ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮಹಾತ್ಮ ಗಾಂಧಿಯವರ ಸ್ಮರಣೆಯನ್ನು ನಾವು ಮಾಡಬಹುದಾಗಿದೆ. ಆದರೆ, ಅವರಂತೆ ಬದುಕಿನಲ್ಲಿ ನಡೆದುಕೊಳ್ಳುವುದು ಕಷ್ಟಸಾಧ್ಯ. ಅದನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಗುರುವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ 121 ಜಯಂತಿ ಅಂಗವಾಗಿ ಪ್ರವಾಸಿ ಮಂದಿರಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು.
ಜಗತ್ತಿನಲ್ಲಿ ನೂರಾರು ದೇಶಗಳಿದ್ದರೂ ಕೂಡ ಗಾಂಧಿ, ಅಂಬೇಡ್ಕರ್, ಬಸವಣ್ಣರಂತಹ ಮಾಹಾನ್ ಪುರುಷರ ಕಾರಣದಿಂದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದ್ದು, ವಿಶ್ವದಲ್ಲೇ ಯಾವುದೇ ರಕ್ತಪಾತವಿಲ್ಲದೇ ಆಹಿಂಸಾ ಮಾರ್ಗದಿಂದಲೇ ದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟ ಮಹಾನೀಯರು ಎಂದರೆ ಅದು ನಾವು ಅದಮ್ಯ ಪ್ರೀತಿ, ಗೌರವದಿಂದ ಕರೆಯುವ ಬಾಪೂಜಿ ಮಾತ್ರ ಎಂದು ಹೇಳಿದರು.ಮಹಾತ್ಮ ಗಾಂಧೀಜಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ ಹಾಗೂ ಸ್ವದೇಶಿ ಚಳವಳಿಗಳ ಮೂಲಕ ಬ್ರಿಟೀಷರನ್ನು ಹಿಮ್ಮೆಟ್ಟಿಸಿದ ಸಂತರಾಗಿದ್ದಾರೆ. ಇಂತಹ ಮಹಾತ್ಮರು ಅಂದು ಹೊನ್ನಾಳಿಯ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದು ಈ ತಾಲೂಕಿನ ನಮ್ಮೇಲ್ಲರ ಭಾಗ್ಯವಾಗಿದ್ದು ಇದರ ಜ್ಞಾಪಕಾರ್ಥವಾಗಿ ಪ್ರವಾಸಿ ಮಂದಿರಲ್ಲಿ ಗಾಂಧೀಜಿ ಶಿಲಾಮೂರ್ತಿಯನ್ನು ಸ್ಥಾಪಿಸಿದ್ದು ಈ ಪವಿತ್ರ ಜಾಗದಲ್ಲಿ ಇಂದು ನಾವು ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯನ್ನು ಅವರ ಶಿಲಾಮೂರ್ತಿಗೆ ಪುಪ್ಪಗಳಿಂದ ಅಲಂಕರಿಸಿ ಭಕ್ತಿಪೂರ್ವಕವಾಗಿ ಪೂಜಿಸಿ ಸ್ಮರಿಸುತ್ತಿದ್ದೇವೆ ಎಂದರು.
ಗಾಂಧೀಜಿಯವರ ಸ್ಮರಣೆ ಮಾಡಬಹುದೇ ಹೊರತು ಅವರಂತೆಯೇ ಜೀವನದಲ್ಲಿ ನಡೆದಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವಂತಾಗಿದೆ ಎಂದು ಹೇಳಿದರು.ದೇಶದ ಮಾಜಿ ಪ್ರಧಾನಿ ಜೈ ಜವಾನ್ -ಜೈ ಕಿಸಾನ್ ಘೋಷವಾಕ್ಯ ಮೊಳಗಿಸಿ ದೇಶಕ್ಕೆ ಆಹಾರ ಭದ್ರತೆ, ಸ್ವಾವಲಂಭನೆ ತಂದುಕೊಟ್ಟ ಮತ್ತೊಬ್ಬ ಮಹಾನ್ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 121ನೇ ಜಯಂತಿಯನ್ನು ಕೂಡ ಇಂದು ಆಚರಿಸುತ್ತಿದ್ದೇವೆ. ಪ್ರಮಾಣಿಕತೆ, ಸರಳ ಜೀವನಕ್ಕೆ ಮತ್ತೊಂದು ಹೆಸರೇ ಲಾಲ್ ಬಹದ್ದೂರ್ ಶಾಸ್ತ್ರಿ ಎಂದು ಹೇಳಿದರು
ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ.ಉಮಾಪತಿ, ರಂಗಕರ್ಮಿ ಪ್ರೇಮ್‌ಕುಮಾರ್ ಬಂಡಿಗಡಿ, ಸಾಸ್ವೇಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ನಾಗಪ್ಪ ಹಿರಿಯ ಮುಖಂಡ ವರದರಾಜಪ್ಪ ಗೌಡ ಮಾತನಾಡಿದರು.ಕಾರ್ಯಕ್ರಮದಲ್ಲಿ ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಹೊನ್ನಾಳಿ ಗ್ರೇಡ್ -2 ತಹಸೀಲ್ದಾರ್ ಸುರೇಶ್, ನ್ಯಾಮತಿ ತಹಸೀಲ್ದಾರ್ ಗೊವಿಂದಪ್ಪ, ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ, ಮುಖ್ಯಾಧಿಕಾರಿ ಲೀಲಾವತಿ, ಬಿಇಒ ನಿಂಗಪ್ಪ, ಕಂದಾಯ ಇಲಾಖೆ ಶಿರಸ್ತೇದಾರ ಮುಂಜನಾಥ್ ಸಿಡಿಪಿಒ ಜ್ಯೋತಿ, ಕುರುವ ಮಂಜು ಹಲವು ಸಿಬ್ಬಂದಿ, ಮುಖಂಡರು ಇದ್ದರು.