ಶೃಂಗೇರಿಸಾಹಿತ್ಯ ಜೀವನದ ಪ್ರತಿಬಂಬವಾಗಬೇಕು. ಸಾಹಿತ್ಯಕಲೆ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಅಮ್ಮ ಫೌಂಡೇಷನ್ ನ ಸುಧಾಕರ ಶೆಟ್ಟಿ ಹೇಳಿದರು.
ಅಖಿಲ ಭಾರತ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಶೃಂಗೇರಿಸಾಹಿತ್ಯ ಜೀವನದ ಪ್ರತಿಬಂಬವಾಗಬೇಕು. ಸಾಹಿತ್ಯಕಲೆ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಅಮ್ಮ ಫೌಂಡೇಷನ್ ನ ಸುಧಾಕರ ಶೆಟ್ಟಿ ಹೇಳಿದರು.
ಪಟ್ಟಣದ ಗೌರೀಶಂಕರ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ ನಾಡು ನುಡಿ,ಭಾಷೆ,ಗಡಿ ಉಳಿಯಲು ಸಾಹಿತ್ಯ ಬಹುಮುಖ್ಯ. ಭಾಷೆ,ಗಡಿ ಉಳಿಸುವಲ್ಲಿ ಸಾಹಿತ್ಯದ ಕೊಡುಗೆ ಅಪಾರ ಎಂದರು.ಗೋಕಾಕ್ ಚಳುವಳಿ ಸೇರಿದಂತೆ ಅನೇಕ ಜನಪರ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿ, ಸ್ವಾತಂತ್ರ್ಯ ಚಳುವಳಿ ಯಲ್ಲಿ ಸಾಹಿತ್ಯ ಪ್ರಮುಖ ಪಾತ್ರ ವಹಿಸಿದೆ. ಜನರಲ್ಲಿ ಭಾಷಾಭಿಮಾನ, ರಾಷ್ಟ್ರೀಯತೆ ಬೆಳೆಸುವ ಮೂಲಕ ಜನಜಾಗೃತಿ ಉಂಟು ಮಾಡುವಲ್ಲಿ ತನ್ನದೇ ಆದ ಪಾತ್ರ ವಹಿಸಿದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಸಂಸ್ಕಾರಗಳನ್ನು ಬೆಳೆಸಬೇಕು. ಸಾಹಿತ್ಯ, ಕಲೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಮೂಡಿಸಬೇಕು. ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿ ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡಬೇಕು. ಸಮಾಜ ದಲ್ಲಿ ಒಳ್ಳೆಯ ಸಂಸ್ಕೃತಿ, ಸಂಸ್ಕಾರವಿಲ್ಲದ ಮನುಷ್ಯನಿಗೆ ಬೆಲೆಯಿಲ್ಲ. ಆದ್ದರಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು. ಸಾಹಿತ್ಯದ ಒಲವು ಬೆಳೆಸಿದಾಗಲೇ ನಮ್ಮ ಸಾಹಿತ್ಯ, ಸಂಸ್ಕೃತಿ ಉಳಿಸಲು ಸಾಧ್ಯ ಎಂದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಸೂರಿ ಶ್ರೀನಿವಾಸ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ಒಂದು ಒಳ್ಳೆಯ ಸಾಹಿತ್ಯ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತದೆ. ಹೊರತು ಮನಸ್ಸನ್ನು ಕೆರಳಿಸುವ ಕೆಲಸ ಮಾಡುವುದಿಲ್ಲ. ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಪ್ರಾಚೀನತೆ, ಪರಂಪರೆ, ಇತಿಹಾಸವಿದೆ. ಸಾಹಿತ್ಯ ಹಾಗೂ ಸಮಾಜದ ನಡುವೆ ಪರಸ್ಪರ ಅವಿನಾಭವ ಸಂಬಂಧವಿದೆ. ಸಮಾಜದ ಪ್ರಗತಿಯಲ್ಲಿ ಸಾಹಿತ್ಯದ ಪಾತ್ರವೂ ಪ್ರಮುಖ ಎಂದರು.
ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು ಸಾಹಿತ್ಯ ಪಾತ್ರವೂ ವಿಶೇಷ. ಈ ಚುಟುಕು ಸಾಹಿತ್ಯವನ್ನು ಉಳಿಸಿ ಬೆಳೆಸಿ ಕೊಂಡು ಹೋಗಬೇಕು. ಶೃಂಗೇರಿಯಲ್ಲಿ ಇಂತಹ ಒಂದು ಚುಟುಕು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಬಹಳ ಹೆಮ್ಮೆಯ ವಿಷಯ. ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಒಂದು ಕಾರ್ಯಕ್ರಮದ ಯಶಸ್ಸಿನ ಹಿಂದೆ ಅನೇಕ ಒಳ್ಳೆಯ ಮನಸ್ಸುಗಳ ಒಗ್ಗೂಡಿಕೆ ಬಹಳ ಮುಖ್ಯ. ಕನ್ನಡ ನಾಡು ನುಡಿ, ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ ಕೆಲಸ ಮಾಡಬೇಕಿದೆ ಎಂದರು.ಬಿ.ಶಿವಶಂಕರ್ ಪ್ರಾಸ್ತಾವಿಕ ಮಾತನಾಡಿ ಶೃಂಗೇರಿಯಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ ಆಯೋಜಿಸಬೇಕು ಎಂದು ಬಹು ಕಾಲದ ಕನಸಾಯಿತು. ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಡಲಾಗಿದೆ. ಸತತ ಪ್ರಯತ್ನ, ಪರಿಶ್ರಮದ ಫಲವಾಗಿ ಇಂದು ಚುಟುಕು ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ರೀತಿ ಕೊಡುಗೆ ನೀಡುತ್ತಿರುವ ಎಚ್. ದುಂಡಿರಾಜ್ ಸಾರಥ್ಯದಲ್ಲಿ ಶೃಂಗೇರಿಯಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಮಣ್ಯ, ಮೋಹನ್ ರಾಜಣ್ಣ, ಪೋಲೀಸ್ ಠಾಣಾಧಿ ಕಾರಿ ಅಭಿಷೇಕ್, ಅಂಗುರುಡಿ ದಿನೇಶ್, ಸುಮಂಗಲಿ ಆನಂದ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಬೆಳಿಗ್ಗೆ ಕನ್ನಡ ಭವನದ ಆವರಣದಲ್ಲಿ ಕಸಾಪ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗ್ಡೆ ರಾಷ್ಟ್ರದ್ವಜಾರೋಹಣ ನೆರವೇರಿಸಿದರು.ನಂತರ ಸಮ್ಮೇಳದ ಅಧ್ಯಕ್ಷ ಚುಟುಕು ಸಾಹಿತಿ ದುಂಡಿರಾಜ್ ಅವರ ಮೆರವಣಿಗೆಯಲ್ಲಿ ವಿವಿಧ ಸ್ಥಬ್ದ ಚಿತ್ರಗಳು,ಡೊಳ್ಳು ಕುಳಿತ, ವಾದ್ಯ ಮೇಳ ಗಮನ ಸೆಳೆಯಿತು. ನಂತರ ಚುಟುಕು ಕವಿಗೋಷ್ಠಿ ನಡೆಯಿತು. ಅನೇಕ ಚಟುಕು ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು.ಚೇತನ್, ಸುಮಂಗಲಿ ಆನಂದಸ್ವಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
4 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಕನ್ನಡ ಭವನದಲ್ಲಿ ನಡೆದ ಅಖಿಲ ಭಾರತ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಉದ್ಘಾಟಿಸಿದರು. ಚುಟುಕು ಸಾಹಿತಿ ಎಚ್.ದುಂಡಿರಾಜ್, ಸುಧಾಕರ ಶೆಟ್ಟಿ,ಬಿ. ಶಿವಶಂಕರ್ ಮತ್ತಿತರರು ಇದ್ದರು.