ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಇಡೀ ಭಾರತ ದೇಶ ಇವತ್ತು ಸಂಕಷ್ಟದಲ್ಲಿದೆ, ಯುದ್ದ ಬೇಕೋ ಅಥವಾ ಬುದ್ದನ ಶಾಂತಿ ಮಂತ್ರ ಬೇಕೋ ಎಂಬ ದ್ವಂದ್ವದಲ್ಲಿ ನಾವಿದ್ದೇವೆ. ನಾವು ಶಾಂತಿಪ್ರಿಯರು. ಕೆಲವು ಸಂದರ್ಭಗಳಲ್ಲಿ ಯುದ್ದ ಅನಿವಾರ್ಯ ಎಂದರೆ ಒಪ್ಪಿಕೊಳ್ಳಲೇಬೇಕು. ದೇಶದ ಸ್ವಾಭಿಮಾನ, ಭದ್ರತೆಗೆ ಧಕ್ಕೆಯಾದಾಗ ಜಾತಿ-ಧರ್ಮ ಮೀರಿ ದೇಶಧರ್ಮ ಮೆರೆಯಬೇಕು. ಧರ್ಮಕ್ಕಿಂತ ದೇಶ ದೊಡ್ಡದು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಸೋಮವಾರ ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಬುದ್ದ ವಿಹಾರದಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಅಡಿಯಲ್ಲಿ ನಡೆದ 2569ನೇ ವೈಶಾಖ ಬುದ್ಧ ಪೂರ್ಣಿಮೆಯಲ್ಲಿ ಪಾಲ್ಗೊಂಡು ಬುದ್ದನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ನಂತರ ಉಪಾಸಕರು-ಉಪಾಸಕಿಯರು ಹಾಗೂ ಬೌದ್ಧ ಬಿಕ್ಕುಗಳನ್ನು ಉದ್ದೇಶಿಸಿ ಮಾತನಾಡಿದರು.
ಜಗತ್ತಿಗೆ ಭಾರತದ ಕೊಡುಗೆ ಯುದ್ದವಲ್ಲ, ನಾವು ಶಾಂತಿಯ ಬುದ್ಧರನ್ನು ಕೊಟ್ಟಿದ್ದೇವೆ. ಯುದ್ಧ ಯಾರಿಗೂ ಸುಖ, ಶಾಂತಿ, ನೆಮ್ಮದಿ ತರೋದಿಲ್ಲ. ಹೀಗಾಗಿ ಎಲ್ಲರೂ ನೆಮ್ಮದಿಯಾಗಿರಬೇಕಾದರೆ ಯುದ್ಧ ಬಿಟ್ಟು ಬುದ್ಧರನ್ನು ಆಯ್ಕೆ ಮಾಡಿಕೊಳ್ಳಬೇಕು.ಆದರೆ ಕೆಲವೊಮ್ಮೆ ನಮ್ಮ ದೇಶಕ್ಕೆ ಗಂಡಾಂತರ ಬಂದಾಗ ಸಮರ್ಥವಾಗಿ ಎದುರಿಸಲು ಯುದ್ಧವನ್ನು ಆಯ್ಕೆ ಮಾಡಬೇಕಾಗುತ್ತದೆ. ಈಗ ಅಂತಹದ್ದೆ ಪ್ರಯತ್ನ ನಡೆದಿದೆ. ಪಕ್ಕದ ದೇಶ ಪಾಕಿಸ್ತಾನ ನಮ್ಮ ದೇಶದ ಶಾಂತಿಭಂಗಕ್ಕೆ ಮುಂದಾಗಿದ್ದಲ್ಲದೆ ನಮ್ಮ ದೇಶದ ಮುಗ್ಧ ಜನರ ಜೀವ ತೆಗೆದು ಉದ್ಧಟತನ ಮೆರೆದಿದೆ. ಪಾಕಿಸ್ತಾನದ ಪರಮ ನೀಚರಿಗೆ ಬುದ್ಧನ ಶಾಂತಿಯ ಪಾಠ ಅರ್ಥವಾಗಲ್ಲ . ಹೀಗಾಗಿ ಸೇನೆಯ ದಿಟ್ಟ ಪ್ರತ್ಯುತ್ತರವಾಗಿ ಅವರದ್ದೇ ದಾಟಿಯಲ್ಲಿ ಉತ್ತರಿಸಬೇಕಾಗಿದೆ ಎಂದು ಡಾ. ಖರ್ಗೆ ಹೇಳಿದರು.
