ಬದುಕಿನ ಸಮಸ್ಯೆಗಳ ಎದುರಿಸಿ ಬೆಳೆಯಬೇಕು

| Published : Jul 07 2025, 11:48 PM IST

ಸಾರಾಂಶ

ಬದುಕಿನಲ್ಲಿ ಎದುರಾಗುವ ಬಡತನ, ನೋವು, ಅವಮಾನಗಳಂತಹ ಅಪಸವ್ಯಗಳ ವಿರುದ್ಧ ವಿದ್ಯಾರ್ಥಿಗಳು, ಯುವಜನರು ಪ್ರಭಲವಾದ ಪ್ರತಿರೋಧ ತೋರಿಸಿ, ಎದುರಿಸಿ ನಿಲ್ಲುವ ಛಲಗಾರಿಕೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಸಂಕಷ್ಟಗಳಿಂದ ವಿಮುಕ್ತಿ ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ಹಳೇಬೀಡು ರಾಮ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

- ಪ್ರೊ. ಡಾ. ಎಚ್.ವಿಶ್ವನಾಥ್‌ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ರಾಮಪ್ರಸಾದ್‌ ಸಲಹೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಬದುಕಿನಲ್ಲಿ ಎದುರಾಗುವ ಬಡತನ, ನೋವು, ಅವಮಾನಗಳಂತಹ ಅಪಸವ್ಯಗಳ ವಿರುದ್ಧ ವಿದ್ಯಾರ್ಥಿಗಳು, ಯುವಜನರು ಪ್ರಭಲವಾದ ಪ್ರತಿರೋಧ ತೋರಿಸಿ, ಎದುರಿಸಿ ನಿಲ್ಲುವ ಛಲಗಾರಿಕೆ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಸಂಕಷ್ಟಗಳಿಂದ ವಿಮುಕ್ತಿ ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ ಹಳೇಬೀಡು ರಾಮ ಪ್ರಸಾದ್ ಅಭಿಪ್ರಾಯಪಟ್ಟರು.

ನಗರದ ಗಾಂಧಿ ನಗರದಲ್ಲಿ ಭಾನುವಾರ ಸಂಜೆ ಡಾ. ಎಚ್.ವಿಶ್ವನಾಥ ಅಭಿಮಾನಿ ಬಳಗದಿಂದ ಜಾನಪದ ತಜ್ಞ, ಪ್ರೊ. ಡಾ. ಎಚ್.ವಿಶ್ವನಾಥ್‌ ಅವರ ಹುಟ್ಟುಹಬ್ಬ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದಮನಿತ ಸಮುದಾಯದಲ್ಲಿ ಜನಿಸಿ, ಭರಿಸಲಾಗದ ಸಂಕಷ್ಟಗಳ ಸರಮಾಲೆಯನ್ನೇ ಹೊದ್ದು, ದೈನಂದಿನ ಬದುಕು ಸಾಗಿಸುವುದೇ ಯಮಯಾತನೆ ಅನಿಸುವುದು. ಇಂಥ ಸಂದರ್ಭದಲ್ಲಿಯೂ ಛಲದಿಂದ ಮೇಲೆದ್ದು, ಪ್ರತಿರೋಧಕ ಹೋರಾಟ ಮೈಗೂಡಿಸಿಕೊಂಡು ಮುನ್ನಡೆಯಬೇಕು. ಮುಂಬರುವ ದಿನಗಳಲ್ಲಿ ತಮ್ಮ ಹಿರಿಯ ಸೋದರ ಎಚ್.ಆಂಜನೇಯ ಅವರಂತೆ ಡಾ.ವಿಶ್ವನಾಥ್ ಶಿಕ್ಷಣದ ಜೊತೆಯಲ್ಲಿ ಸಾಮಾಜಿಕ ರಂಗದಲ್ಲಿಯೂ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

