ತರೀಕೆರೆಮಕ್ಕಳು ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ನಿರ್ಭೀತಿಯಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ. ಟಿ. ಹೇಳಿದ್ದಾರೆ.

- ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಬೀರೂರು ವಲಯ ಮಟ್ಟದ ಕನ್ನಡ ಭಾಷಣ ಸ್ಪರ್ಧೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳು ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ನಿರ್ಭೀತಿಯಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದು ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ. ಟಿ. ಹೇಳಿದ್ದಾರೆ.ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಜ.24 ರಿಂದ ಫೆ.1 ರವರೆಗೆ ಭದ್ರಾವತಿಯಲ್ಲಿ ನಡೆಯಲಿರುವ ಶ್ರೀ ತರಳ ಬಾಳು ಹುಣ್ಣಿಮೆ ಮಹೋತ್ಸವದ ಪ್ರಯುಕ್ತ ನಡೆದ ಬೀರೂರು ವಲಯ ಮಟ್ಟದ ಪ್ರೌಢಶಾಲೆಗಳ 8 ಮತ್ತು 9ನೇ ತರಗತಿ ಮಕ್ಕಳ ಕನ್ನಡ ಭಾಷಣ ಸ್ಪರ್ಧೆ ವೇಳೆ ಮಾತನಾಡುತ್ತಿದ್ದರು. ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಮಾತನಾಡುವ ಜಾಣ್ಮೆ ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದ್ದು ಮಕ್ಕಳು ಇಂತಹ ಅವಕಾಶಗಳನ್ನು ಚತುರತೆಯಿಂದ ಬಳಸಿಕೊಳ್ಳಬೇಕು, ಆಗ ಮಾತ್ರ ಹಲವಾರು ವಿಷಯಗಳಲ್ಲಿ ಪರಿಣತಿ ಪಡೆದು, ಮುಂದೆ ಉತ್ತಮ ಭಾಷಣಕಾರರಾಗಿ ರೂಪುಗೊಳ್ಳಲು ಸಾಧ್ಯ ವಾಗುತ್ತದೆ. ಆಗ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಕ್ಕೂ ಅರ್ಥ ಬರುತ್ತದೆ. ಪ್ರೌಢಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಸತತ ಅಭ್ಯಾಸಶೀಲರಾಗಿದ್ದಲ್ಲಿ ಮಾತ್ರ ಉತ್ತಮ ಜ್ಞಾನಾರ್ಜನೆ ಪಡೆದುಕೊಂಡು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಆಶಿಸಿದರು. ಶ್ರೀ ಅಮೃತೇಶ್ವರ ಪ್ರೌಢಶಾಲೆ ಉಪಾಧ್ಯಕ್ಷ ಷಡಕ್ಷರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲೆಯಲ್ಲಿ ನಡೆದ ಈ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಬೀರೂರು ವಲಯದ ಹಲವಾರು ಪ್ರೌಢಶಾಲೆಗಳ ಮಕ್ಕಳು ಅತ್ಯಾಸಕ್ತಿಯಿಂದ ಪಾಲ್ಗೊಂಡು ತಮ್ಮ ವಿಷಯ ಪಾಂಡಿತ್ಯವನ್ನು ಪ್ರಸ್ತುತಪಡಿಸಿದ್ದೀರಿ. ಇಲ್ಲಿ ಭಾಗವಹಿಸಿದವರೆಲ್ಲರೂ ಬಹುಮಾನ ಗೆಲ್ಲಲು ಸಾಧ್ಯವಿಲ್ಲ. ಭಾಗವಹಿಸಿ ಅನುಭವ ಪಡೆಯುವ ಉದ್ದೇಶವೇ ಪ್ರಧಾನವಾಗಬೇಕು. ಇಂದಲ್ಲ ನಾಳೆ ಬಹುಮಾನ ಅಂತಹ ಮಕ್ಕಳ ಪ್ರತಿಭೆಗೆ ಸಂದಾಯವಾಗಿಯೇ ಅಗುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನವನ್ನು ಬಿಸಲೇಹಳ್ಳಿಯ ವಿದ್ಯಾರ್ಥಿನಿ ಭಾರತಿ, ದ್ವಿತೀಯ ಬಹುಮಾನವನ್ನು ನೇರಲಕೆರೆ ಪ್ರೌಢಶಾಲೆಯ ರೇಖಾ ಪಡೆದರು. ವಿಜೇತ ಮಕ್ಕಳನ್ನು ಸನ್ಮಾನಿಸಲಾಯಿತು.

ತೀರ್ಪುಗಾರರಾಗಿ ನಿವೃತ್ತ ಮುಖ್ಯ ಶಿಕ್ಷಕರಾದ ಚಂದ್ರಶೇಖರಪ್ಪ ಮತ್ತು ಪುಟ್ಟಪ್ಪ ಟಿ ಮತ್ತು ಶಿಕ್ಷಕರಾದ ಪ್ರದೀಪ್ಇದ್ದರು. ಸ್ಥಳೀಯ ಸಲಹಾ ಸಮಿತಿ ಸದಸ್ಯರಾದ ಪಾರ್ವತಮ್ಮ, ಬಸವರಾಜ್ ಎನ್ ಎಂ, ಶಿಕ್ಷಕರಾದ ಖಿಜರ್‌ಖಾನ್, ರಮಾಕಾಂತ್, ಸವಿತಮ್ಮ, ಸತೀಶ್ ನಂದಿಹಳ್ಳಿ, ಪಂಚಾಕ್ಷರಪ್ಪ, ಮಂಜುಳ ಮಲ್ಲಿಗವಾಡ, ಕಲಾದೇವಿ, ಸವಿತ, ನದೀಮಾಬಾನು, ಪಲ್ಲವಿ, ಕುಮಾರಿ ಲೇಖನ, ಸಿ.ರಮಾಕಾಂತ್, ಕುಮಾರಿ ಅಪೂರ್ವ ಮತ್ತಿತರರು ಭಾಗವಹಿಸಿದ್ದರು.-

18ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ಬೀರೂರು ವಲಯ ಮಟ್ಟದ ಕನ್ನಡ ಭಾಷಣ ಸ್ಪರ್ಧೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ.ಟಿ. ಶ್ರೀ ಅಮೃತೇಶ್ವರ ಪ್ರೌಢಶಾಲೆ ಉಪಾಧ್ಯಕ್ಷ ಷಡಕ್ಷರಪ್ಪ ಮತ್ತಿತರರು ಭಾಗವಹಿಸಿದ್ದರು.