ಸಾರಾಂಶ
ಡಾ.ಜಿ. ಗೋವಿಂದಯ್ಯ ಅಭಿಪ್ರಾಯ । ಭೈರಮಂಗಲ ಗ್ರಾಪಂ ನಲ್ಲಿ ಸಂವಿಧಾನ ಜಾಗೃತಿ ಜಾಥಾ ಕನ್ನಡಪ್ರಭ ವಾರ್ತೆ ರಾಮನಗರ
ದೇಶದ ಎಲ್ಲಾ ವರ್ಗದ ಜನರಿಗೆ ಸಂವಿಧಾನವು ನ್ಯಾಯ ಒದಗಿಸಿದೆ. ನಮಗೆ ರಾಮ ಮಂದಿರ ಬೇಡ, ಭೀಮನ ಸಂವಿಧಾನ ಬೇಕು ಎಂದು ಸಮತಾ ಸೈನಿಕ ದಳದ ಯುವ ಘಟಕದ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ ಹೇಳಿದರು.ಬಿಡದಿ ಹೋಬಳಿ ಭೈರಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಸ್ವಾಗತಿಸಿ ಮಾತನಾಡಿದ ಅವರು, ಸಂವಿಧಾನ ಇರುವುದರಿಂದ ನಾವೆಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ. ಹಾಗಾಗಿ ಸಂವಿಧಾನದ ನಿಯಮಗಳನ್ನು ನಾವೆಲ್ಲ ಪಾಲನೆ ಮಾಡಬೇಕು. ಸಂವಿಧಾನವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ರನ್ನು ಕೇವಲ ದಲಿತ ಸಮುದಾಯಕ್ಕೇ ಸೀಮಿತಗೊಳಿಸಲಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ವ್ಯಕ್ತಿ ಸ್ವಾತಂತ್ರ್ಯ, ಸಮಾನ ಶಿಕ್ಷಣ, ಪ್ರಜೆಯ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು, ಧಾರ್ಮಿಕ ಹಕ್ಕುಗಳನ್ನು ಪ್ರತಿಯೊಬ್ಬ ಪ್ರಜೆಗೂ ಒದಗಿಸಿಕೊಟ್ಟ ಈ ಸಂವಿಧಾನವೇ ನಮ್ಮ ಭಾರತದ ಸರ್ವೋಚ್ಚ ಕಾನೂನು. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ಮೌಲ್ಯಗಳುಳ್ಳ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ನಮಗೆ ನೀಡಿದ್ದಾರೆ ಎಂದು ತಿಳಿಸಿದರು.ಸಾಂವಿಧಾನಿಕ ನಿಯಮಗಳನ್ನು ಹಾಗೂ ಆಶಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿ ಆಳುವ ಸರಕಾರಗಳ ಮೇಲಿದೆ. ಅಂಬೇಡ್ಕರ್ ರು ಮಹಿಳಾ ಮೀಸಲಾತಿಗೆ ಹೋರಾಡಿದ ಪ್ರಥಮ ನಾಯಕ. ಸಂವಿಧಾನವು ಕೇವಲ ಒಂದು ವರ್ಗ, ಭಾಷೆ ಅಥವಾ ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ. ದೇಶದ 140 ಕೋಟಿ ಜನರಿಗೂ ಅನ್ವಯವಾಗುವುದಾಗಿದೆ. ಅದನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಗೋವಿಂದಯ್ಯ ಹೇಳಿದರು.
ಸ್ಥಳೀಯರು ಪೂರ್ಣಕುಂಭ, ಡೊಳ್ಳು ಕುಣಿತ ಸೇರಿ ತಮಟೆ ವಾದ್ಯದ ಮೂಲಕ ಸಂವಿಧಾನ ಜಾಗೃತಿ ಜಾಥ ರಥವನ್ನು ಅದ್ದೂರಿಯಾಗಿ ಸ್ವಾಗತಿಸಿದರು.ತಾಪಂ ಇಒ ಪ್ರದೀಪ್, ಭೈರಮಂಗಲ ಗ್ರಾಪಂ ಪಿಡಿಒ ಉಮೇಶ್, ತಾಪಂ ಮಾಜಿ ಅಧ್ಯಕ್ಷ ಆರ್.ಜಯಚಂದ್ರ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಕಲ್ಬಾಳು, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಶೇಖರ್, ನಾನಾ ಸಂಘಟನೆಗಳ ಮುಖಂಡರಾದ ಮರಳವಾಡಿ ಮಂಜು, ಶಿವಣ್ಣ, ಬಾನಂದೂರು ಕುಮಾರ್, ಲಿಂಗರಾಜ್, ಕುಮಾರ್, ಹೇಮಂತ್, ದಿನೇಶ್, ಕಿರಣ್ ಹಾಗೂ ಗ್ರಾಮಸ್ಥರು ಹಾಜರಿದ್ದರು.
--------------------------------6ಕೆಆರ್ ಎಂಎನ್ 3.ಜೆಪಿಜಿ
ರಾಮನಗರ ತಾಲೂಕಿನ ಭೈರಮಂಗಲ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥ ರಥವನ್ನು ನಾನಾ ಸಂಘಟನೆಗಳ ಮುಖಂಡರು ಸ್ವಾಗತಿಸಿದರು.---------------------------------