ಕೊಡಗಿನ ಜಮ್ಮಾ ಬಾಣೆ ವಿಷಯಕ್ಕೆ ಸಂಬಂಧಿಸಿದಂತೆ ನಾವೂ ವಿಧಾನಸಭೆಯ ಹೊರಗೆ ಹಾಗೂ ಒಳಗೆ ಹಲವು ವರ್ಷ ಹೋರಾಟ ಮಾಡಿದ್ದೇವೆ. ಈಗ ಆಗಿರುವ ತಿದ್ದುಪಡಿಗೆ ನಮ್ಮ ವಿರೋಧ ಇಲ್ಲ. ಆದರೆ ಇದು ಒಬ್ಬರಿಂದಲೇ ಆಗಿರುವ ಕೆಲಸ ಎಂದು ಬಿಂಬಿಸುತ್ತಿರುವುದು ಮಾತ್ರ ವಿಪರ್ಯಾಸ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಹಾಗೂ ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ: ಕೊಡಗಿನ ಜಮ್ಮಾ ಬಾಣೆ ವಿಷಯಕ್ಕೆ ಸಂಬಂಧಿಸಿದಂತೆ ನಾವೂ ವಿಧಾನಸಭೆಯ ಹೊರಗೆ ಹಾಗೂ ಒಳಗೆ ಹಲವು ವರ್ಷ ಹೋರಾಟ ಮಾಡಿದ್ದೇವೆ. ಈಗ ಆಗಿರುವ ತಿದ್ದುಪಡಿಗೆ ನಮ್ಮ ವಿರೋಧ ಇಲ್ಲ. ಆದರೆ ಇದು ಒಬ್ಬರಿಂದಲೇ ಆಗಿರುವ ಕೆಲಸ ಎಂದು ಬಿಂಬಿಸುತ್ತಿರುವುದು ಮಾತ್ರ ವಿಪರ್ಯಾಸ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್ ಹಾಗೂ ಮಾಜಿ ಎಂಎಲ್ಸಿ ಸುನಿಲ್ ಸುಬ್ರಮಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮೂವರು ನಾಯಕರು ಈ ಬೆಳವಣಿಗೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿ ಶಾಸಕ ಕೆ.ಜಿ. ಬೋಪಯ್ಯ ಜಮ್ಮಾ ಬಾಣೆ ತಿದ್ದುಪಡಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರಚಿಸಲಾಗಿಲ್ಲ. ಆದರೆ ಶಾಸಕರು ತಾನೆ ಎಲ್ಲವನ್ನೂ ಮಾಡಿದ್ದು ಎಂದು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ನಾವು ಹೋರಾಟ ಮಾಡಿದ್ದೇವೆ. ಆದರೆ ನಮ್ಮ ಬಗ್ಗೆ ಕೀಳು ಶಬ್ದ ಪ್ರಯೋಗ ಮಾಡಿದ್ದಾರೆ. ನಾವು ದಂಡಪಿಂಡಗಳಲ್ಲ ಎಂದು ಬೋಪಯ್ಯ ಟೀಕಿಸಿದರು.ಜಮ್ಮಾ ಬಾಣೆ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಬಿಜೆಪಿ ಸಿದ್ಧವಿದೆ. ಇದಕ್ಕೆ ಆಡಳಿತ ಪಕ್ಷದವರು ವೇದಿಕೆ ಸಿದ್ಧಪಡಿಸಲಿ ಎಂದ ಬೋಪಯ್ಯ, ಕೊಡಗಿನ ಜನ ನೆಮ್ಮದಿಯಲ್ಲಿ ಇರಬೇಕು. ಹಾಗಾಗಿ ಅವರ ಭಾಷೆಯಲ್ಲಿ ಉತ್ತರ ಕೊಡಲು ಹೋಗುವುದಿಲ್ಲ. ನಾವು ಹೋರಾಟ ಮಾಡಿಕೊಂಡು ಬಂದವರು. ಹೋರಾಟ ನಮಗೆ ಹೊಸದಲ್ಲ ಎಂದು ಹೇಳಿದರು. ಕೊಡಗಿನಲ್ಲಿ ಜಮ್ಮಾ ಬಾಣೆ ಸಮಸ್ಯೆ ಬಹಳ ಹಳೆಯದ್ದು. ಕಾಂಗ್ರೆಸ್ ಸರ್ಕಾರಗಳು ಜಮ್ಮಾ ಬಾಣೆ ಜಾಗ ಸರ್ಕಾರಕ್ಕೆ ಸೇರಿದ್ದು ಎಂಬ ನಿಲುವನ್ನು ಸುತ್ತೋಲೆಗಳ ಮೂಲಕ ಹೇಳುತ್ತಾ ಬಂದಿದೆ. ಇದರ ವಿರುದ್ಧ ಅನೇಕ ಹೋರಾಟಗಳನ್ನು ಜಿಲ್ಲೆಯಲ್ಲಿ ಪಕ್ಷಾತೀತವಾಗಿ ನಡೆಸಲಾಗಿದೆ. 2006ರ ನವೆಂಬರ್ 1ರಂದು ಕನ್ನಡರಾಜ್ಯೋತ್ಸವ ಬಹಿಷ್ಕರಿಸಿ ಕೊಡಗು ಬಂದ್ ಕೂಡ ನಡೆಸಲಾಗಿತ್ತು. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಜಮ್ಮಾ ಬಾಣೆ ಸುತ್ತೋಲೆ ವಾಪಸ್ ಪಡೆದುಕೊಳ್ಳಲಾಗಿತ್ತು. 