ಸಾರಾಂಶ
- ಗುರುವಾರ, ಶುಕ್ರವಾರ ಕಂದಾಯ, ಕೃಷಿ, ಪೊಲೀಸ್ ಇಲಾಖೆಗಳಿಂದ ದಾಳಿ: ಜಿಲ್ಲಾಧಿಕಾರಿ
- ಅಕ್ರಮ ದಾಸ್ತಾನು ಮಾಡಿದವರ ಲೈಸನ್ಸ್ ರದ್ದುಗೊಳಿಸಿ ಅಮಾನತಿಗೆ ಕ್ರಮ: ಡಿಸಿ ಹೇಳಿಕೆ- - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲಾದ್ಯಂತ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗುರುವಾರ ಜಂಟಿ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದವರ ಕಠಿಣ ಕ್ರಮ ಕೈಗೊಂಡಿದ್ದಾರೆ. ರೈತರ ಬೇಡಿಕೆಗಿಂತಲೂ ಜಿಲ್ಲೆಯಲ್ಲಿ ಹೆಚ್ಚು ಯೂರಿಯಾ ದಾಸ್ತಾನಿದೆ. ರೈತರು ಆತಂಕಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅಭಯ ನೀಡಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಆಗಿದೆಯೆಂಬ ವರದಿಗಳ ಅನ್ವಯ ಕಂದಾಯ, ಕೃಷಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಗುರುವಾರ ಎಲ್ಲ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಜಂಟಿ ತಪಾಸಣೆ ಕೈಗೊಂಡಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ. ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂದು ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 33000 ಮೆಟ್ರಿಕ್ ಟನ್ ಯೂರಿಯಾಗೆ ಬೇಡಿಕೆಗೆ ಇದೆ. ಆದರೆ, ಬೇಡಿಕೆಗಿಂತ 3 ಸಾವಿರಕ್ಕೂ ಹೆಚ್ಚು ಮೆಟ್ರಿಕ್ ಟನ್ ದಾಸ್ತಾನಿದ್ದರೂ, ಹರಳು ಯೂರಿಯಾಗೆ ಜಿಲ್ಲೆಯಲ್ಲಿ ಬೇಡಿಕೆ ಇದೆ ಎಂದು ಹೇಳಿದ್ದಾರೆ.
ಶಿವಮೊಗ್ಗದಿಂದ ಜಿಲ್ಲೆಗೆ 454 ಮೆಟ್ರಿಕ್ ಟನ್:ಪ್ರಸ್ತುತ 2640 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನಿದ್ದು, ಜೊತೆಗೆ ಶಿವಮೊಗ್ಗದಿಂದ 454 ಮೆಟ್ರಿಕ್ ಟನ್ ಯೂರಿಯಾ ತರಿಸಿಕೊಳ್ಳಲಾಗುತ್ತಿದೆ. ರೈತರು ಯಥೇಚ್ಛವಾಗಿ ಹರಳು ಯೂರಿಯಾ ಬಳಸುತ್ತಿದ್ದು, ಇದರಿಂದ ಭೂಮಿಯಲ್ಲಿ ಗುಣಮಟ್ಟ ಕಳೆದುಕೊಂಡು, ಬೆಳೆಯಲ್ಲಿ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿರುವುದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಹಾಗಾಗಿ ನ್ಯಾನೊ ಯೂರಿಯಾ ಬಳಕೆಗೆ ಹೆಚ್ಚು ಉತ್ತೇಜಿಸಲು, ಸಮರ್ಪಕ ಯೂರಿಯಾ ವಿತರಣೆಗೆ ಪ್ರತಿ ರೈತರಿಗೆ 2 ಚೀಲದಂತೆ ಯೂರಿಯಾ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ರಸಗೊಬ್ಬರ ಪಡೆಯಲು ರೈತರು ಗ್ರಾಮ ಆಡಳಿತ ಅಧಿಕಾರಿಯಿಂದ ದೃಢೀಕರಣ ಪಡೆದು, ಯೂರಿಯಾ ಪಡೆಯಬಹುದು. ಜಿಲ್ಲೆಯಲ್ಲಿ ಯೂರಿಯಾ ಹೊರತುಪಡಿಸಿ, ಇತರೇ ರಸಗೊಬ್ಬರಗಳ ವ್ಯತ್ಯಯವಾಗಿಲ್ಲ. ಹರಳು ಯೂರಿಯಾಗೆ ಹೆಚ್ಚು ಬೇಡಿಕೆ ಬಂದದ್ದರಿಂದ ರೈತರಲ್ಲಿ ಆತಂಕವಾಗಿದೆ. ಆದರೆ, ಬೇಡಿಕೆಯಷ್ಟು ಪೂರೈಕೆ, ಹಂಚಿಕೆಯೂ ಆಗಿದೆ.ಜಿಲ್ಲೆಯ ಸಗಟು ರಸಗೊಬ್ಬರ ಮಾರಾಟಗಾರರ ಗೋದಾಮು, ಚಿಲ್ಲರೆ ರಸಗೊಬ್ಬರ ಮಾರಾಟಗಾರರ ಅಂಗಡಿಗಳ ಮೇಲೆ ಕಂದಾಯ, ಕೃಷಿ, ಪೊಲೀಸ್ ಇಲಾಖೆ ಅಧಿಕಾರಿಗಳ ಜಂಟಿ ದಾಳಿಯಲ್ಲಿ ಲೋಪ ಎಸಗಿದ ಸಗಟು ಮತ್ತು ಚಿಲ್ಲರೆ ಮಾರಾಟಗಾರರ ಲೈಸೆನ್ಸ್ ರದ್ದುಪಡಿಸಿದ್ದರೆ, ಮತ್ತೆ ಕೆಲವರ ಲೈಸನ್ಸ್ ಅಮಾನತಿನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.
- - -(ಬಾಕ್ಸ್-1)
* ಗೋದಾಮು, ಅಂಗಡಿಗಳ ಮೇಲೆ ದಿಢೀರ್ ದಾಳಿ- ಕೃಷಿ, ಕಂದಾಯ, ಪೊಲೀಸ್ ಇಲಾಖೆಗಳ ಅಧಿಕಾರಿಗಳಿಂದ ಕಾರ್ಯಾಚರಣೆ ದಾವಣಗೆರೆ: ಕೃತಕ ಗೊಬ್ಬರದ ಅಭಾವ, ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ವಿರುದ್ಧ ದೂರುಗಳ ಹಿನ್ನೆಲೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಸೂಚನೆಯಂತೆ ಕಂದಾಯ, ಕೃಷಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ನಗರ, ಜಿಲ್ಲೆಯ ವಿವಿಧೆಡೆ ಗೊಬ್ಬರದ ಗೋದಾಮುಗಳು, ಗೊಬ್ಬರ ವಿತರಕರ ಕಚೇರಿ, ಅಂಗಡಿಗಳ ಮೇಲೆ ಗುರುವಾರ ತಡರಾತ್ರಿವರೆಗೆ ದಿಢೀರ್ ದಾಳಿ ನಡೆಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ನೇತೃತ್ವದಲ್ಲಿ, ಗ್ರಾಮಾಂತರ ಡಿವೈಎಸ್‌ಪಿ ಬಿ.ಎಸ್.ಬಸವರಾಜ ನೇತೃತ್ವದಲ್ಲಿ, ಚನ್ನಗಿರಿ ವ್ಯಾಪ್ತಿಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ಹಾಗೂ ವಿವಿಧ ಠಾಣಾಧಿಕಾರಿಗಳು, ಕೃಷಿ ಹಾಗೂ ಕಂದಾಯ ಅಧಿಕಾರಿಗಳು ಗೋದಾಮು, ಗೊಬ್ಬರದ ಅಂಗಡಿಗಳ ತಪಾಸಣೆ ಮಾಡಿದ್ದು, ಶುಕ್ರವಾರವೂ ಈ ಪರಿಶೀಲನೆ ಕಾರ್ಯಾಚರಣೆ ಮುಂದುವರಿದಿತ್ತು.- - -
