ದಿನದಲ್ಲಿ ಜೆಡಿಎಸ್‌ಗೆ ಬಂದವರಲ್ಲಿ ಯಾವ ಸಿದ್ಧಾಂತ ಇದೆ. ನಮ್ಮ ವಿರುದ್ಧ ಅವರು ಕಾನೂನು ಹೋರಾಟ ಮಾಡಿದರೆ ನಾವೂ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ವಿರುದ್ಧ ಅರಸೀಕೆರೆ ನಗರಸಭೆ ನೂತನ ಅಧ್ಯಕ್ಷ ಸಮೀವುಲ್ಲಾ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಾವುಗಳು ನಮ್ಮ ಜೆಡಿಎಸ್ ಪಕ್ಷದಲ್ಲಿ ಬಣ ಮಾಡಲು ಹೋಗುವುದಿಲ್ಲ. ನಾನು ಜಾತ್ಯತೀತ ತತ್ವದಲ್ಲಿದ್ದು, ನಮ್ಮ ವಿರುದ್ಧ ಅವರು ಕಾನೂನು ಹೋರಾಟ ಮಾಡಿದರೆ ನಾವೂ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ವಿರುದ್ಧ ಅರಸೀಕೆರೆ ನಗರಸಭೆ ನೂತನ ಅಧ್ಯಕ್ಷ ಸಮೀವುಲ್ಲಾ ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನನ್ನ ಬಗ್ಗೆ ಇಲ್ಲಸಲ್ಲದ ಮಾತನಾಡುವ ಅಧಿಕಾರವನ್ನು ಪರಾಜಿತ ಅಭ್ಯರ್ಥಿ ಎನ್.ಆರ್.ಸಂತೋಷ್‌ಗೆ ಕೊಟ್ಟವರು ಯಾರು? ಅವರ ಆರೋಪದಲ್ಲಿ ಹೋಗುತ್ತೇವೆ. ಸಂಪರ್ಕ, ಸಂವಹನದ ಕೊರತೆಯಿಂದ ಜೆಡಿಎಸ್ ನಾಯಕರು, ನಮ್ಮ ನಡುವೆ ಅಂತರ ಇದೆ. ವಿಶ್ವಾಸ ಕಡಿಮೆಯಾಗಿದೆ ಎಂದ ಅವರು, ನಮ್ಮ ನೈತಿಕತೆ ಬಗ್ಗೆ ಮಾತನಾಡುವ ಸಂತೋಷ್, ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡವಿದ್ದು ಯಾರು ಎಂಬುದನ್ನು ಹೇಳಲಿ ಎಂದು ಆಗ್ರಹಿಸಿದರು. ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಒಂದೇ ದಿನದಲ್ಲಿ ಜೆಡಿಎಸ್‌ಗೆ ಬಂದವರಲ್ಲಿ ಯಾವ ಸಿದ್ಧಾಂತ ಇದೆ ಎಂದು ಪ್ರಶ್ನಿಸಿದರು.

ಎನ್.ಆರ್‌. ಸಂತೋಷ್ ಅವರು ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಬೆಂಗಳೂರು ಸೇರಿದರು. ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಯಾವುದೇ ಸಮಸ್ಯೆಗೆ ಇದುವರೆಗೂ ಸ್ಪಂದಿಸಲಿಲ್ಲ ಎಂದು ದೂರಿದರು. ನಮ್ಮ ವಿರುದ್ಧ ಅವರು ಕಾನೂನು ಹೋರಾಟ ಮಾಡಿದರೆ ನಾವೂ ಮಾಡುತ್ತೇವೆ. ನಾವು ಈಗಲೂ ಜೆಡಿಎಸ್‌ನಲ್ಲೇ ಇದ್ದೇವೆ. ಜೆಡಿಎಸ್-ಬಿಜೆಪಿ ಮೈತ್ರಿ ಗೊಂದಲದಿಂದಾಗಿ ನಾವು ಪ್ರತ್ಯೇಕ ಗುಂಪು ರಚಿಸಿಕೊಂಡು ಅರಸೀಕೆರೆ ಅಭಿವೃದ್ಧಿಗಾಗಿ ಕೆಲಸ ಮಾಡಲು ಅಣಿಯಾಗಿದ್ದೇವೆ. ಇವರಿಂದ ನಾವು ತತ್ವ, ಸಿದ್ಧಾಂತದ ಪಾಠ ಕಲಿಯಬೇಕಿಲ್ಲ ಎಂದು ಸಂತೋಷ್‌ಗೆ ತಿರುಗೇಟು ನೀಡಿದರು.

