ಕನ್ನಡದಲ್ಲಿ ಪೂರ್ಣ ಅಂಕ (೧೨೫ಕ್ಕೆ ೧೨೫) ಗಳಿಸಿದ ವಿದ್ಯಾರ್ಥಿಗಳಿಗೆ ಕೊಪ್ಪ ಕಸಾಪದಿಂದ ಪ್ರತಿಭಾ ಪುರಸ್ಕಾರ
ಕನ್ನಡಪ್ರಭ ವಾರ್ತೆ ಕೊಪ್ಪಕನ್ನಡ ಭಾಷೆ ಮೇಲೆ ಪ್ರೀತಿ, ಅಭಿಮಾನ ಹಾಗೂ ಗೌರವವನ್ನು ಪ್ರತಿಯೊಬ್ಬ ವಿದ್ಯಾರ್ಥಿಬೆಳೆಸಿಕೊಳ್ಳಬೇಕು. ಮಾತೃಭಾಷೆಯಲ್ಲಿ ಸಾಧನೆ ಮಾಡಿದರೆ ಅದು ಜೀವನದ ಯಶಸ್ಸಿಗೆ ಭದ್ರ ಬುನಾದಿ ಎಂದು ಕೊಪ್ಪ ತಾಲೂಕು ತಹಸೀಲ್ದಾರ್ ಲಿಖಿತಾ ಮೋಹನ್ ಹೇಳಿದರು.
ಪಿ.ಎಂ.ಶ್ರೀ. ಕೊಪ್ಪ ಟೌನ್ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ತಾಲೂಕು ಕಸಾಪ ಘಟಕ ಹಾಗೂ ತಾಲೂಕು ಮಹಿಳಾ ಘಟಕದ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡದಲ್ಲಿ ಪೂರ್ಣಾಂಕ (೧೨೫ಕ್ಕೆ ೧೨೫) ಗಳಿಸಿದ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ ತಾವೂ ಸಹ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಬೆಳೆದಿದ್ದು, ವಿದ್ಯಾರ್ಥಿಯಾಗಿದ್ದಾಗ ಇದೇ ರೀತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಜಯಣ್ಣ ಮಾತನಾಡಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ತಾಲೂಕಿನಿಂದ ಹಾಜರಾದ ೧೦೩೦ ವಿದ್ಯಾರ್ಥಿಗಳಲ್ಲಿ ೧೦೧೬ ಮಂದಿ ತೇರ್ಗಡೆ ಹೊಂದಿದ್ದು, ಫಲಿತಾಂಶದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಕೊಪ್ಪ ತಾಲೂಕು 2ನೇ ಸ್ಥಾನ ಪಡೆದಿದೆ. ತಾಲೂಕಿನ ೫೮ ವಿದ್ಯಾರ್ಥಿಗಳು ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಗಳಿಸಿ ಸಾಧನೆ ಮೆರೆದಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕನ್ನಡ ವಿಷಯದಲ್ಲಿ ಪೂರ್ಣ ಅಂಕ ಗಳಿಸಿ ಸಾಧನೆ ಮಾಡಿದ ೪೨ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿ ಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪ ತಾಲೂಕು ಘಟಕದ ಅಧ್ಯಕ್ಷ ಜೆ.ಎಂ. ಶ್ರೀಹರ್ಷರವರ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಸಾಪ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀನಿಧಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಎನ್. ಶಿವಾನಂದ್, ಉಪ ಪ್ರಾಂಶುಪಾಲ ರಾಘವೇಂದ್ರ ಎನ್.ಜಿ., ಮೇಗುಂದ ಹೋಬಳಿ ಘಟಕದ ಅಧ್ಯಕ್ಷ ರಾಜೇಶ್, ಮಹಿಳಾ ಘಟಕದ ಕಸಬಾ ಹೋಬಳಿ ಅಧ್ಯಕ್ಷೆ ಪ್ರೇಮ ಹರಿಹರಪುರ, ಮಹಿಳಾ ಘಟಕ ಅಧ್ಯಕ್ಷೆ ಸುಮಿತ್, ಮೇಗುಂದ ಹೋಬಳಿ ಅಧ್ಯಕ್ಷೆ ಅನ್ನಪೂರ್ಣ, ತಾಲೂಕು ಘಟಕದ ಎಂ.ಟಿ. ಶಂಕರಪ್ಪ, ಜಿನೇಶ್ ತಾಲೂಕು ಮಹಿಳಾ ಘಟಕದ ಅರ್ಚನಾ ಜಿನೇಶ್, ಕೆಪಿಎಸ್ ಪಟ್ಟಣ ಶಾಲಾ ಮುಖ್ಯಶಿಕ್ಷಕಿ ಸಾವಿತ್ರಿ, ಎಸ್.ಡಿಎಂಸಿ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಶಿಕ್ಷಕ ವೃಂದ, ಪೋಷಕರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಮಕ್ಕಳ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.