ನಮ್ಮ ಸೇನೆ ಬಹಳ ಗಟ್ಟಿಯಾಗಿದೆ, ಯಾವುದೇ ಸಂದರ್ಭದಲ್ಲಿ ದೇಶಕ್ಕೆದುರಾಗುವ ಕಂಟಕಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಕೆಲಸ ಸೇನೆ ಮಾಡಲಿದೆ. ಪಾಕಿಸ್ತಾನದ ಜೊತೆಗಿನ ಕಾಳಗದಲ್ಲಿ ಮಡಿದ ಸೈನಿಕರಿಗೆ ನಾವು ನಮಿಸೋಣ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಜಾತಿ, ಧರ್ಮಗಳ ಕ್ಷುಲ್ಲಕ ಮಾತುಗಳನ್ನು ಬಿಡಬೇಕು. ಎಲ್ಲರೂ ಒಗ್ಗಟ್ಟಾಗಿರಬೇಕು ಎಂದರು.ದೇಶದ ಜನರಿಂದು ದುಃಖದಲ್ಲಿದ್ದರೂ ಆತಂಕ ಪಡುವುದು ಬೇಡ. ದೇಶದ ಸೇನೆ ಎಲ್ಲರ ರಕ್ಷಣೆಗೆ ಸಮರ್ಥವಾಗಿದೆ.ನಾವಿಂದು ಬಲಾಢ್ಯ ಸೇನೆಯನ್ನು ನಮಿಸೋಣ, ಬೆಂಬಲಿಸೋಣ. ದೇಶದ ಎಲ್ಲಾ ರಾಜಕೀಯ ಪಕ್ಷಗಳು ಆಡಳಿತ ನಡೆಸುವವರ ಜೊತೆಗೆ ನಿಂತಿದ್ದೇವೆ. ಇದು ರಾಜಕೀಯ ಮಾಡುವ ಸಮಯ ಅಲ್ಲ. ದೇಶ ಉಳಿದರೆ ಮಾತ್ರ ನಾವು, ನೀವು. ಹೀಗಾಗಿ ನಮಗೆಲ್ಲಾ ದೇಶ ಮೊದಲಾಗಬೇಕೆ ಹೊರತು ಧರ್ಮ, ಜಾತಿಗಳಲ್ಲ. ನಮ್ಮೊಳಗಿನ ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಬೇರೆ, ದೇಶದ ವಿಷಯ ಬಂದಾಗ ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟು ಪ್ರದರ್ಶನ ಮುಖ್ಯವೆಂದರು.
ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಎಲ್ಲರೂ ಒಂದಾಗಿ ದೇಶ ರಕ್ಷಣೆಗೆ ಮುಂದಾಗಲೇಬೇಕು, ದೇಶ ಉಳಿದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಧರ್ಮ ಉಳಿಯಲು ಸಾಧ್ಯ. ಹೀಗಾಗಿ ಯುದ್ದೋನ್ಮಾದದ ಈ ಸಂದರ್ಭದಲ್ಲಿ ದೇಶದ ಜನತೆ ಯಾವುದಕ್ಕೂ ಧೃತಿಗೆಡಬಾರದು. ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಎಲ್ಲರೂ ಒಂದಾಗಿ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕೆಂದು ಖರ್ಗೆ ಕರೆ ನೀಡಿದರು.ಪಾಠ ಕಲಿಯದ ಪಾಕಿಸ್ತಾನ
ಪಾಕಿಸ್ತಾನದ ಕಾಲ್ಕೆರೆದು ಜಗಳ ಮಾಡುವ ಬುದ್ಧಿಯನ್ನು ಪ್ರಸ್ತಾಪಿಸಿದ ಡಾ. ಖರ್ಗೆ ಜಮ್ಮು ಕಾಶ್ಮೀರ ಪೆಹಲ್ಗಾಂನಲ್ಲಿ ನಡೆದ ನರಮೇಧದ ದುಷ್ಕೃತ್ಯಕ್ಕೆ ನಾವು ತಕ್ಕ ಪ್ರತ್ಯುತ್ತರ ನೀಡಲೇಬೇಕು. ಹಿಂದೆ 2-3 ಯುದ್ದದಲ್ಲಿ ಅವರನ್ನು ನಾವು ಸೊಲಿಸಿದ್ದರೂ ಪಾಕಿಸ್ತಾನ ಪಾಠ ಕಲಿತಿಲ್ಲ. ತನ್ನ ವಂಚನೆಯ ಬುದ್ಧಿ ಇನ್ನೂ ಬಿಟ್ಟಿಲ್ಲವೆಂದು ಪಾಕಿಗಳನ್ನು ತರಾಟೆಗೆ ತೆಗೆದುಕೊಂಡರು. ಬಾರತೀಯರು ನಾವು ಶಾಂತಿ ಪ್ರಿಯರು. ಆದರೂ ನಮ್ಮ ತಂಟೆಗೆ ಬಂದೋರನ್ನ ಹಂಗೇ ಬಿಡಲಾಗುತ್ತದೆಯೆ? ಯಾವುದೇ ಯುದ್ದವಾದಲ್ಲಿ ಹಾನಿ ತಪ್ಪಿದಲ್ಲ. ಜನಜೀವನ ತೊಂದರೆ ಅನುಭವಿಸಬೇಕಾಗುತ್ತದೆ. ಯುದ್ದ ಅನಿವಾರ್ಯ ಎಂದಾದಾಗ ದೇಶಕ್ಕಾಗಿ ನಾವು ಒಪ್ಪಿಕೊಳ್ಳಲೆಬೇಕಾಗುತ್ತದೆ ಎಂದರು.ದೇಶದ ಸೈನಿಕರಿಗೆ ಖರ್ಗೆ ಸೆಲ್ಯೂಟ್
ಗಡಿಯಲ್ಲಿ ದೇಶ ಕಾಯುತ್ತಿರುವ ಸೈನಿಕರ ನಿರಂತರ ಹೋರಾಟ, ತ್ಯಾಗ ಕೊಂಡಾಡಿದ ಅವರು, ಸೈನ್ಯಕ್ಕೆ ದೇಶದ ಸಂಪೂರ್ಣ ಬೆಂಬಲ ಇದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ದೇಶ ತಲೆಬಾಗುತ್ತದೆ ಎಂದು ಡಾ.ಮಲ್ಲಿಕಾರ್ಜುನ ಖರ್ಗೆ ಸೈನಿಕರ ಕೆಚ್ಚೆದೆಯ ಹೋರಾಟ ಸ್ಮರಿಸಿದರು. ದೇಶ ಗಟ್ಟಿಯಾಗಿದೆ, ಅಸ್ಪೃಶ್ಯತೆ ಇದ್ದಾಗ ಅಂಬೇಡ್ಕರ್, ಬಸವಣ್ಣ, ಬುದ್ಧರಾದಿಯಾಗಿ ಅನೇಕರು ದಾರ್ಶನಿಕರು ಅದನ್ನು ತೊಡೆದು ಹಾಕಲು ಶ್ರಮಿಸಿದರು, ಇದೀಗ ದೇಶಕ್ಕೆಗಂಡಾಂತರ ಬಂದಿದ್ದು ಸೈನಿಕರು ಹೋರಾಡುತ್ತಿದ್ದಾರೆ, ಸಂಕಟದ ಈ ಸಮಯದಲ್ಲಿ ಚುಚ್ಚು ಮಾತು, ಶಹಬ್ಬಾಸ್‌ಗಿರಿ, ಕ್ರೆಡಿಟ್ ವಾರ್ ಇವನ್ನೆಲ್ಲ ಬಿಟ್ಟು ನಾವು ದೇಶಕ್ಕಾಗಿ ಒಂದಾಗಬೇಕಿದೆ ಎಂದು ಖರ್ಗೆ ಹೇಳಿದರು.ಮೌನಾಚರಣೆ:
ಇದೇ ಸಂದರ್ಭದಲ್ಲಿ ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಾ ಹುತಾತ್ಮರಾದ ಸೈನಿಕರು ಮತ್ತು ಪೆಹಲ್ಗಾಂ ಘಟನೆಯಲ್ಲಿ ಜೀವ ಕಳೆದುಕೊಂಡ 26 ಜನರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.ಬೆಂಗಳೂರಿನ ಮಹಾಬೋಧಿ ಸಂಸ್ಥೆಯ ಪೂಜ್ಯ ಭಂತೇ ಧಮ್ಮದತ್ತ ಥೇರಾ ಅವರು ಬುದ್ದ ವಂದನೆ ಸಲ್ಲಿಸಿ ಪ್ರವಚನ ನೀಡಿದರು. ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ರಾಧಾಬಾಯಿ ಖರ್ಗೆ ಅವರು ಬೌದ್ಧ ಬಿಕ್ಕುಗಳಿಗೆ ಸತ್ಕರಿಸಿದರು.
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ವಸಂತ ಕುಮಾರ, ಎ.ಐ.ಸಿ.ಸಿ ಕಾರ್ಯದರ್ಶಿ ಪ್ರಣವ ಝಾ, ಮಾಜಿ ಸಚಿವ ರೇವುನಾಯಕ ಬೆಳಮಗಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಬೌದ್ದ ಉಪಾಸಕರು, ಉಪಾಸಕಿಯರು ಭಾಗವಹಿಸಿದ್ದರು.