ಸರ್ಕಾರಿ ಶಾಲೆಗಳ ಶಿಕ್ಷಣ ಬಗ್ಗೆ ನಂಬಿಕೆ ಬರಬೇಕು

| Published : Sep 06 2025, 01:00 AM IST

ಸರ್ಕಾರಿ ಶಾಲೆಗಳ ಶಿಕ್ಷಣ ಬಗ್ಗೆ ನಂಬಿಕೆ ಬರಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಕರ್ತವ್ಯದಲ್ಲಿ ಶಿಸ್ತು ಪಾಲನೆ ಮತ್ತು ಪ್ರತಿಭೆಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ ವೃತ್ತಿಯಿಂದ ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿಯ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಯಿತು. ಅಂತಹವರ ಆದರ್ಶಗಳು ಮತ್ತು ವಿಚಾರಧಾರೆಗಳನ್ನು ನಾವು ಅಳವಡಿಸಿಕೊಂಡು ಪ್ರೇರೇಪಣೆ ಆಗುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ಬಗ್ಗೆ ಭರವಸೆ ಹಾಗೂ ನಂಬಿಕೆ ಬರಬೇಕು. ಅಂತಹ ಗುಣಮಟ್ಟದ ಮತ್ತು ಫಲಿತಾಂಶವುಳ್ಳ ಶಿಕ್ಷಣ ಸಿಗಬೇಕು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ.ಸುಧಾಕರ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಧಾಕೃಷ್ಣನ್‌ ಆದರ್ಶ ಪಾಲಿಸಿ

ಕರ್ತವ್ಯದಲ್ಲಿ ಶಿಸ್ತು ಪಾಲನೆ ಮತ್ತು ಪ್ರತಿಭೆಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕ ವೃತ್ತಿಯಿಂದ ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿಯ ಹುದ್ದೆಯನ್ನು ಅಲಂಕರಿಸಲು ಸಾಧ್ಯವಾಯಿತು. ಅಂತಹವರ ಆದರ್ಶಗಳು ಮತ್ತು ವಿಚಾರಧಾರೆಗಳನ್ನು ನಾವು ಅಳವಡಿಸಿಕೊಂಡು ಪ್ರೇರೇಪಣೆ ಆಗುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು, ಮಕ್ಕಳಿಗೆ ಪೋಷಕರ ನಂತರದ ಸ್ಥಾನದಲ್ಲಿ ಶಿಸ್ತು ಕಲಿಸುವವರು ಶಿಕ್ಷಕರೇ ಆಗಿದ್ದಾರೆ ಎಂದರು.

. ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳ ಕಲಿಕಾ ವ್ಯವಸ್ಥೆಯ ಬಗ್ಗೆ ನಂಬಿಕೆ ಮೂಡಬೇಕು ಆ ನಿಟ್ಟಿನಲ್ಲಿ ಗುಣಮಟ್ಟದ ಕಲಿಕೆಯನ್ನು ಕಲಿಸಿ ವಿಶ್ವಾಸ ಗಳಿಸಬೇಕು ಆಗ ಮಾತ್ರ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಬಹುದು ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದರು.

ಕರ್ನಾಟಕ ಪಬ್ಲಿಕ್ ಶಾಲೆ

ಈ ವಿಚಾರಗಳನ್ನು ರಾಜ್ಯ ಸರ್ಕಾರ ಮನಗಂಡು ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ. ಅಲ್ಲದೆ ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ಒಂದು ವಸತಿ ಶಾಲೆಯನ್ನು ತೆರೆಯಲಾಗುತ್ತಿದೆ. ಕಾರ್ಮಿಕರ ಮಕ್ಕಳಿಗಾಗಿಯೇ ಪ್ರತ್ಯೇಕವಾದ ವಸತಿ ಶಾಲೆಗಳನ್ನು ತೆರೆಯಲು ಯೋಜಿಸಲಾಗಿದೆ ಎಂದು ತಿಳಿಸಿದರು. ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಶಿಕ್ಷಕರು, ಉಪನ್ಯಾಸಕರು ಬದ್ಧತೆಯಿಂದ ಶ್ರಮಿಸಬೇಕು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ 22ನೇ ಸ್ಥಾನಕ್ಕೆ ಕುಸಿದಿದೆ.ಪಿಯುಸಿ ಫಲಿತಾಂಶ 11ನೇ ಸ್ಥಾನದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವ್ಯಾಪಾರೀಕರಣ ಆಗಬಾರದು

ಡಾ. ಎಚ್ ನರಸಿಂಹಯ್ಯ ವಿಜ್ಞಾನ, ಶೈಕ್ಷಣಿಕ,ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್ ಎಚ್ ಶಿವಶಂಕರ್ ರೆಡ್ಡಿ ಅವರು ಮಾತನಾಡಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಕುಸಿಯುತ್ತಿರುವುದು ತೀವ್ರ ಕಳವಳಕಾರಿ ವಿಚಾರ. ಶೈಕ್ಷಣಿಕ ವ್ಯವಸ್ಥೆ ವಿಕಾಸವಾಗಬೇಕೆ ಹೊರತು ವ್ಯಾಪಾರಿಕರಣ ಆಗಬಾರದು ಎಂದು ಸಲಹೆ ನೀಡಿದರು. ಶಿಕ್ಷಕರಿಗೆ ಸನ್ಮಾನ:

ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿ ಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೇಶವರೆಡ್ಡಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಡಾ.ವೈ.ನವೀನ್ ಭಟ್, ಜಿಲ್ಲಾ ಎಸ್ಪಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿ. ರಮೇಶ್, ಶಿಕ್ಷಕರು ಇದ್ದರು.