ಸಾರಾಂಶ
ಕೊಬ್ಬರಿ ಖರೀದಿ ಹಾಗೂ ನೋಂದಣಿಯಲ್ಲಿ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು. ಅದಕ್ಕೆ ತಾನು ಬಿಡುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು. ಅರಸೀಕೆರೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿ ನೋಂದಣಿ ಪ್ರಗತಿ ಪರಿಶೀಲಿಸಿದರು.
ನೋಂದಣಿ ಪ್ರಕ್ರಿಯೆ ಪರಿಶೀಲನೆ
ಕನ್ನಡಪ್ರಭ ವಾರ್ತೆ ಅರಸೀಕೆರೆಕೊಬ್ಬರಿ ಖರೀದಿ ಹಾಗೂ ನೋಂದಣಿಯಲ್ಲಿ ಯಾವುದೇ ಕಾರಣಕ್ಕೂ ಅನ್ಯಾಯ ಆಗಬಾರದು. ಅದಕ್ಕೆ ತಾನು ಬಿಡುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿ ನೋಂದಣಿ ಪ್ರಗತಿ ಪರಿಶೀಲಿಸಿ ಮಾತನಾಡಿ, ‘ವಸ್ತುಸ್ಥಿತಿ ತಿಳಿಯಬೇಕು ಎನ್ನುವ ಉದ್ದೇಶದಿಂದ ಚನ್ನರಾಪಟ್ಟಣ, ತಾಲೂಕಿನ ಜಾವಗಲ್, ಬಾಣಾವರ, ಗಂಡಸಿ ಅರಸೀಕೆರೆ, ಒಳಗೊಂಡಂತೆ ಬಹುತೇಕ ಎಪಿಎಂಸಿ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ವಾಸ್ತವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ನನ್ನ ಪ್ರವಾಸ ಸಹಿಸದ ಕೆಲವರು ಇದನ್ನೇ ದೊಡ್ಡದು ಮಾಡಲು ಹೊರಟಿರುವುದು ಅಕ್ಷಮ್ಯ. ಜಿಲ್ಲಾಧಿಕಾರಿಗಳು ಸೂಚನೆ ನೀಡದಿದ್ದರೂ ಟೋಕನ್ ವಿತರಿಸಿದ್ದೇಕೆ? ಅಕ್ರಮವಾಗಿ ನೋಂದಣಿ ಮಾಡಿಸುವ ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಲೋಪ ಕಂಡು ಬಂದಲ್ಲಿ ಖರೀದಿ ಕೇಂದ್ರದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.ಸಮಸ್ಯೆಯ ಗಂಭೀರತೆಯನ್ನು ಈಗಾಗಲೇ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಹಾಸನ, ತುಮಕೂರು, ಮಂಡ್ಯ ಸೇರಿದಂತೆ ತೆಂಗು ಬೆಳೆಯುವ ಬೇರೆ ಬೇರೆ ಜಿಲ್ಲೆಗಳಿಗೆ ಹೆಚ್ಚುವರಿ ಕೊಬ್ಬರಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಜಿಲ್ಲೆಯ ರೈತರು ಹೆಚ್ಚುವರಿ ಐವತ್ತು ಸಾವಿರ ಕ್ವಿಂಟಾಲ್ ಮಾರಾಟಕ್ಕೆ ಅನುಕೂಲವಾಗಲಿದೆ. ಬಾಣಾವರ ಹಾಗೂ ಜೆ.ಸಿ.ಪುರ ಉಪಪ್ರಾಂಗಣದಲ್ಲಿ ತಲಾ ಒಂದು ಹಾಗೂ ನಗರದ ಪ್ರಾಂಗಣದಲ್ಲಿ ಹೆಚ್ಚುವರಿ ಎರಡು ತೆರೆದು ನೋಂದಣಿ ಮಾಡಲಾಗುವುದು ಎಂದು ಹೇಳಿದರು.
ಮುಖಂಡರಾದ ಹೊಸೂರು ಗಂಗಾಧರ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ಸದಸ್ಯರಾದ ಜಾಕೀರ್ ಹುಸೇನ್, ಈಶ್ವರಪ್ಪ, ಹರ್ಷವರ್ಧನ್ ರಾಜ್, ಬಿ.ಜಿ. ನಿರಂಜನ್, ತಾಪಂ ಮಾಜಿ ಅಧ್ಯಕ್ಷ ಶೇಖರನಾಯ್ಕ್, ಲೋಕೇಶ್, ಮಂಜುನಾಥ್, ಶೇಖರ್ ಯಾದವ್, ಶಿವಕುಮಾರ್ ಹಾಜರಿದ್ದರು.ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿದ ಸಂಸದ ಪ್ರಜ್ವಲ್ ರೇವಣ್ಣ.
.