(ಬಾಕ್ಸ್-2) * ಸಗಟು ಮಾರಾಟಗಾರರ ಲೈಸೆನ್ಸ್ ರದ್ದು ಸಗಟು ಮಾರಾಟಗಾರರಿಗೆ ಹಂಚಿಕೆಯಾದ ರಸಗೊಬ್ಬರವನ್ನು ಜಿಲ್ಲೆಯ ಚಿಲ್ಲರೆ ಮಾರಾಟಗಾರರಿಗೆ ಪೂರೈಸದೇ ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡಿದ್ದ ದಾವಣಗೆರೆಯ ಆಶಾಪೂರಿ ಫರ್ಟಿಲೈಸರ್ಸ್, ರಾಥೋಡ್ ಫರ್ಟಿಲೈಸರ್ಸ್, ಶ್ರೀ ಮಲ್ಲಿಕಾರ್ಜುನ ಫರ್ಟಿಲೈಸರ್ಸ್, ದಿಬ್ಬದಹಳ್ಳಿ ಆಗ್ರೋ ಸರ್ವೀಸ್, ಶ್ರೀ ಶ್ರೀನಿವಾಸ ಆಗ್ರೋ ಟ್ರೇಡರ್ಸ್, ಕಿಶೋರ್ ಫರ್ಟಿಲೈಸರ್ಸ್, ಚನ್ನಗಿರಿ ತಾಲೂಕಿನ ನಲ್ಲೂರು ವೀರಭದ್ರೇಶ್ವರ ಫರ್ಟಿಲೈಸರ್ಸ್, ಗೋಪನಹಳ್ಳಿ ವೀರಭದ್ರೇಶ್ವರ ಟ್ರೇಡರ್ಸ್ ಅಂಗಡಿ ಲೈಸೆನ್ಸ್‌ಗಳನ್ನು ರದ್ದುಪಡಿಸಲಾಗಿದೆ.- - -
(ಬಾಕ್ಸ್-3)* ಚಿಲ್ಲರೆ ಮಾರಾಟಗಾರರು ರಸಗೊಬ್ಬರವನ್ನು ಎಂ.ಆರ್.ಪಿ. ಅಂದರೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರವನ್ನು ರೈತರಿಗೆ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ, ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಯೂರಿಯಾ ಮಾರಾಟ ಮಾಡುತ್ತಿದ್ದ ದಾವಣಗೆರೆಯ ಭೂಮಿಕಾ ಆಗ್ರೋ ಫರ್ಟಿಲೈಸರ್ಸ್, ವಿನಿತ ಆಗ್ರೋ ಏಜೆನ್ಸೀಸ್, ಕುಮಾರ್ ಆಗ್ರೋ ಏಜೆನ್ಸೀಸ್, ಆನಗೋಡು ಜೇನುಕಲ್ಲು ಸಿದ್ದೇಶ್ವರ ಟ್ರೇಡರ್ಸ್ ಮತ್ತು ಸೂರ್ಯ ಆಗ್ರೋ ಎಂಟರ್ ಪ್ರೈಸಸ್ ಅಂಗಡಿಗಳ ಲೈಸೆನ್ಸ್ ಅಮಾನತಿನಲ್ಲಿ ಇಡಲಾಗಿದೆ.
- - --1ಕೆಡಿವಿಜಿ7.ಜೆಪಿಜಿ: ಜಿ.ಎಂ.ಗಂಗಾಧರ ಸ್ವಾಮಿ -1ಕೆಡಿವಿಜಿ8, 9, 10.ಜೆಪಿಜಿ:
ದಾವಣಗೆರೆ ಜಿಲ್ಲೆಯ ವಿವಿಧೆಡೆ ಗೊಬ್ಬರ ವಿತರಕರು, ಮಾರಾಟಗಾರರ ಗೋದಾಮು, ಅಂಗಡಿಗಳ ಮೇಲೆ ಕಂದಾಯ, ಕೃಷಿ, ಪೊಲೀಸ್ ಅಧಿಕಾರಿಗಳು ಜಂಟಿ ದಾಳಿ ನಡೆಸಿ, ಅಕ್ರಮ ದಾಸ್ತಾನು ಪರಿಶೀಲನೆ ನಡೆಸಿದರು.