ಪಕ್ಷದ್ರೋಹ, ಸಂಘಟನೆ ಲೋಪ ವರಿಷ್ಠರಿಗೆ ತಿಳಿಸಿದ್ದೇವೆ: ಹರೀಶ್‌

| Published : Jul 06 2025, 01:48 AM IST

ಪಕ್ಷದ್ರೋಹ, ಸಂಘಟನೆ ಲೋಪ ವರಿಷ್ಠರಿಗೆ ತಿಳಿಸಿದ್ದೇವೆ: ಹರೀಶ್‌
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭೆ ಚುನಾವಣೆ ವೇಳೆ ಪಕ್ಷದ್ರೋಹ ಕೆಲಸವಾಗಿದೆ. ಪಕ್ಷದ್ರೋಹ, ಸಂಘಟನೆಯಲ್ಲಿ ಆದ ಲೋಪದೋಷಗಳ ಬಗ್ಗೆ ಬೆಂಗಳೂರಿಗೆ ತೆರಳಿ ಬಿಜೆಪಿಯ ಶೇ.95ರಷ್ಟು ಕೋರ್ ಕಮಿಟಿ ಸದಸ್ಯರನ್ನು ಭೇಟಿಯಾಗಿ ವಿವರಿಸಲಾಗಿದೆ. ರಾಷ್ಟ್ರೀಯ ನಾಯಕರ ಗಮನಕ್ಕೂ ತಂದಿದ್ದೇವೆ ಎಂದು ಹರಿಹರ ಶಾಸಕ ಬಿ.ಪಿ.ಹರೀಶ ಹೇಳಿದ್ದಾರೆ.

- ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ದ್ರೋಹ: ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭೆ ಚುನಾವಣೆ ವೇಳೆ ಪಕ್ಷದ್ರೋಹ ಕೆಲಸವಾಗಿದೆ. ಪಕ್ಷದ್ರೋಹ, ಸಂಘಟನೆಯಲ್ಲಿ ಆದ ಲೋಪದೋಷಗಳ ಬಗ್ಗೆ ಬೆಂಗಳೂರಿಗೆ ತೆರಳಿ ಬಿಜೆಪಿಯ ಶೇ.95ರಷ್ಟು ಕೋರ್ ಕಮಿಟಿ ಸದಸ್ಯರನ್ನು ಭೇಟಿಯಾಗಿ ವಿವರಿಸಲಾಗಿದೆ. ರಾಷ್ಟ್ರೀಯ ನಾಯಕರ ಗಮನಕ್ಕೂ ತಂದಿದ್ದೇವೆ ಎಂದು ಹರಿಹರ ಶಾಸಕ ಬಿ.ಪಿ.ಹರೀಶ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ವೇಳೆ ಪಕ್ಷದ್ರೋಹವಾಗಿದೆ. ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಹಾಗೂ ನನ್ನ ಬಳಿ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರೇ ಎಲ್ಲ ವಿಚಾರ ಗಮನಕ್ಕೆ ತಂದಿದ್ದರು. ಈ ಎಲ್ಲ ವಿಷಯ ರಾಜ್ಯ ಕೋರ್ ಕಮಿಟಿ ಸದಸ್ಯರ ಗಮನಕ್ಕೆ ತಂದಿದ್ದೇವೆ ಎಂದರು.

ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಹೊರತುಪಡಿಸಿ ಬೇರೆ ಎಲ್ಲರನ್ನೂ ಭೇಟಿ ಮಾಡಿದ್ದೇವೆ. ನಮ್ಮ ಕಷ್ಟ, ಸುಖಗಳನ್ನು ಕೋರ್ ಕಮಿಟಿ ಸದಸ್ಯರ ಜೊತೆಗೆ ಚರ್ಚಿಸಿದ್ದೇವೆ. ಈ ಬಗ್ಗೆ ಜಿಲ್ಲೆಯ ಕೆಲವು ನಾಯಕರನ್ನು ಪಕ್ಷದ ಕಚೇರಿಗೆ ಕರೆಸಿಕೊಂಡು ಚರ್ಚೆ ಮಾಡಿದ್ದ ವಿಚಾರ ಮಾಧ್ಯಮಗಳಲ್ಲಷ್ಟೇ ಗಮನಿಸಿದ್ದೇನೆ. ನಮ್ಮ ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿ ನೋಟಿಸ್ ಹಿನ್ನೆಲೆ ಮಾಧ್ಯಮಗಳ ಮುಂದೆ ನಾವು ಏನನ್ನೂ ಹೇಳುವುದಿಲ್ಲ ಎಂದರು.

