ಜನವಿರೋಧಿ ಸರ್ಕಾರಗಳ ವಿರುದ್ಧ ಹೋರಾಡಬೇಕಿದೆ: ಬಸವರಾಜ್ ಶೀಲವಂತರ

| Published : May 03 2024, 01:00 AM IST

ಸಾರಾಂಶ

ಸ್ತುತ ಸಂದರ್ಭದಲ್ಲಿ ಲೋಕಸಭೆಯ ಚುನಾವಣೆ ವೇಳೆ ಮತದಾನ ಮಾಡುವಾಗ ನಾವು ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಿ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಎಐಟಿಯುಸಿ ಸಂಘಟನೆಗೆ ನೂರಾರು ವರ್ಷಗಳ ಇತಿಹಾಸ ಇದೆ ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ ಹೇಳಿದರು.

ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ಶ್ರೀ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ನಡೆದ ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ಕಾರ್ಮಿಕರ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆದವು. ಆದರೆ ಇಂದು ಕಾರ್ಮಿಕ ವಿರೋಧಿ ಸರ್ಕಾರಗಳು ಆಡಳಿತ ನಡೆಸುತ್ತಿರುವುದರಿಂದ ಕಾರ್ಮಿಕರ ಹಕ್ಕು, ಕಾನೂನುಗಳನ್ನು ಸರ್ವನಾಶ ಮಾಡುವಂಥ ಪ್ರಯತ್ನ ನಡೆಯುತ್ತಿದೆ. ಇದನ್ನು ತಡೆಯುವುದಕ್ಕೆ ನಾವು ಜನವಿರೋಧಿ ಸರ್ಕಾರಗಳ ವಿರುದ್ಧ ನಿರಂತರವಾಗಿ ಹೋರಾಟ ಕಟ್ಟಬೇಕಾಗಿದೆ ಎಂದರು.ಪ್ರಸ್ತುತ ಸಂದರ್ಭದಲ್ಲಿ ಲೋಕಸಭೆಯ ಚುನಾವಣೆ ವೇಳೆ ಮತದಾನ ಮಾಡುವಾಗ ನಾವು ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಿ. ಬಿಜೆಪಿ ಅಂಥಹ ಕೋಮುವಾದಿ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು. ಅವರು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿರೋಧಿಗಳಾಗಿರುವುದರಿಂದ ಮತ್ತೆ ಅಧಿಕಾರಕ್ಕೆ ಬಂದದ್ದೇ ಆದರೆ ದೇಶಕ್ಕೆ ದೊಡ್ಡ ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಮಾತನಾಡಿ, ವಿಶ್ವದಲ್ಲಿ ಕಾರ್ಮಿಕರು ಬೆಳಗ್ಗೆ ಸೂರ್ಯ ಉದಯಕ್ಕಿಂತ ಮುಂಚೆ ಹೋಗಿ ಸೂರ್ಯ ಮುಳುಗಿದ ನಂತರ ಕೆಲಸದಿಂದ ಮನೆಗೆ ಬರಬೇಕಾದಂತಹ ಜೀತ ಪದ್ಧತಿಯಂತೆ ನಡೆಯುತ್ತಿತ್ತು. ಆಗ ಮಾರ್ಕ್ಸ್, ಲೆನಿನ್ ನಂತವರು ಹಳ್ಳಿಯ ಬೀದಿಗಳ ಹರಟೆ ಕಟ್ಟೆಗಳಲ್ಲಿ ಜೀತದಂತೆ ದುಡಿಯುತ್ತಿರುವ ಕಾರ್ಮಿಕರನ್ನು ಸೇರಿಸಿ ನಿರಂತರ ಜಾಗೃತಿ ಸಭೆ ನಡೆಸಿ ಬಂಡವಾಳ ಶಾಹಿಗಳ ವಿರುದ್ಧ ಹೋರಾಟಕ್ಕೆ ಕರೆಕೊಟ್ಟರು. ಚಿಕಾಗೋದಲ್ಲಿ ಬಹುದೊಡ್ಡ ಹೋರಾಟ ನಡೆಸಿದರು. ಇಂದು ವಿಶ್ವದಲ್ಲಿ ಕಾರ್ಮಿಕರಿಗೆ ಎಂಟು ತಾಸು ಕೆಲಸ. ವಾರದ ರಜೆ ಇತರ ಸೌಲಭ್ಯ ಸಿಗುತ್ತಿದ್ದರೆ ಅದು ಅನೇಕ ಕಾರ್ಮಿಕರ ಹೋರಾಟ ಫಲವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಮೌಲಾ ಸಾಬ್ ಕಪಾಲಿ ಮಾತನಾಡಿದರು.

ಮುಖಂಡರಾದ ಗೈಬು ಸಾಬ್ ಮಾಳೆಕೊಪ್ಪ, ಜಗದೀಶ್ ಕಟ್ಟಿಮನಿ, ಹನುಮಂತ ವಡ್ಡರ್, ರಾಮಣ್ಣ ಗುಡಿ, ರಾಘು, ಅನಿಲ್ ಬಾಚಾ ಮುಂತಾದವರಿದ್ದರು.

ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ ಸ್ವಾಗತಿಸಿ, ನಿರೂಪಿಸಿದರು. ಪ್ರಸಾದ್ ಕಾಳೆ ವಂದಿಸಿದರು.