ರಾಮನಗರ: ಭೂಮಿಯನ್ನು ಉಳಿಸಿಕೊಳ್ಳಲು ನಾವೇ ಕೇಸ್ ಹಾಕಿಸಿಕೊಳ್ಳಲು, ಜೈಲಿಗೆ ಹೋಗಲು ಸಿದ್ಧರಿದ್ದೇವೆ. ನೀವು ಗುಂಡು ಹೊಡೆದರೆ ಎದೆಯೊಡ್ಡಲೂ ಸಿದ್ಧರಿದ್ದೇವೆ. ರೈತರಿಗೆ ನ್ಯಾಯ ದೊರಕಿಸಿಕೊಡುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು.
ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ಪಕ್ಷದ ವತಿಯಿಂದ ನಡೆದ ಪಾದಯಾತ್ರೆಯಲ್ಲಿ ಮಾತನಾಡಿದ ಅವರು, ಟೌನ್ ಶಿಪ್ ಯೋಜನೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ ನನ್ನ ಮೇಲೆ ಆರು ಕೇಸು ಹಾಕಿಸಿದ್ದಾರೆ. ಇಷ್ಟೇ ಅಲ್ಲ, ರೈತ ಮಹಿಳೆಯರು ಮತ್ತು ಯುವಕರ ಮೇಲೂ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಕಿಡಿಕಾರಿದರು.ನಾನು ರಾಜಕೀಯ ಲಾಭಕ್ಕಾಗಿ ಬಂದಿಲ್ಲ. ರೈತರಿಗಾಗಿ ಬಂದಿದ್ದೇನೆಯೇ ಹೊರತು ಅವರ ಮತ ಪಡೆಯಲು ಅಲ್ಲ. ನಾವು ಹಳ್ಳಿಗಳಲ್ಲಿ ರೈತರನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ಆದರೆ, ಈ ಭಾಗದ ಏಜೆಂಟರು ಮುಗ್ಧ ರೈತರಿಗೆ ಚೆಕ್ ಕೊಡಿಸಿ ಊರಿಂದ ಓಡಿಸುತ್ತಿದ್ದಾರೆ ಎಂದು ಟೀಕಿಸಿದರು.
ಒಂದೂವರೆ ವರ್ಷದಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಇದು ಪಂಚೇಂದ್ರಿಗಳನ್ನು ಕಳೆದುಕೊಂಡಿರುವ ಸರ್ಕಾರಕ್ಕೆ ಕಾಣುತ್ತಿಲ್ಲ. ಆದರೆ, ಸುಳ್ಳು ಹೇಳಿ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸಲು ಹುನ್ನಾರ ನಡೆಸುತ್ತಿದೆ. ರೈತರ ಸಮಾಧಿ ಮೇಲೆ ಟೌನ್ ಶಿಪ್ ನಿರ್ಮಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.ಕಾಂಗ್ರೆಸ್ ಮುಖಂಡರುಗಳೇ ಏಜೆಂಟ್ ಗಳಾಗಿ ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿಸಿದ್ದಾರೆ. ಇದರ ಹಿಂದೆ ಮುಖ್ಯಮಂತ್ರಿಗಳ ಕೈವಾಡ ಇದೆ. ಬಲವಂತವಾಗಿ ಭೂಮಿ ಕಸಿದುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಮನೆ ಹಾಳು ಕೆಲಸ ಮಾಡುತ್ತಿದೆ ಎಂದು ಎ.ಮಂಜುನಾಥ್ ಟೀಕಿಸಿದರು.
ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜಿಲ್ಲಾಧ್ಯಕ್ಷ ಜಯಮುತ್ತು ಮತ್ತಿತರರು ಹಾಜರಿದ್ದರು.