ಶಿರಸಿ: ಬೇಡ್ತಿ–ಅಘನಾಶಿನಿ ನದಿಗಳು ನಮ್ಮ ಭಾಗದ ಕೃಷಿ ಹಾಗೂ ಕುಡಿಯುವ ನೀರಿನ ಆಧಾರವಾಗಿವೆ. ನದಿ ತಿರುವು ಯೋಜನೆಗೆ ನಾವು ಬೆಂಬಲಿಸಬಾರದು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲೂಕಿನ ಬರೂರಿನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಹಿಂದೂ ಸಂಚಾಲನಾ ಸಮಿತಿ ಹಮ್ಮಿಕೊಂಡ ಹಿಂದೂ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಬೇರೆ ಜಿಲ್ಲೆಗೆ ನೀರು ಬೇಕೆಂಬ ಉದ್ದೇಶದಿಂದ ಇಲ್ಲಿನ ನೀರನ್ನು ಬೇರೆ ಜಿಲ್ಲೆಗೆ ಕೊಂಡೊಯ್ಯುವ ನದಿ ತಿರುವು ಯೋಜನೆ ಸದ್ದು ಮಾಡುತ್ತಿದೆ. ಬೇರೆಯವರಿಗೆ ನೀರು ನೀಡಬಾರದು ಎಂಬ ಸಂಸ್ಕೃತಿ ನಮ್ಮದಲ್ಲ. ಆದರೆ ಇಲ್ಲಿನ ನೀರು ಬೇರೆಡೆಗೆ ಹೋದರೆ ನಮ್ಮ ಪ್ರದೇಶ ಬರಡಾಗುವ ಅಪಾಯವಿದೆ. ಅಲ್ಲಿನ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಬೇರೆ ಪ್ರದೇಶದ ನೀರಿನ ಅವಶ್ಯಕತೆ ಎದುರಾಗುವುದಿಲ್ಲ. ನದಿ ತಿರುವು ಯೋಜನೆಯಿಂದ ಪರಿಸರ, ಕೃಷಿ ಹಾಗೂ ಮೀನುಗಾರಿಕೆ ಮೇಲೆ ದುಷ್ಪರಿಣಾಮ ಬೀಳಲಿದೆ. ಆದ್ದರಿಂದ ನದಿಗಳನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದರು.ದಾರಿಗಳು ಅನೇಕ, ಗುರಿ ಒಂದು. ತಪಸ್ವಿಗಳ ಪುಣ್ಯಭೂಮಿ ಭಾರತ. ಭಾರತ ಹಿಂದೂಗಳ ಸ್ಥಾನ. ನಮಸ್ಕಾರ ಮಾಡುವಾಗ ‘ಜೈ ಹಿಂದ್’ ಎಂದು ಹೇಳುತ್ತೇವೆ ಎಂದು ಹೇಳಿದರು.
ಅಜಂಪಾಡಿ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಮಹಾರಾಷ್ಟ್ರ ಮೂಲೆಯಲ್ಲಿ ಪ್ರಾರಂಭಗೊಂಡ ಸಂಘ ಈಗ ಎಲ್ಲೆಡೆ ವ್ಯಾಪಿಸಿದೆ. ಆಪಾದನೆ ಮತ್ತು ದ್ವೇಷಗಳನ್ನು ಎದುರಿಸಿಕೊಂಡು ಸಂಘ ಮುಂದೆ ಬಂದಿದೆ. ವಿರೋಧದಿಂದ ಸ್ವೀಕಾರದ ವರೆಗೆ ಸಂಘ ತನ್ನ ಕಾರ್ಯಕಲಾಪಗಳನ್ನು ನಡೆಸಿಕೊಂಡು ಬಂದಿದೆ. ಸಮಾಜ ಬಂಧುಗಳಿಗೆ ಸಂಘದ ಕಾರ್ಯಗಳನ್ನು ತಿಳಿಸಲು ಹಿಂದೂ ಸಮ್ಮೇಳನಗಳನ್ನು ಆಯೋಜಿಸಲಾಗುತ್ತಿದೆ. ಜಾತಿ, ಭಾಷೆ ಮತ್ತು ಪ್ರಾಂತಗಳ ನಡುವೆ ನಮ್ಮಲ್ಲಿರುವ ಒಡಕು ನಿವಾರಣೆಯಾಗಬೇಕು. ರಾಷ್ಟ್ರದ ಕಲ್ಪನೆ ಬಂದಾಗ ನಾವು ಒಂದಾಗಿ ಜಗತ್ತಿಗೆ ತೋರಿಸಬೇಕು. ಋಷಿ-ಮುನಿಗಳ ತಪಸ್ಸು ಮುನ್ನೆಲೆಗೆ ಬರಬೇಕು. ಭಾರತ ಎಲ್ಲ ದೃಷ್ಟಿಗಳಲ್ಲೂ ಎತ್ತರದಲ್ಲಿದೆ; ಅದನ್ನು ನೆನಪಿಸಿಕೊಳ್ಳಬೇಕು ಎಂದರು.ವಾರದಲ್ಲಿ ಒಂದು ದಿನ 15 ನಿಮಿಷಗಳ ಕಾಲ ಕುಟುಂಬದವರು ಒಟ್ಟಾಗಿ ಭಜನೆ ಮಾಡಬೇಕು. ತರುಣರು ವಿದೇಶಗಳಲ್ಲಿ ಅಥವಾ ಬೆಂಗಳೂರಿನಲ್ಲಿ ದೂರವಿದ್ದುಕೊಂಡಿದ್ದಾರೆ; ಅವರನ್ನು ಭಜನೆ ಮಾಡಲು ಪ್ರೇರೇಪಿಸಬೇಕು ಎಂದರು.
