ಸಾರಾಂಶ
ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀ. ಎತ್ತರಗೊಳಿಸಿ ಯೋಜನೆ ಪೂರ್ಣಗೊಂಡರೆ ಉಭಯ ಜಿಲ್ಲೆಗಳಷ್ಟೇ ಅಲ್ಲದೇ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೂ ಅನುಕೂಲವಾಗಲಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ವಿಜಯಪುರ ಮತ್ತು ಬಾಗಲಕೋಟೆ ಉಭಯ ಜಿಲ್ಲೆಗಳ ಶಾಸಕರು ಹಾಗೂ ಸಂಸದರು ಪಕ್ಷಾತೀತವಾಗಿ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ಸಂತ್ರಸ್ತರ ಹೋರಾಟ ಸಮಿತಿ ಬಾಗಲಕೋಟೆಯಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿ ಮಾತನಾಡಿದ ಅವರು, ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಮೀ. ಎತ್ತರಗೊಳಿಸಿ ಯೋಜನೆ ಪೂರ್ಣಗೊಂಡರೆ ಉಭಯ ಜಿಲ್ಲೆಗಳಷ್ಟೇ ಅಲ್ಲದೇ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಗೂ ಅನುಕೂಲವಾಗಲಿದೆ. 16 ಲಕ್ಷ ಹೇಕ್ಟೆರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ. ಇದರಿಂದ ರೈತರ ಬಾಳು ಹಸನಾಗಲಿದೆ. ಎರಡೂ ಜಿಲ್ಲೆಗಳ 18 ಜನ ಶಾಸಕರು ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಯೋಜನೆಗೆ ಬೇಕಾದ ಹಣ ಬಿಡುಗಡೆ ಮಾಡಬೇಕು. ಆಲಮಟ್ಟಿ ಜಲಾಶಯ ಎತ್ತರದಿಂದ ಸಂತ್ರಸ್ತರಾಗುವ 22 ಗ್ರಾಮ ಮತ್ತು 1.30 ಲಕ್ಷ ಎಕರೆ ರೈತರ ಜಮೀನು ಭೂಸ್ವಾಧೀನಕ್ಕೆ ಏಕರೂಪ ಪರಿಹಾರ ನೀಡಬೇಕು. ನ್ಯಾಯಯುತವಾಗಿರುವ ಈ ಯೋಜನೆಯನ್ನು ಕಾಲಮಿತಿಯಲ್ಲಿ ಮಾಡಬೇಕು. ಸಿಎಂ ಗುರುವಾರ ಸಂಜೆ 4 ಗಂಟೆಗೆ ಈ ಭಾಗದ ಶಾಸಕರು, ಸಂಸದರ ಸಭೆ ಕರೆದಿದ್ದಾರೆ. ನಾವೆಲ್ಲ ಶಾಸಕರು ಪಕ್ಷಾತೀತವಾಗಿ ಸಂತ್ರಸ್ತರ ಧ್ವನಿಯಾಗಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಿದ್ದೇವೆ. ಅಲ್ಲದೇ, ಪ್ರಾಮಾಣಿಕವಾಗಿ ಸರ್ಕಾರದ ಗಮನ ಸೆಳೆಯುತ್ತೇವೆ. ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.