ನಮ್ಮ ತಂಡವೇ ಕಾರಣ:

ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳ್ಳಲು, ರಾಜ್ಯದಲ್ಲಿ ವಾಲ್ಮೀಕಿ ಹಗರಣ ತನಿಖೆ ಸಿಬಿಐಗೆ ಒಪ್ಪಿಸಲು ಮುಖ್ಯ ಕಾರಣ ನಮ್ಮ ತಂಡವಾಗಿದೆ. ಬಸವನಗೌಡ ಪಾಟೀಲ್ ಯತ್ನಾಳ ಇರಬಹುದು, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ನಾವೆಲ್ಲ ಸೇರಿ ಹೋರಾಟ ಮಾಡಿದ್ದಕ್ಕೆ ಹೆಮ್ಮೆ ಇದೆ. ದೇಶದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಯಾಗುವಲ್ಲಿ ಮುಖ್ಯ ಕಾರಣವೂ ನಮ್ಮ ತಂಡವೇ ಆಗಿದೆ ಎಂದು ಶಾಸಕ ಹರೀಶ ಹೇಳಿದರು.

ಜು.8ರಂದು ದಾವಣಗೆರೆಯಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಜನ್ಮದಿನ ಸಮಾರಂಭವು ಸಿದ್ದೇಶ್ವರ ಅಭಿಮಾನಿ ಬಳಗದಿಂದ ನಡೆಯಲಿದೆ. ಯತ್ನಾಳ ಅವರನ್ನು ನಮ್ಮ ಪಕ್ಷ ಉಚ್ಛಾಟಿಸಿದೆ. ಹಾಗಾಗಿ ಪಕ್ಷದ ಶಿಸ್ತು ಉಲ್ಲಂಘನೆ ಆಗಬಾರದೆಂಬ ಕಾರಣಕ್ಕೆ ಆಹ್ವಾನ ಪತ್ರಿಕೆಯಲ್ಲಿ ಯತ್ನಾಳ್ ಹೆಸರನ್ನು ಬಿಟ್ಟಿದ್ದೇವಷ್ಟೆ ಎಂದರು.

- - -

(ಕೋಟ್‌)

ಗ್ರಾಮ ಘಟಕದಿಂದ ರಾಷ್ಟ್ರೀಯ ಅಧ್ಯಕ್ಷರವರೆಗೂ ಬಿಜೆಪಿಯಲ್ಲಿ ಚುನಾವಣೆ ಆಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಇನ್ನೂ ಆಗಿಲ್ಲ. ದೇಶದ ಅನೇಕ ರಾಜ್ಯಗಳ ಬಿಜೆಪಿ ಅಧ್ಯಕ್ಷರ ಘೋಷಣೆಯಾಗಿದೆ. ನಾಲ್ಕೈದು ರಾಜ್ಯಗಳ ಅಧ್ಯಕ್ಷರ ಆಯ್ಕೆ ಬಾಕಿ ಇದೆ. ಈಗಾಗಲೇ ನಾವು ಹೇಳಬೇಕಾಗಿದ್ದನ್ನೆಲ್ಲಾ ಪಕ್ಷದ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದೇವೆ.

- ಬಿ.ಪಿ.ಹರೀಶ, ಬಿಜೆಪಿ ಶಾಸಕ, ಹರಿಹರ ಕ್ಷೇತ್ರ

- - -

-5ಕೆಡಿವಿಜಿ4, 5: ಬಿ.ಪಿ.ಹರೀಶ