ವಿರಕ್ತ ಮಠದ ಡಾ.ಬಸವ ಪ್ರಭು ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಬಡತನದಲ್ಲಿ ಹುಟ್ಟಿದರೂ ಹೃದಯದಲ್ಲಿ ಶ್ರೀಮಂತರಾಗಿರುವ ಡಾ.ವಿಶ್ವನಾಥ್ ಬದುಕಿನಲ್ಲಿ ಹಣ ಸಂಪಾದನೆಗಿಂತಾ ಜ್ಞಾನ ಸಂಪಾದನೆಗೆ ಮಹತ್ವ ಕೊಟ್ಟು ಅಧ್ಯಯನ ನಡೆಸಿದ್ದರು. ಇದರಿಂದಲೇ ಈ ಪರಿಯ ಸಾಧನೆ ಮಾಡಲು ಸಾಧ್ಯವಾಯಿತು. ತಮ್ಮೊಂದಿಗೆ ಸುತ್ತಲಿನವರನ್ನೂ ಬೆಳಸಿದ್ದು ವಿಶ್ವನಾಥ್‌ ಅವರ ಹೆಗ್ಗಳಿಕೆ. ತಮ್ಮ ಪಿಎಚ್.ಡಿ. ಪ್ರಬಂಧ ಸಿದ್ಧಪಡಿಸುವಲ್ಲಿಯೂ ವಿಶ್ವನಾಥ್‌ ನೆರವಿತ್ತು ಎಂಬುದನ್ನು ಸ್ಮರಿಸಿದರು.

ಸನ್ಮಾನ ಸ್ವೀಕರಿಸಿದ ಡಾ. ಎಚ್.ವಿಶ್ವನಾಥ್ ಮಾತನಾಡಿ, ಬಾಲ್ಯದಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳನ್ನು ನುಂಗಿ, ನಗು ನಗುತ್ತಲೇ ಈ ಮಟ್ಟದ ಸಾಧನೆಗೈಯ್ಯಲು ತಮ್ಮ ತಾಯಿ ಬಾಲಮ್ಮ, ತಂದೆ ಹನುಮಂತಪ್ಪ, ಅಣ್ಣ ಆನಂದ್‌ ಆಶೀರ್ವಾದ ಹಾಗೂ ದೊಡ್ದಣ್ಣ ಮಾಜಿ ಸಚಿವ ಎಚ್.ಆಂಜನೇಯರ ಸಕಾಲಿಕ ಮಾರ್ಗದರ್ಶನ ಮತ್ತು ಡಾ. ಎಚ್.ನರಸಿಂಹಯ್ಯ ಅವರಂತಹ ಮೇಧಾವಿ ಗುರುಗಳು, ಹಿರಿಯರು, ಅಭಿಮಾನಿಗಳ ಬೆಂಬಲ ಕಾರಣ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಅಭಿಮಾನಿಗಳು ಡಾ.ವಿಶ್ವನಾಥ್ ಹಾಗೂ ಶೈಲಜಾ ವಿಶ್ವನಾಥ್ ಅವರನ್ನು ಸನ್ಮಾನಿಸಿದರು. ಮಾಜಿ ನಗರಸಭಾ ಸದಸ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ದಲಿತ ಸಂಘರ್ಷ ಸಮಿತಿಯ ಮುಖಂಡ ಹೆಗ್ಗೆರೆ ರಂಗಪ್ಪ, ತಂಜೀಮ್ ಸಮಿತಿ ಅಧ್ಯಕ್ಷ ದಾದೂಸೇಟ್, ನಗರಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದ ರಾಜ್, ಚಳ್ಳಕೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಶಿವಣ್ಣ ಸೇರಿದಂತೆ ಅನೇಕ ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಿದ್ದರು.

- - -

-7ಕೆಡಿವಿಜಿ32:

ದಾವಣಗೆರೆಯಲ್ಲಿ ಡಾ.ಎಚ್.ವಿಶ್ವನಾಥ್ ಅಭಿಮಾನಿಗಳ ಬಳಗದಿಂದ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಡಾ.ಎಚ್.ವಿಶ್ವನಾಥ್ ಮಾತನಾಡಿದರು.