ಬಸವ ಜಯಂತಿಯಲ್ಲಿ ಶಾಸಕ ರಘುಮೂರ್ತಿ ಹೇಳಿಕೆಕನ್ನಡಪ್ರಭ ವಾರ್ತೆ ಚಳ್ಳಕೆರೆ
ಬಸವಾದಿ ಶರಣರು ಸಾರಿದ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗುವ ಕಡೆಗೆ ಸಾಗಿದಾಗ ಮಾತ್ರ ಜೀವನ ಸಾರ್ಥವಾಗುತ್ತದೆ ಎಂದು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಹಾಗೂ ಶಾಸಕರಾದ ಟಿ.ರಘುಮೂರ್ತಿ ಹೇಳಿದರು.ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಸವಣ್ಣನ ಜಾತ್ಯಾತೀತ ಆಲೋಚನೆಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಬದಲಾವಣೆಗಾಗಿ ಶ್ರಮಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.ಜಾಗತಿಕವಾಗಿಯೂ ಬಸವಣ್ಣ ಅನೇಕ ವಿಚಾರಧಾರೆಗಳ ಮೂಲಕ ಗಮನ ಸೆಳೆದವರು. ಸಮಾಜದಲ್ಲಿ ಬೇರೂರಿದ್ದ ಅನಿಷ್ಟ ಆಚರಣೆಗಳನ್ನು ನಿರ್ಮೂಲನೆ ಮಾಡಲು ಅವರು ಜೀವಮಾನವಿಡೀ ಹೋರಾಟ ಮಾಡಿದ್ದು ಇವತ್ತಿಗೂ 12ನೇ ಶತಮಾನ ಎಂಬುದು ಪರಿವರ್ತನೆಯ ಯುಗವಾಗಿ ನಮಗೆ ಗೋಚರಿಸುತ್ತಿದೆ ಎಂದರು.
ಅಕ್ಷರ ಮತ್ತು ಅನ್ನ ದಾಸೋಹ ಹಾಗೂ ಕಾಯಕದ ಮಹತ್ವವವನ್ನು ಸಮಾಜದ ಎಲ್ಲಾ ಜನವರ್ಗಗಳಿಗೂ ಸಾರಿದ ಮಹಾಪುರುಷ ಬಸವಣ್ಣ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ರೇಹಾನ ಪಾಷಾ, ವೀರಶೈವ ಲಿಂಗಾಯಿತ ಸಮಾಜದ ಮುಖಂಡರಾದ ರುದ್ರಮುನಿಯಪ್ಪ, ಜಗದೀಶ್, ಸ್ವಾಮಿ, ಶಿವಪುತ್ರಪ್ಪ, ಶಿವು ಸ್ವಾಮಿ, ಭಾಗ್ಯಮ್ಮ ಸೇರಿದಂತೆ ಮುಂತಾದವರು ಇದ್ದರು.