ರಾಮನಗರ: ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಚಟುವಟಿಕೆಗಳ ಮೂಲಕ ಎಲ್ಲರೊಳಗೂ ಅಡಗಿರುವ ಪ್ರತಿಭೆಯನ್ನು ಗುರುತಿಸಿ ನಾಯಕತ್ವದ ಪಾಠ ಮಾಡುವ ಹೊಸ ಮಾದರಿಯನ್ನು ಕಂಡುಕೊಳ್ಳಬೇಕಿದೆ ಎಂದು ಜನಸಹಯೋಗದ ಕಾರ್ಯದರ್ಶಿ ಎ.ನರಸಿಂಹಮೂರ್ತಿ ಹೇಳಿದರು.

ತಾಲೂಕಿನ ಮುದ್ದುಶ್ರೀ ದಿಬ್ಬದಲ್ಲಿ ಜನಸಹಯೋಗ ಮತ್ತು ಕೃಷ್ಣಾಪುರದೊಡ್ಡಿಯ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವ ಕಾರ್ಯಾಗಾರ ಉದ್ಘಾಟಿಸಿದ ಅವರು, ಸಮುದಾಯದ ಸದಸ್ಯನಾಗಿ, ಅದರ ಒಳಿತಿಗಾಗಿ ದುಡಿಯುವುದನ್ನು ಕಲಿಯಬೇಕಾದ ಅವಶ್ಯಕತೆಯಿದೆ. ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಮಾದರಿ ಯಾರಾಗಬೇಕು ಎಂಬುದು ಇಂದಿನ ಮೌಲಿಕವಾದ ಪ್ರಶ್ನೆ. ಹಿರಿಯರು ಹಾಕಿಕೊಟ್ಟ ಎಲ್ಲ ಮಾರ್ಗಗಳನ್ನೂ ಧೂಳೀಪಟ ಮಾಡಿಕೊಂಡು ಹೋಗುತ್ತಿರುವ ನಾವೇ ಆಯ್ಕೆ ಮಾಡಿರುವ ನಮ್ಮನ್ನಾಳುತ್ತಿರುವ ಜನ ನಾಯಕರನ್ನು ತೋರಿಸೋಣವೇ ಎಂದು ಮಾರ್ಮಿಕವಾಗಿ ನುಡಿದರು.

ಇಫ್ರೋ ಜಾನಪದ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಂ.ಬೈರೇಗೌಡ ಮಾತನಾಡಿ, ನಮ್ಮೊಳಗೇ ಒಬ್ಬೊಬ್ಬ ನಾಯಕ ಅಡಗಿ ಕುಳಿತಿರುತ್ತಾನೆ. ನಾವು ಅವನಿಗೆ ಒಂದಷ್ಟು ಪೋಷಕವೆನಿಸುವ ಇಂಬು ನೀಡಬೇಕಾದ ಅವಶ್ಯಕತೆಯಿದೆ. ಮೊದಲು ಗ್ರಾಮೀಣ ಬದುಕಿನ ಚಿತ್ರಗಳನ್ನು ನಗರ ಕೇಂದ್ರಿತ ಮಕ್ಕಳ ಮನಸ್ಸಿನಲ್ಲಿ ಮೂಡಿಸುವ ಕೆಲಸವಾಗಬೇಕಾಗಿದೆ. ಒಂದೇ ನೆಲೆಯಲ್ಲಿ ಆಲೋಚನೆ ಮಾಡುವ ಈ ವಯೋಮಾನದ ಮಕ್ಕಳಲ್ಲಿ ಹೊಸತನದ ಹುಡುಕಾಟ ನಡೆಯಬೇಕಾಗಿದೆ ಎಂದು ತಿಳಿಸಿದರು.

ಶಿಬಿರ ನಿರ್ದೇಶಕ ರೇವಣ್ಣ ಮಾತನಾಡಿ, ವಿದ್ಯಾರ್ಥಿ ಬದುಕಿನ ಬಹುಮುಖ್ಯ ಕೆಲಸವೆಂದರೆ ಸಹಪಾಠಿಗಳ ಜೊತೆಗಿನ ಸಂಬಂಧ ಹೇಗಿರಬೇಕೆಂಬ ತಿಳಿವಳಿಕೆಯನ್ನು ಮೊದಲು ಪಡೆದುಕೊಳ್ಳಬೇಕು. ಸಹವಾಸ ಮಾಡುವಾಗಲೇ ತಮ್ಮ ಗುರಿಯತ್ತ ನೋಡುವವರನ್ನು ಆಯ್ಕೆ ಮಾಡಿಕೊಂಡರೆ ಮುಂದಿನ ಬದುಕು ಸುಂದರವಾಗುತ್ತದೆ. ಈ ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳಲ್ಲಿ ಅಂತಹದ್ದೊಂದು ಜಾಗೃತಿ ಮೂಡಿಸಿ ಜತನ ಮಾಡುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದರು.

ಯೋಜನಾ ಸಂಯೋಜಕ ಶಿವಕುಮಾರ್, ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಕ್ಷೇತ್ರ ಕಾರ್ಯಕರ್ತರಾದ ಬಿ.ಹರ್ಷಿತ, ರಾಘವೇಂದ್ರ ಎನ್, ಡಿಜಿಟಲ್ ಲರ್ನಿಂಗ್ ಸೆಂಟರ್ ಸುಗಮಕಾರ್ತಿ ವಿನೋದಿನಿ, ಟ್ಯೂಷನ್ ಟೀಚರ್ ಸಿರೀಷ, ಜನಸಹಯೋಗದ ಮಾಜಿ ಸಿಬ್ಬಂದಿ ಸತೀಶ್ ಭಾಗವಹಿಸಿದ್ದರು.


21ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ತಾಲೂಕಿನ ಮುದ್ದುಶ್ರೀ ದಿಬ್ಬದಲ್ಲಿ ಜನಸಹಯೋಗ ಮತ್ತು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ "ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುವ ಕಾರ್ಯಾಗಾರ " ನಡೆಯಿತು.