- ಹರಿಹರ ಪೀಠ ಗೆಸ್ಟ್ ಹೌಸ್ ರೀತಿ ಆಗಿರದೇ ಸಮಾಜದ ಮಠವಾಗಿರಬೇಕು: ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ

- ಶ್ರೀಗಳನ್ನು ಪೀಠದಿಂದ ತೆಗೆಯಲು ಸಭೆ ಕರೆದಿದ್ದಾರೆಂದು ಸುಳ್ಳು ಸುದ್ದಿ ಹರಡಿ, ಗದ್ದಲ ಎಬ್ಬಿಸಿದ್ದು ಸರಿಯಲ್ಲ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹರಿಹರ ಪಂಚಮಸಾಲಿ ಪೀಠದ ವಿಚಾರದಲ್ಲಿ ಇನ್ನೂ ಸಹ ಕಾಲ ಮಿಂಚಿಲ್ಲ. ಶ್ರೀಮಠದ ಧಾರ್ಮಿಕ ಆಚರಣೆ, ಅನುಷ್ಠಾನ, ಪರಂಪರೆಯನ್ನು ಉಳಿಸಿಕೊಂಡು, ಸಮಾಜ ಮುನ್ನಡೆಸುವಂತಹ ಆಯ್ಕೆಯನ್ನು ಇದೀಗ ಶ್ರೀ ವಚನಾನಂದ ಸ್ವಾಮೀಜಿಗೆ ಬಿಟ್ಟಿದ್ದೇವೆ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ರಾಜ್ಯ ನಾಯಕರು, ಶ್ರೀ ಪೀಠದ ಧರ್ಮದರ್ಶಿಗಳು, ಮುಖಂಡರು ಸ್ಪಷ್ಟಪಡಿಸಿದರು.


ನಗರದ ಪಂಚಮಸಾಲಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು, ಹರಿಹರ ಪೀಠವು ಗೆಸ್ಟ್ ಹೌಸ್ ರೀತಿ ಆಗಿರದೇ, ಸಮಾಜದ ಮಠವಾಗಿರಬೇಕು. ಪಂಚಮಸಾಲಿ ಆಚಾರ, ವಿಚಾರ, ಸಂಪ್ರದಾಯಗಳನ್ನು ಮುನ್ನಡೆಸಿಕೊಂಡು ಹೋಗುವ ಕೆಲಸವು ಶ್ರೀಗಳಿಂದ ಆಗಬೇಕು. ಯಾವುದನ್ನು ಮಾಡಬೇಕೆಂಬ ಆಯ್ಕೆ ಸ್ವಾಮೀಜಿಗಳದಾಗಿದೆ ಎಂದರು.

ವಚನಾನಂದ ಶ್ರೀಗಳನ್ನು ತಿದ್ದುವ ಕೆಲಸ:

ಶ್ರೀ ವಚನಾನಂದ ಸ್ವಾಮೀಜಿಗಳನ್ನು ಪೀಠದಿಂದ ತೆಗೆಯುವುದಲ್ಲ, ತಿದ್ದುವ ಕೆಲಸ ಆಗಬೇಕಾಗಿದೆ. ವಿವಿಧ ಮಠಾಧೀಶರು ಹೇಗೆ ತಮ್ಮ ಸಮುದಾಯಗಳನ್ನು ಮುನ್ನಡೆಸುತ್ತಾರೋ, ಆಚಾರ, ವಿಚಾರ, ಸಂಪ್ರದಾಯವನ್ನು ಕಲಿಸುತ್ತಾರೋ, ಅಂತಹ ಕೆಲಸವೂ ಶ್ರೀಗಳಿಂದ ಆಗಬೇಕು. ಶ್ರೀ ಪೀಠದ ಗುರುಗಳಾಗಿ ಶ್ರೀ ವಚನಾನಂದ ಸ್ವಾಮೀಜಿ ಏನು ಮಾಡುತ್ತಾರೋ, ಅಂತಹದ್ದು ಆಗಬೇಕಾಗಿದೆ. ಆದರೆ, ಶ್ರೀಮಠದಲ್ಲಿ ಶ್ರೀಗಳನ್ನು ಪೀಠದಿಂದ ತೆಗೆಯಲು ಸಭೆ ಕರೆದಿದ್ದಾರೆಂದು ಸುಳ್ಳು ಸುದ್ದಿ ಹರಡಿ, ಗದ್ದಲ ಎಬ್ಬಿಸಿದ್ದು ಸರಿಯಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಸೋಲ್ ಟ್ರಸ್ಟ್‌ ಅಂತ ಹೇಳಿದರೆ ಏನರ್ಥ?:

