ಸಾರಾಂಶ
ದಾವಣಗೆರೆ: ಕಾಂತರಾಜ್ ಅವರು ನಡೆಸಿರುವ ಜಾತಿ ಗಣತಿ ವರದಿ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನರಿಗೆ ನಾವು ಬೆಂಬಲವಾಗಿ ನಿಂತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಸಾಬ್ ಹೇಳಿದರು.
ಇಲ್ಲಿನ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿರುವ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶನಿವಾರ ರಾಜ್ಯ ಸರ್ಕಾರವು ಕಾಂತರಾಜ ಆಯೋಗದ ವರದಿ ಬಿಡುಗಡೆ ಮಾಡಿ, ಅನುಷ್ಠಾನಗೊಳಿಸಲು ಕುರಿತು ದಾವಣಗೆರೆ ಜಿಲ್ಲಾ ಅಹಿಂದ ಹಾಗೂ ಶೋಷಿತ ಸಮುದಾಯಗಳು ಹಮ್ಮಿಕೊಂಡಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಅಹಿಂದ ಹಾಗೂ ಶೋಷಿತ ಸಮುದಾಯಗಳು ಸಂಘಟನಾತ್ಮಕವಾಗಿ ದಾವಣಗೆರೆ ಜಿಲ್ಲೆಯಿಂದಲೇ ಇದಕ್ಕೆ ಚಾಲನೆ ನೀಡಲು ಇಂದು ಸಭೆ ಮಾಡಲಾಗಿದೆ ಹೊರತು ನಾವು ಯಾರ ವಿರುದ್ಧವೂ ಅಲ್ಲ. ಇದು ನಮ್ಮ ಹಕ್ಕು ಪಡೆಯಲು ಹೋರಾಟವಾಗಿದೆ ಎಂದರು. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ಬೆಂಬಲಕ್ಕೆ ನಾವು ನಿಂತು ಮುಂದಿನ ಸಚಿವ ಸಂಪುಟದಲ್ಲಿ ಕಾಂತರಾಜ್ ಆಯೋಗ ನಡೆಸಿರುವ ಸಮೀಕ್ಷಾ ವರದಿ ಬಿಡುಗಡೆ ಮತ್ತು ಅನುಷ್ಠಾನಕ್ಕೆ ಒತ್ತಾಯ ಮಾಡೋಣ. ಹಾಗೆಯೇ ಶೋಷಿತ ಸಮುದಾಯಗಳು ಸಂಘಟನಾತ್ಮಕವಾಗಿ ನಮ್ಮ ಹಕ್ಕು ಪಡೆಯುವಲ್ಲಿ ನಾವೆಲ್ಲ ಒಟ್ಟಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಛಲವಾದಿ ಮಹಾಸಭಾದ ಅಧ್ಯಕ್ಷ ಎನ್.ರುದ್ರಮುನಿ ಮಾತನಾಡಿ, ಜ.16ರಂದು ನಡೆಯಲಿರುವ ಸಚಿವ ಸಂಪುಟದಲ್ಲಿ ಸಮಿಕ್ಷಾ ವರದಿ ಬಿಡುಗಡೆ ಗೋಳಿಸುವಂತೆ ಒತ್ತಾಯ ಮಾಡಲು ಜಿಲ್ಲೆಯಿಂದ ಸಂಘಟನಾತ್ಮಕವಾಗಿ ಕೆಲವು ಸಮಿತಿಗಳನ್ನು ಮಾಡಿಕೊಂಡು ಹೆಚ್ಚು ಶೋಷಿತ ಸಮುದಾಯಗಳು ಪಾಲ್ಗೊಳ್ಳುವಂತೆ ಹೇಳಿದರು.
ಇನ್‌ಸೈಟ್ಸ್ ಐಎಎಸ್-ಕೆಎಎಸ್ ತರಬೇತಿ ಕೇಂದ್ರದ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ್ ಮಾತನಾಡಿ, ಮೊದಲು ನಾವು ಅಸೂಯೆಗಳನ್ನು ಬಿಟ್ಟು ಹೊಸ ನಾಯಕರುಗಳನ್ನು ಹುಟ್ಟು ಹಾಕಬೇಕಾಗಿದೆ. ಅಹಿಂದ ಮತ್ತು ಶೋಷಿತ ಸಮುದಾಯಗಳಿಗೆ ಸಿದ್ದರಾಮಯ್ಯನವರ ನಂತರ ಯಾರು ಎಂಬುದು ಯೋಚಿಸಬೇಕಾಗಿದೆ. ಕೆಲವು ಪಟ್ಟಭದ್ರರು ನಮ್ಮನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಎಷ್ಟು ದಿನ ಇಂತಹ ವ್ಯವಸ್ಥೆಯಲ್ಲಿ ನಾವು ಬದುಕಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅತಿಹೆಚ್ಚು ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅನಿವಾರ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವಿಲ್ಲದೆ ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ. ನಾವು ಮೊದಲು ಪ್ರಜ್ಞಾವಂತರಾಗಬೇಕಾಗಿದೆ ಎಂದರು.ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ,ವೀರಣ್ಣ, ವಕೀಲ ಅನಿಪ್ ಪಾಷ, ನಿವೃತ ನ್ಯಾಯಾಧೀಶರಾದ ಬಾಬಾ ಸಾಹೇಬ್ ದಿನಕರ್, ನಾಯಕ ಸಮಾಜದ ಮುಖಂಡ ಹೊದಿಗೆರೆ ರಮೇಶ್ ಮಾತನಾಡಿದರು.
ಸಭೆಯಲ್ಲಿ ವಿರೇಶ್ ನಾಯ್ಕ್, ಮಲ್ಲಿಕಾರ್ಜುನ ಹಲಸಂಗಿ, ಲೋಕಿಕೆರೆ ಸಿದ್ದಪ್ಪ, ಮಹಮ್ಮದ್ ಸಿರಾಜ್, ಆಲೂರು ಲಿಂಗರಾಜ, ಬಿ.ತಿಪ್ಪಣ್ಣ ಕತ್ತಲಗೆರೆ, ಎಂ.ಟಿ.ಸುಭಾಷ್ ಚಂದ್ರ, ಶೇಕ್ ತಾಹಿರ್, ದಿಟ್ಟೂರು ಚಂದ್ರು, ಸಿದ್ದಲಿಂಗಪ್ಪ, ಪರಮೇಶ ನಲ್ಕುಂದ ಹಾಲೇಶ, ಬಿ.ಎಂ.ನಿರಂಜನ, ಎಚ್.ಕೆ.ವೀರಣ್ಣ, ವಕೀಲರಾದ ಹುಚ್ಚಂಗಪ್ಪ, ಫೈರೋಜ್ ಖಾನ್, ಬಾಗೂರು ಆನಂದಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಶೋಷಿತ ಸಮುದಾಯಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.