2011ರಲ್ಲಿ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ಭೂಕಂದಾಯ ಕಾಯಿದೆಗೆ ತಿದ್ದುಪಡಿ ತಂದು ಜಮ್ಮಾ ಹಿಡುವಳಿ ಮತ್ತು ಕಂದಾಯ ವಿಧಿಸುವ ಅವಕಾಶ ಮಾಡಿಕೊಟ್ಟಿದ್ದರೂ ಅಂದಿನ ರಾಜ್ಯಪಾಲರು ಒಪ್ಪಿಗೆ ಕೊಟ್ಟಿರಲಿಲ್ಲ. 2012ರ ರಾಷ್ಟ್ರಪತಿ ಒಪ್ಪಿಗೆ ಕೊಟ್ಟು 2012ರ ಫೆ.1ಕ್ಕೆ ಕಾಯಿದೆ ಜಾರಿಗೆ ಬಂದಿದ್ದರೂ 2013ರಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾನಕ್ಕೆ ತಂದಿರಲಿಲ್ಲ. ಇದರ ಬದಲು ಕಾಂಗ್ರೆಸ್‌ನ ಕೆಲವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ರಿಟ್ ಅರ್ಜಿಗಳನ್ನು ವಜಾ ಮಾಡಿ 30 ದಿನಗಳ ಒಳಗಾಗಿ ತಿದ್ದುಪಡಿ ಜಾರಿ ಮಾಡುವಂತೆ 2024ರ ಜು.25ರಂದು ತೀರ್ಪು ನೀಡಿತ್ತು. ಆದರೆ ಬಿಜೆಪಿ ಸರ್ಕಾರದ ತಿದ್ದುಪಡಿಯನ್ನು ಜಾರಿಗೆ ತರಲು ಆಗುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನವರು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಕಾಂಗ್ರೆಸ್‌ನವರು ತಂದ ತಿದ್ದುಪಡಿಯ ಟಿಪ್ಪಣಿಯಲ್ಲಿ ಈ ಅಂಶದ ಪ್ರಸ್ತಾಪವೇ ಇಲ್ಲ ಹೇಳಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಭೂಕಂದಾಯ ಕಾಯಿದೆಗೆ ತಿದ್ದುಪಡಿ ಮಾಡುವ ಮೂಲಕ ಕೊಡಗಿನ ಪಟ್ಟೆದಾರರಿಗೆ ಬ್ರಿಟಿಷ್ ಏಜೆಂಟರು ಎನ್ನುವ ಹಣೆಪಟ್ಟಿ ಅಂಟಿಸಿದ್ದು ಬಿಟ್ಟರೆ ಬೇರೇನೂ ಪ್ರಯೋಜನ ಆಗಿಲ್ಲ. ಕಂದಾಯ ಸಚಿವರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಆದರೆ ಕೊಡಗಿನ ಶಾಸಕರು ಏಜೆಂಟರು ಎಂಬ ಪದವನ್ನು ಕಡತದಿಂದ ಯಾಕೆ ತೆಗೆಸುವ ಪ್ರಯತ್ನ ಮಾಡಿಲ್ಲ ಎಂದು ಬೋಪಯ್ಯ ಪ್ರಶ್ನಿಸಿದರು.ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ಜಮ್ಮಾ ಬಾಣೆ ತಿದ್ದುಪಡಿ ಶೇ. 90 ಕೆಲಸ ಮಾಡಿದ್ದು ನಾವು. ಉಳಿದ ಶೇ.10 ಕೆಲಸ ಮಾಡಿದ್ದೇ ದೊಡ್ಡ ಸಾಧನೆ ಎಂದು ಡಂಗುರ ಸಾರಲಾಗುತ್ತಿದೆ. ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಭಾಷೆಯ ಬಳಕೆ ಸರಿಯಾಗಿ ಇರಲಿ. ಇಲ್ಲದಿದ್ದರೆ ಇದಕ್ಕೆ ಬಿಜೆಪಿ ತಕ್ಕ ಉತ್ತರ ನೀಡಲಿದೆ ಎಂದು ಹೇಳಿದರು. ಮಾಜಿ ಎಂಎಲ್‌ಸಿ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ ಜಮ್ಮಾ ಬಾಣೆ ಸಮಸ್ಯೆ ಈಗಿನ ಸಮಸ್ಯೆಯಲ್ಲ. ಅದು ಹಲವು ದಶಕದ ಸಮಸ್ಯೆ. ಆದ್ದರಿಂದ ಅಂದು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರು ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ ಎಲ್ಲಾ ವಿಷಯದಲ್ಲೂ ಕಾಂಗ್ರೆಸ್‌ನವರು ಜನರಿಗೆ ತಪ್ಪು ಸಂದೇಶ ಕೊಡುವ ಕೆಲಸ ಮಾಡುತ್ತಿದ್ದಾರೆ. ವಿಬಿ ಜಿ ರಾಮ್ ಜಿ ವಿಷಯದಲ್ಲೂ ಹೀಗೆಯೇ ಮಾಡುತ್ತಿದ್ದಾರೆ. ಯೋಜನೆಯಲ್ಲಿ ರಾಜ್ಯ ಸರ್ಕಾರ ಶೇ.40 ಪಾಲು ಕೊಡಬೇಕು. ಇದು ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ. ಹಾಗಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್ ಇದ್ದರು.