ಸಾರಾಂಶ
ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ । ಪ್ರಜ್ವಲ್‌ಗೆ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಶ್ನೆ । ಪ್ರೀತಂ ಪರ ರಾಧಾ ಮೋಹನ್ ಬ್ಯಾಟಿಂಗ್
ಕನ್ನಡಪ್ರಭ ವಾರ್ತೆ ಹಾಸನ‘ಬಿಜೆಪಿ-ಜೆಡಿಎಸ್ ಕರ್ನಾಟಕದಲ್ಲಿ ೨೮ಕ್ಕೆ ೨೮ ಸ್ಥಾನ ಗೆಲ್ಲುತ್ತದೆ ಎಂದು ಗ್ಯಾರಂಟಿ ಕೊಡುತ್ತೇನೆ. ಬಿಜೆಪಿ ನಾಯಕ ಪ್ರೀತಂಗೌಡ ಅವರಿಗೆ ಹಾಸನದಲ್ಲಿ ಇರಬೇಡಿ ಎಂದು ನಾನೇ ಹೇಳಿದ್ದೇನೆ. ನಮಗೆ ಹಾಸನ ಎಷ್ಟು ಮುಖ್ಯವೋ ಮೈಸೂರು ಅಷ್ಟೇ ಮುಖ್ಯ. ಅಲ್ಲಿ ಯದುವೀರ್ ಅವರನ್ನು ನಿಲ್ಲಿಸಿದ್ದೇವೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಹೇಳಿದರು.
ನಗರದಲ್ಲಿ ಶನಿವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ-ಜೆಡಿಎಸ್ ತುರ್ತು ಸಮನ್ವಯ ಸಭೆಯಲ್ಲಿ ಮಾತನಾಡಿದರು. ‘ಈವರೆಗೆ ನೀವು ಪ್ರೀತಂಗೌಡರಿಗೇಕೆ ಕರೆ ಮಾಡಿಲ್ಲ. ಅವರನ್ನು ಹೊರತುಪಡಿಸಿ ಉಳಿದ ಪರ್ಯಾಯ ನಾಯಕರನ್ನೆಲ್ಲಾ ಸಂಪರ್ಕಿಸಿದ್ದೀರಿ. ಅವರನ್ನೇಕೆ ಸಂಪರ್ಕಿಸಿಲ್ಲ’ ಎಂದು ಪ್ರಶ್ನಿಸುವ ಮೂಲಕ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಅವರನ್ನೇ ತಬ್ಬಿಬ್ಬು ಮಾಡಿದರು. ಮೈತ್ರಿ ನಂತರವೂ ಪ್ರೀತಂಗೌಡರು ಜೆಡಿಎಸ್‌ಗೆ ಸಹಕರಿಸುತ್ತಿಲ್ಲ ಎನ್ನುವ ದೇವೇಗೌಡರ ದೂರಿನ ಮೇರೆಗೆ ಸಭೆ ಕರೆಯಾಗಿತ್ತು.ಸಭೆಯಲ್ಲಿ ಪ್ರೀತಂಗೌಡ ಪರ ಬ್ಯಾಟಿಂಗ್ ಮಾಡಿದ ಅಗರ್ವಾಲ್, ‘ಪ್ರೀತಂಗೌಡರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಪಕ್ಷದ ಆಸ್ತಿ. ಅವರು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ’ ಎಂದು ಪ್ರೀತಂಗೌಡ ಜತೆ ಜೆಡಿಎಸ್ ನಾಯಕರ ವರ್ತನೆ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಜೆಡಿಎಸ್ ನಾಯಕರು ತಮ್ಮ ನಡವಳಿಕೆ ಬದಲಾವಣೆ ಮಾಡಿಕೊಳ್ಳಬೇಕು. ಪ್ರೀತಂಗೌಡ ಖಂಡಿತಾ ಮೈತ್ರಿ ಪರ ಕೆಲಸ ಮಾಡ್ತಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡಬೇಕು’ ಎಂದು ಹೇಳಿದರು.