ಶ್ರೀಮಠದಲ್ಲಿ ನಯಾಪೈಸೆಯೂ ವ್ಯತ್ಯಾಸವಾಗಿಲ್ಲ. ಪಂಚಮಸಾಲಿ ಪೀಠ ನಮ್ಮಂತಹ ಲಕ್ಷಾಂತರ ಜನರ ಕನಸು. ಸಮಾಜದ ಋಣ ತೀರಿಸುವ ಕೆಲಸವನ್ನು ನಾವೆಲ್ಲರೂ ಮಾಡುತ್ತಿದ್ದೇವೆ. ಶ್ರೀಗಳು ಹಿರಿಯರನ್ನು ದೂರ ಇಡುತ್ತಿದ್ದರು. ಟ್ರಸ್ಟಿಗಳನ್ನೇ ಬದಲಿಸಲು ಹೇಳುತ್ತಿದ್ದರು. ಸೋಲ್ ಟ್ರಸ್ಟ್ ಮಾಡಿದರೆ, ತಾವು ಮುನ್ನಡೆಸುವುದಾಗಿ ಹೇಳುತ್ತಿದ್ದರು. ಪಂಚಮಸಾಲಿ ಪೀಠವನ್ನು 1994ರಿಂದ ಎಲ್ಲರೂ ಪ್ರಯತ್ನಪಟ್ಟು, ಸಾಕಷ್ಟು ಪರಿಶ್ರಮದಿಂದ ಕಟ್ಟಿದ್ದೇವೆ. ಅಂತಹ ಮಠದ ಟ್ರಸ್ಟಿಗಳನ್ನು ಬದಲಿಸುವಂತೆ ಹೇಳುವುದು, ಸೋಲ್ ಟ್ರಸ್ಟ್ ಮಾಡುವಂತೆ ಹೇಳಿದರೆ ಏನರ್ಥ ಎಂದು ಅವರು ಪ್ರಶ್ನಿಸಿದರು.

ಸ್ವಾಮೀಜಿಯನ್ನು ಯಾರೂ ಕಪಿಮುಷ್ಟಿಯಲ್ಲಿಟ್ಟಿಲ್ಲ:

ನಮ್ಮದು ರಾಜಕೀಯವಾಗಲೀ, ಸ್ವಾರ್ಥದ ಕೆಲಸವಾಗಲಿ ಅಲ್ಲ. ಶ್ರೀ ವಚನಾನಂದ ಸ್ವಾಮೀಜಿ 10 ದಿನವೆಂದು 40 ದಿನಗಳ ವಿದೇಶ ಪ್ರವಾಸಕ್ಕೆ ಹೋದರು. ಪ್ರಯಾಗರಾಜ್‌ಗೂ ಹೋಗಿ ಬಂದರು. ಯಾರೂ ಸ್ವಾಮೀಜಿಯನ್ನು ಇಲ್ಲಿ ಕಪಿಮುಷ್ಟಿಯಲ್ಲಿಟ್ಟಿಲ್ಲ. ಸಮಾಜವನ್ನು ಕಟ್ಟಿದವರು ನಾವು. ಹರಜಾತ್ರೆಯನ್ನು ಸರಳವಾಗಿ ಮಾಡುವಂತೆ ಹೇಳಿದ್ದೆವು. ಆದರೆ, ತಮಗೆ ತಿಳಿದಂತೆ ಸ್ವಾಮೀಜಿ ಮಾಡಿದರು. ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವ ಸಂತೋಷ ಲಾಡ್‌ ವೇದಿಕೆಯಲ್ಲಿಲ್ಲದಿದ್ದರೂ ಅಂತಹವರಿಗೆ ಹೊಗಳಿ, ಚಪ್ಪಾಳೆ ತಟ್ಟುವಂತೆ ಸಮಾಜಕ್ಕೆ ಕರೆ ನೀಡುತ್ತಾರೆಂದರೆ ಇದನ್ನು ಸಮಾಜ ಸಂಘಟನೆ ಎನ್ನಬೇಕೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಧರ್ಮದರ್ಶಿ ಚಂದ್ರಶೇಖರ ಪೂಜಾರ ಮಾತನಾಡಿ, ನನ್ನ ಬಳಿ ₹25 ಲಕ್ಷ ಚೆಕ್ ಕೊಟ್ಟಿದ್ದೇನೆಂದವರು ಅದನ್ನು ಸಾಬೀತುಪಡಿಸಬೇಕಲ್ಲವೇ? ಹೀಗೆ ಸುಳ್ಳು ಹೇಳಿ ಹೋದರೆ, ನಾವು ಜನರ ಮಧ್ಯೆ ಬಾಳುವುದಕ್ಕೆ ಸಾಧ್ಯವೇ? ಸ್ಥಳೀಯವಾಗಿ ನಮಗೆಷ್ಟು ಕಷ್ಟವಾಗುತ್ತದೆಂಬ ಅರಿವು ಅಂತಹವರಿಗೆ ಇಲ್ಲವೇ? ಮಾಜಿ ಶಾಸಕ ಅರುಣಕುಮಾರ ₹1.60 ಕೋಟಿ ಕೊಟ್ಟಿದ್ದರೆ ಅದನ್ನೇನಾದರೂ ಲಿಖಿತವಾಗಿ ನೀಡಿದ್ದಾರಾ? ಯಾರೇ ಆಗಲಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ನಿಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಬೀದಿಗೆ ತರಬೇಡಿ. 120 ಕೆಜಿ ಅಲ್ಲ, 174 ಕೆಜಿ ನಮ್ಮ ಮಠದ್ದು ಇರುವುದು. ಅದನ್ನು ಸುರಕ್ಷಿತವಾಗಿ ಬ್ಯಾಂಕ್ ಲಾಕರ್‌ನಲ್ಲಿ ಬಿ.ಸಿ.ಉಮಾಪತಿ ಇತರೆ ಧರ್ಮದರ್ಶಿಗಳು ಇಟ್ಟಿದ್ದಾರೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ಶ್ವಾಸ ಪೀಠ ತ್ಯಜಿಸಿ, ಪಂಚಮಸಾಲಿ ಪೀಠದಲ್ಲಿ ಮುಂದುವರಿಯಲಿ:

ಸಮಾಜದ ಹಿರಿಯ ಮುಖಂಡ ಬಸವರಾಜ ದಿಂಡೂರು ಮಾತನಾಡಿ, 2018ರಲ್ಲಿ ಪಂಚಮಸಾಲಿ ಪೀಠಕ್ಕೆ ಬರುವ ಮುನ್ನವೇ ಶ್ರೀ ವಚನಾನಂದ ಸ್ವಾಮೀಜಿ ಪಂಚಮಸಾಲಿ ಪೀಠಕ್ಕೆ ಬರುವುದಾದರೆ ಶ್ವಾಸ ಪೀಠವನ್ನು ಒಂದು ವರ್ಷದಲ್ಲಿ ತ್ಯಜಿಸುವಂತೆ ಹೇಳಿದ್ದೆವು. ಖಂಡಿತಾ ಈ ಬಗ್ಗೆ ಒಪ್ಪಂದವಾಗಿತ್ತು. ಸಮುದಾಯದ ಆಶೋತ್ತರಕ್ಕೆ ಸ್ಪಂದಿಸಿ, ಕೆಲಸ ಮಾಡಲು ಹೇಳಿದ್ದೆವು. ಇನ್ನೂ ಸಹ ಕಾಲ ಮಿಂಚಿಲ್ಲ, ವಚನಾನಂದ ಸ್ವಾಮೀಜಿ ಶ್ವಾಸ ಪೀಠ ತ್ಯಜಿಸಿ, ಪಂಚಮಸಾಲಿ ಪೀಠದಲ್ಲಿ ಮುಂದುವರಿಯಲಿ. ಸಮಾಜದ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ನಾವು ಈ ಪೀಠ ಸ್ಥಾಪಿಸಿದ್ದೆವು ಎಂಬುದನ್ನು ಸ್ವಾಮೀಜಿ ಅರಿಯಲಿ ಎಂದರು.

