ಸಮಾಜಕ್ಕೆ ನಾವೇನಾದರೂ ಕೊಡಬೇಕು: ಸಂಸದ ಸಂಗಣ್ಣ ಕರಡಿ

| Published : Mar 10 2024, 01:31 AM IST

ಸಾರಾಂಶ

ರಡ್ಡಿ ಸಮುದಾಯದಿಂದ ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕೊಪ್ಪಳದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿಮಾರ್ಣದಲ್ಲಿ ಹೆಬ್ಬಾಳ ಶಿವಪ್ಪ ಅವರ ಶ್ರಮ ಸಾಕಷ್ಟಿದೆ. ಅವರನ್ನು ನೆನೆಯಲೇಬೇಕು.

ಕೊಪ್ಪಳ: ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ದುಡಿಮೆಗೆ ಹೆಸರಾದ ರಡ್ಡಿ ಸಮುದಾಯ ನಿರಂತರವಾಗಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ, ವಿಭಿನ್ನ ಕಾರ್ಯಕ್ರಮ ಆಯೋಜಿಸುತ್ತಿರುವುದು ಅನುಕರಣೀಯ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಕಿನ್ನಾಳ ರಸ್ತೆಯ ಹೇಮರಡ್ಡಿ ಮಲ್ಲಮ್ಮ ದೇವಾಲಯದಲ್ಲಿ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಶಿವರಾತ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,

ರಡ್ಡಿ ಸಮುದಾಯದಿಂದ ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕೊಪ್ಪಳದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿಮಾರ್ಣದಲ್ಲಿ ಹೆಬ್ಬಾಳ ಶಿವಪ್ಪ ಅವರ ಶ್ರಮ ಸಾಕಷ್ಟಿದೆ. ಅವರನ್ನು ನೆನೆಯಲೇಬೇಕು. ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಕ್ತಿಗೆ ಹೆಸರಾದವರು. ಮಲ್ಲಿಕಾರ್ಜುನನನ್ನು ಒಲಿಸಿಕೊಂಡು ಸಮುದಾಯಕ್ಕೆ ಸಂಕಷ್ಟ ಬಾರದಂತೆ ಬೇಡಿಕೊಂಡರು. ಶಿವನನ್ನು ಸ್ಮರಿಸಿದ ಈ ದಿನ ಮಹತ್ವವಾದದು. ರಾಕ್ಷಸ ಹಾಗೂ ದೇವತೆಗಳ ನಡುವೆ ನಡೆದ ಸಮುದ್ರ ಮಂಥನ ವೇಳೆ ಬರುವ ವಿಷವನ್ನು ಶಿವ ಕುಡಿದ. ನಮ್ಮ ದೇಶ, ಪರಂಪರೆ, ಸಂಸ್ಕತಿ ಉಳಿಸಿಕೊಳ್ಳಬೇಕು. ಇಂಥ ಕಾರ್ಯಕ್ರಮಗಳು ಒಡೆದ ಮನಸ್ಸನ್ನು ಮತ್ತೆ ಕಟ್ಟುವ ಕೆಲಸ ಮಾಡುತ್ತದೆ. ಜೀವನದಲ್ಲಿ ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದನ್ನು ಯೋಚಿಸಿ ಸೇವೆ ಮಾಡಬೇಕು ಎಂದರು.ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಪ್ರತಿ ವರ್ಷ ಈ ರೀತಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಉತ್ತಮ ಕೆಲಸ. ಭಕ್ತರಿಗೆ ಉಪವಾಸ ವ್ರತ ಆಚರಣೆಗೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಕಮಿಟಿ ಅನುಕೂಲ ಮಾಡಿಕೊಡುವ ಮೂಲಕ ಸಾಮಾಜಿಕ ಕೆಲಸಕ್ಕೆ ಹೆಸರಾಗಿದೆ ಎಂದರು.ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಮಾತನಾಡಿ, ರಡ್ಡಿ ಸಮುದಾಯ ನಂಬಿಕೆ, ಶ್ರಮ, ಪ್ರೀತಿಗೆ ಹೆಸರಾಗಿದೆ. ಸಮುದಾಯದ ಅನೇಕ ನಾಯಕರು ದೇವಾಲಯ ನಿರ್ಮಾಣ ಹಾಗೂ ಧಾರ್ಮಿಕ ಚಟುವಟಿಕೆ ಆಯೋಜನೆಯಲ್ಲಿ ಶ್ರಮಿಸಿದ್ದಾರೆ. ಸಮುದಾಯದಲ್ಲಿ ನಾವು ಜನಿಸಿದ್ದಕ್ಕೆ ಹೆಮ್ಮೆ ಪಡಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಜೀವನಸಾಬ್ ಬಿನ್ನಾಳ ಜನಪದ ಗಾಯನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗಣ್ಯರನ್ನು ಸನ್ಮಾನಿಸಲಾಯಿತು. ದೇವಾಲಯ ಅಭಿವೃದ್ಧಿಗೆ ದಾನ ನೀಡಿದ ರಡ್ಡಿ ಸಮುದಾಯದ ಗಣ್ಯರ ಹೆಸರು ಪ್ರಸ್ತಾಪಿಸಲಾಯಿತು.ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ರಡ್ಡಿ ಸಮುದಾಯ ಜಿಲ್ಲಾಧ್ಯಕ್ಷ ಜಗದೀಶಪ್ಪ ಸಿಂಗನಾಳ, ಪ್ರಮುಖರಾದ ಎಸ್.ಬಿ. ನಾಗರಳ್ಳಿ, ಆರ್.ಪಿ. ರಡ್ಡಿ, ಕಾಶಿನಾಥ ರಡ್ಡಿ ಅವಾಜಿ, ಪ್ರಭು ಹೆಬ್ಬಾಳ, ಬಸವರಾಜ ಪುರದ, ವಿರುಪಣ್ಣ ನವೋದಯ, ಸೈಯದ್ ಜುಲ್ಲು ಖಾದ್ರಿ, ವೆಂಕಾರೆಡ್ಡಿ ವಕೀಲರು, ಕೃಷ್ಣಾರಡ್ಡಿ ಗಲಬಿ, ತಿಮ್ಮಾರಡ್ಡಿ ಕರಡ್ಡಿ, ಹನುಮರಡ್ಡಿ ಹಂಗನಕಟ್ಟಿ, ಡಾ. ಶ್ರೀನಿವಾಸ ಹ್ಯಾಟಿ, ಡಾ. ಸಿ.ಎಸ್. ಕರಮುಡಿ ಮೊದಲಾದವರು ಇದ್ದರು.ಪತ್ರಕರ್ತ ಸೋಮರಡ್ಡಿ ಅಳವಂಡಿ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ರಡ್ಡಿ ಸ್ವಾಗತಿಸಿದರು.