ಕಾಂಗ್ರೆಸ್‌ಗೆ ಮತ ಹಾಕುವಂತೆ ಪ್ರೀತಂಗೌಡ ಬೆಂಬಲಿಗರ ಹೇಳಿಕೆ ವಿಚಾರವಾಗಿ ಮಾತನಾಡಿ, ‘ಇದು ಸತ್ಯಕ್ಕೆ ದೂರವಾದ ವಿಚಾರ. ನಾವು ಹಾಸನದಲ್ಲಿ ಸಮೀಕ್ಷೆ ನಡೆಸಿದ್ದೇವೆ. ಆ ರೀತಿ ಹೇಳಿಕೆ ಎಲ್ಲೂ ಕಂಡು ಬಂದಿಲ್ಲ. ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದೆ. ನಾನು ಇಲ್ಲಿನ ಕೆಲಸ ಬಿಟ್ಟು ಉತ್ತರ ಪ್ರದೇಶಕ್ಕೆ ಹೋದರೆ ನಮ್ಮ ಪಕ್ಷ ಅದನ್ನು ಇಷ್ಟಪಡುತ್ತದೆಯೇ? ನಾವು ಒಂದು ಸಂಘಟನೆ ನಮಗೆ ಎಲ್ಲಿ ಕೆಲಸ ನೀಡಲಾಗುತ್ತದೆಯೋ ಅಲ್ಲಿ ಅವರ ಕೆಲಸದ ಮೇಲೆ ಮೌಲ್ಯಮಾಪನ ನಡೆಯುತ್ತದೆ’ ಎಂದು ಹೇಳಿದರು.‘ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಬಗ್ಗೆಯೇ ಗ್ಯಾರಂಟಿ ಇಲ್ಲ. ನಾನು ನಿಮಗೆ ಗ್ಯಾರಂಟಿ ಕೊಡುತ್ತೇನೆ. ಲೋಕಸಭೆ ಚುನಾವಣೆ ನಂತರ ಕರ್ನಾಟಕ ಕಾಂಗ್ರೆಸ್‌ನ ಐದು ಗ್ಯಾರಂಟಿಗಳು ಸ್ಥಗಿತಗೊಳ್ಳಲಿವೆ. ಅವರ ಸರ್ಕಾರವೇ ಐದು ಗ್ಯಾರಂಟಿಗಳನ್ನು ಬಂದ್ ಮಾಡಲಿದೆ. ಅವರ ಬಳಿ ಹಣವೇ ಇಲ್ಲ. ಈಗ ಅವರು ಮಾಡುತ್ತಿರುವ ಘೋಷಣೆಗಳೆಲ್ಲಾ ಚುನಾವಣೆ ಘೋಷಣೆ’ ಎಂದು ಕುಟುಕಿದರು.
ಲೋಕಸಭಾ ಚುನಾವಣೆ ನಂತರ ಮೈತ್ರಿ ಮುಂದುವರಿಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ನಾವು ಕಂಟ್ರ್ಯಾಕ್ಟ್ ಮದುವೆಯಾಗುವುದಿಲ್ಲ. ಮದುವೆ ಎನ್ನುವುದು ನಮಗೆ ಧಾರ್ಮಿಕವಾದ ಕಾರ್ಯ. ದೀರ್ಘಕಾಲ ಜೊತೆಯಾಗಿ ನಡೆಯಲು ಸಂಬಂಧ ಬೆಳೆಸುತ್ತೇವೆ. ಎರಡು ಕೈ ಸೇರಿದರೆ ಚಪ್ಪಾಳೆ ಆಗುತ್ತದೆ. ನಾವು ಸಹ ಈ ಸಂಬಂಧ ಮುಂದುವರೆಯುವುದನ್ನು ಬಯಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಇದ್ದರು.