ಅರಸೀಕೆರೆ ನಗರಸಭೆಯಲ್ಲಿ ೨೧ ಜನ ಜೆಡಿಎಸ್ ಸದಸ್ಯರು ಗೆದ್ದಿದ್ದೆವು. ಅವರಲ್ಲಿ ೭ ಮಂದಿ ಅನರ್ಹರಾಗಲು ಇದೇ ಸಂತೋಷ್ ಕಾರಣ. ಸದ್ಯ ಅರಸೀಕೆರೆಯಲ್ಲಿ ನೆಮ್ಮದಿ ಹಾಳಾಗಿ, ಅಶಾಂತಿ ನೆಲೆಸಿದ್ದರೆ ಅದಕ್ಕೆ ಇವರೇ ಕಾರಣ ಎಂದು ಆರೋಪಿಸಿದರು. ನನ್ನನ್ನು ಲೂಟಿಕೋರ ಎನ್ನುವ ಅವರು ಸತ್ಯ ಹರಿಶ್ಚಂದ್ರರಾ, ಅವರು ಎಲ್ಲೂ ನಾನು ಲೂಟಿ ಮಾಡಿಲ್ಲವೇ, ಲೂಟಿ ಮಾಡಿದ್ದರೆ, ಭ್ರಷ್ಟಾಚಾರ ಮಾಡಿದ್ದರೆ ಅದನ್ನು ಅವರು ಸಾಬೀತು ಪಡಿಸಿದರೇ ಆ ಕ್ಷಣದಲ್ಲೇ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದು ಸವಾಲು ಹಾಕಿದರು. ನನಗೆ ಸಂತೋಷ್ ಅಧಿಕಾರ ನೀಡಿಲ್ಲ ಎಂದರು.

ನಗರಸಭೆ ಚುನಾವಣೆ ಸಂಬಂಧ ನಮಗೆ ಜೆಡಿಎಸ್‌ನಿಂದ ನೋಟಿಸ್ ನೀಡಲಾಗಿತ್ತು. ದೂರವಾಣಿ ಕರೆ ಸಹ ಮಾಡಿದ್ದರು. ಆದರೆ ಕಳೆದ ಒಂದು ವರ್ಷದಿಂದ ನಮ್ಮ ಬಗ್ಗೆ ಕ್ಯಾರೇ ಎನ್ನದವರು ಚುನಾವಣೆ ವೇಳೆ ಸಂಪರ್ಕ ಮಾಡಿರುವುದು ಬೇಸರ ತರಿಸಿತು. ಕೆಲ ದಿವಸಗಳ ಹಿಂದೆ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರು ಅರಸೀಕೆರೆಯಲ್ಲಿ ಸಭೆ ಮಾಡಿದಾಗ ನಾವು ಆ ವೇಳೆ ಕ್ಷೇತ್ರದಲ್ಲಿ ಇರಲಿಲ್ಲ ಎಂದು ಹೇಳಿಕೆ ಕೊಟ್ಟರು. ನಾವು ಎಂದಿಗೂ ಜೆಡಿಎಸ್ ಪಕ್ಷದಲ್ಲೆ ಇರುತ್ತೇವೆ. ಇದರಲ್ಲಿ ಯಾವ ಅಪನಂಬಿಕೆ ಬೇಡ. ಇನ್ನು ನಗರಸಭೆ ಓರ್ವ ಸದಸ್ಯ ಈಶ್ವರಪ್ಪ ಉತ್ತಮ ವ್ಯಕ್ತಿ. ಅವರ ಜೊತೆ ಮಾತನಾಡಿ ಸರಿಪಡಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅರಸೀಕೆರೆ ನಗರಸಭೆ ನೂತನ ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ಸದಸ್ಯರಾದ ಜಾಕಿರ್ ಹುಸೇನ್, ಗಣೇಶ್, ರಾಜು ಜೆಡಿಎಸ್ ಮುಖಂಡ ಹರೀಶ್ ಇತರರು ಉಪಸ್ಥಿತರಿದ್ದರು.