ಸಮಾಜದ ಹಿರಿಯ ನಾಯಕ ಬಾವಿ ಬೆಟ್ಟಪ್ಪ, ಪಿ.ಡಿ.ಶಿರೂರು, ಜ್ಯೋತಿಪ್ರಕಾಶ, ಕಳಸನಗೌಡ, ನಾಗಣ್ಣ ಚಿತ್ರದುರ್ಗ, ಹಾವೇರಿ ಮಹೇಶ, ನಿಡೋಣಿ, ಬಾಬಣ್ಣ, ಪರಮೇಶ ಪಟ್ಟಣಶೆಟ್ಟಿ, ವಸಂತ, ಪುಷ್ಪಾ ಹುಲ್ಲತ್ತಿ, ರಶ್ಮಿ ಕುಂಕೋದ್‌, ಕೊಟ್ರೇಶ, ಕಕ್ಕರಗೊಳ್ಳ ಮಂಜುನಾಥ ಪುರವಂತರ, ರವಿಕುಮಾರ ಬಾತಿ ಇತರರು ಇದ್ದರು.

- - -

(ಬಾಕ್ಸ್‌) * ಅವಾಚ್ಯವಾಗಿ ಮಾತನಾಡದೇ ನಡತೆ ಬದಲಿಸಿಕೊಳ್ಳಿ: ಬೆಟ್ಟಪ್ಪ

ಹಿರಿಯ ಮುಖಂಡ ಬಾವಿ ಬೆಟ್ಟಪ್ಪ ಮಾತನಾಡಿ, 1994ರಿಂದಲೂ ಸಮಾಜ ಕಟ್ಟಿದ್ದೇವೆ. 2008ರಿಂದಲೂ ಪೀಠ, ಸಮಾಜದ ಏನೇ ಸಮಸ್ಯೆ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಸಮಸ್ಯೆ ಪರಿಹರಿಸುತ್ತಿದ್ದೆವು. ಶ್ರೀ ಮಠದಲ್ಲಿ ಪೂಜೆ, ಪುನಸ್ಕಾರ ನಿರಂತರ ನಡೆಯಬೇಕೆಂದು ಎಲ್ಲರೂ ಹೇಳಿದ್ದೆವು. ಸ್ವಾಮೀಜಿಗೆ ಇಲ್ಲಿಗೆ ಕರೆ ತರುವಾಗಲೇ ಶ್ವಾಸಪೀಠ ತ್ಯಜಿಸಬೇಕು. ನಮ್ಮ ಸಮಾಜದ ಅನುಷ್ಠಾನ, ಆಚರಣೆ, ಸಂಘಟನೆ, ಸಮಾಜ ಕಟ್ಟುವಂತೆಯೂ ಹೇಳಿದ್ದೆವು. ಸ್ವಾಮೀಜಿ ವರ್ತನೆಯಲ್ಲಿ ವ್ಯತ್ಯಾಸವಾದರೆ ಬೈಲಾ ಪ್ರಕಾರ ಬದಲಾವಣೆಗೆ ಅವಕಾಶವಿದೆ. ಸ್ವಾಮೀಜಿ ಏನೇನೋ ಪದ ಬಳಸಿ, ಅವಾಚ್ಯವಾಗಿ ಮಾತನಾಡುವುದು ಸರಿಯಲ್ಲ. ಸ್ವಾಮೀಜಿ ಬಾಯಿಯಿಂದ ಇಂತಹ ಪದ ಬರಬಾರದು, ನಿಮ್ಮ ನಡತೆ ಬದಲಿಸಿಕೊಳ್ಳಿ ಎಂದು ಹೇಳಿದರು.

- - -

-17ಕೆಡಿವಿಜಿ3, 4.ಜೆಪಿಜಿ:

ದಾವಣಗೆರೆಯಲ್ಲಿ ಮಂಗಳವಾರ ಹರಿಹರದ ಪಂಚಮಸಾಲಿ ಪೀಠದ ಬಿ.ಸಿ. ಉಮಾಪತಿ, ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು, ಜ್ಯೋತಿ ಪ್ರಕಾಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.