ನಮ್ಮ ಭಾಷೆಯ ಸಾಹಿತ್ಯ ಎಲ್ಲಿಯೂ ಸಿಗುವುದಿಲ್ಲ. ಭಾರತೀಯ ಭಾಷೆಗಳ ಬಗ್ಗೆ ಶ್ರದ್ಧೆ ಇರಬೇಕು. ಉಡುಗೆ, ಭಾಷಾಶೈಲಿ ಹಾಗೂ ಕಾರ್ಯಕಲಾಪಗಳಲ್ಲಿ ಭಾರತೀಯ ಸಂಸ್ಕೃತಿ ಅರಳಬೇಕು. ಮನೆವೇ ವಿದ್ಯಾಲಯವಾಗಬೇಕು. ನಮಗೆ ಜಾತಿ ಮುಖ್ಯವಲ್ಲ; ಸ್ವದೇಶಿ ಭಾವನೆ, ಪರಿಸರ ಮತ್ತು ನಾಗರಿಕ ಶಿಷ್ಟಾಚಾರ ಮುಖ್ಯವೆಂದು ಹೇಳಿದರು.
ಮಾರಿಕಾಂಬಾ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಭಾಗೀರಥಿ ಜೋಶಿ ಮಾತನಾಡಿ, ಸನಾತನ ಧರ್ಮವನ್ನು ಉಳಿಸಲು ಜನಜಾಗೃತಿ ಅಗತ್ಯ. ಸಮಾಜವೆಲ್ಲವೂ ಒಂದಾಗಿ ಹಿಂದೂಗಳಾಗಬೇಕು ಎಂದರು.
ಹಿಂದೂ ಧರ್ಮವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ. ಹಿಂದೂ ಧರ್ಮವು ಹಿಂಸೆ ಅಥವಾ ದ್ವೇಷವನ್ನು ಬೋಧಿಸಿಲ್ಲ ಎಂದರು.ಹಿಂದೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಚಾರುಚಂದ್ರ ಶಾಸ್ತ್ರಿ ಸ್ವಾಗತಿಸಿ ಪರಿಚಯಿಸಿದರು. ಸಂಯೋಜಕ ಅಣ್ಣಪ್ಪ ನಾಯ್ಕ ಹಲಸಿನಕೈ ನಿರ್ಣಯ ಮಂಡಿಸಿದರು. ಗಣಪತಿ ಭಟ್ಟ ಬೆಳಖಂಡ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಭಟ್ಟ ಬೆಳಖಂಡ ಸಾಧಕರನ್ನು ಪರಿಚಯಿಸಿದರು. ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯಿಂದ ಸ್ವಾಗತಗೀತೆ ಹಾಡಲಾಯಿತು.
ಯೋಧರಿಗೆ ಸನ್ಮಾನ: ನಾರಾಯಣ ಶಾಸ್ತ್ರಿ ಕುಳವೆ, ಜಿ.ಡಿ. ಭಟ್ಟ ಬೆಳಖಂಡ, ನಾರಾಯಣ ಹೆಗಡೆ ಕಲಗದ್ದೆ, ಗಣಪತಿ ರಾಣೆ ಪಡಂಬೈಲು, ಧನಂಜಯ ನಾಯ್ಕ ಕುಳವೆ, ಶ್ರೀನಿವಾಸ ನಾಯ್ಕ ಕುಳವೆ ಅವರ ತಂದೆ-ತಾಯಿಗೆ, ಪ್ರಶಾಂತ ನಾಯ್ಕ ತೆರಕನಳ್ಳಿ ಅವರ ತಂದೆ-ತಾಯಿ, ಚಂದ್ರಕಾಂತ ಹೆಗಡೆ ತೆರಕನಳ್ಳಿ ಇವರನ್ನು ಶ್ರೀಗಳು ಗೌರವಿಸಿದರು.