- ಐವರು ಮಾಜಿ ಮೇಯರ್‌ಗಳು, ಪಾಲಿಕೆ ಮಾಜಿ ಸದಸ್ಯರು ಒಮ್ಮತದಿಂದ ಹೈಕಮಾಂಡ್‌ಗೆ ಒತ್ತಾಯ

- - -

- ಕಾಂಗ್ರೆಸ್‌ನ ಸಂಪ್ರದಾಯದಂತೆ ಮೃತರ ಕುಟುಂಬಕ್ಕೆ ಸ್ಪರ್ಧೆ ಅ‍ವಕಾಶ ನೀಡಲಿ

- ಮುಸ್ಲಿಂ ಸಮುದಾಯದ ಕೆಲವರ ಸರಣಿ ಸಭೆ ಸರಿಯಲ್ಲ: ಕೆ.ಚಮನ್‌ ಸಾಬ್‌

- - -


ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್‌ ಹಿರಿಯ ನಾಯಕ ದಿವಂಗತ ಶಾಮನೂರು ಶಿವಶಂಕರಪ್ಪ ನಿಧನದಿಂತ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಪ್ರದಾಯ, ಅಲಿಖಿತ ನಿಯಮದಂತೆ ಮೃತ ಶಾಮನೂರು ಕುಟುಂಬಕ್ಕೇ ಟಿಕೆಟ್ ನೀಡುವಂತೆ ದಕ್ಷಿಣ ಕ್ಷೇತ್ರದ ಐವರು ಮಾಜಿ ಮೇಯರ್‌ಗಳು, ಪಾಲಿಕೆ ಮಾಜಿ ಸದಸ್ಯರು ಒಮ್ಮತದಿಂದ ಹೈಕಮಾಂಡ್‌ಗೆ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್‌ಗಳಾದ ಮುಸ್ಲಿಂ ಸಮಾಜದ ಕೆ.ಚಮನ್ ಸಾಬ್‌, ಕುರುಬ ಸಮಾಜದ ಎಚ್.ಬಿ.ಗೋಣೆಪ್ಪ, ದಾವಣಗೆರೆ ಉತ್ತರ- ದಕ್ಷಿಣ ಕ್ಷೇತ್ರಗಳು ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ನಾಯಕತ್ವದಲ್ಲಿ ಬಲಿಷ್ಠವಾಗಿದೆ. ಪಕ್ಷ ಯಾರಿಗೇ ಟಿಕೆಟ್ ಕೊಟ್ಟರೂ ಗೆಲ್ಲಿಸುವ ಸಾಮರ್ಥ್ಯವೂ ಸಚಿವ- ಸಂಸದರಿಗೆ ಇದೆ. ಶಾಮನೂರು ಶಿವಶಂಕರಪ್ಪ ಅವರ ಕುಟುಂಬದವರಿಗೇ ಟಿಕೆಟ್ ನೀಡಬೇಕು ಅಥವಾ ಶಾಮನೂರು ಕುಟುಂಬದವರು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂದರು.

ಮುಸ್ಲಿಂ ಸಮುದಾಯದ ಕೆಲವರು ಈಗ ಸರಣಿ ಸಭೆಗಳನ್ನು ಮಾಡುತ್ತ, ತಮಗೇ ಟಿಕೆಟ್ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ. ಹೀಗೆ ಮೇಲಿಂದ ಮೇಲೆ ಸಭೆಗಳನ್ನು ಮಾಡುತ್ತಿದ್ದರೆ ಹಿಂದು- ಮುಸ್ಲಿಮರ ಮಧ್ಯೆ ಒಡಕುಂಟಾಗಿ, ಸೌಹಾರ್ದತೆ ಹಾಳಾಗುತ್ತದೆ. ಹಾಗಾಗಿ ಮುಸ್ಲಿಂ ಮುಖಂಡರು ಸಭೆಗಳನ್ನು ಮಾಡಿ, ಗೊಂದಲ ಮೂಡಿಸೋದು ಬಿಡಬೇಕು. ಬೇಕಿದ್ದರೆ ಪಕ್ಷದ ವರಿಷ್ಠರ ಬಳಿ ಹೋಗಿ ಟಿಕೆಟ್ ತರಲಿ. ಆಗ ನಾವೂ ಪಕ್ಷಕ್ಕಾಗಿ ದುಡಿದು, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷವು ಯಾರಿಗೆ ಟಿಕೆಟ್ ನೀಡಿದರೂ ಅಂತಹವರನ್ನು ಗೆಲ್ಲಿಸಿಕೊಡುತ್ತೇವೆ. ಈ ಬಗ್ಗೆ ಯಾವುದೇ ಗೊಂದಲಗಳೂ ಬೇಡ. ಹಾಗಾಗಿ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ವಿಚಾರ, ಅಭ್ಯರ್ಥಿಗಳ ಆಯ್ಕೆವಿಚಾರದಲ್ಲಿ ಮುಖಂಡರು ಇಲ್ಲಸಲ್ಲದ, ಗೊಂದಲಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಮತ್ತಷ್ಟು ಗೊಂದಲ ಹುಟ್ಟು ಹಾಕುತ್ತಿರುವುದು ಸರಿಯಲ್ಲ. ಜಾತಿ-ಜಾತಿಗಳ ಮಧ್ಯೆ ಬಿರುಕುವ ಮೂಡಿಸಿವು ಕೆಲಸ ಮಾಡುವುದೂ ಒಳ್ಳೆಯದಲ್ಲ. ಸದ್ಯಕ್ಕೆ ವಾತಾವರಣ ಶಾಂತವಾಗಿದೆ. ಯಾರೇ ಆಗಲಿ ಅದನ್ನು ಕದಡುವ ಯತ್ನ ಮಾಡಬಾರದು ಎಂದು ಚಮನ ಸಾಬ್‌ ಮನವಿ ಮಾಡಿದರು.

ಮಾಜಿ ಮೇಯರ್‌ಗಳಾದ ಎಚ್.ಬಿ.ಗೋಣೆಪ್ಪ, ಬಿ.ಎಚ್. ವಿನಾಯಕ ಪೈಲ್ವಾನ್‌, ಅನಿತಾ ಬಾಯಿ ಮಾಲತೇಶ, ಜಯಮ್ಮ ಗೋಪಿನಾಯ್ಕ, ಪಾಲಿಕೆ ಮಾಜಿ ಸದಸ್ಯರಾದ ಜೆ.ವಿ.ಪ್ರಕಾಶ, ಉದಯಕುಮಾರ, ಜಾಕೀರ್ ಅಲಿ, ಕಬೀರ್ ಖಾನ್, ಚಂದ್ರಪ್ಪ, ಬಸವರಾಜ, ಉಮೇಶ, ಜಗದೀಶ, ಸೈಯದ್ ಚಾರ್ಲಿ ಇತರರು ಇದ್ದರು.

- - -

-17ಕೆಡಿವಿಜಿ10: ದಾವಣಗೆರೆಯಲ್ಲಿ ಕಾಂಗ್ರೆಸ್‌ ಮಾಜಿ ಮೇಯರ್‌ಗಳಾದ ಕೆ.ಚಮನ್ ಸಾಬ್‌, ಎಚ್.ಬಿ.ಗೋಣೆಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರು ಇದ್ದರು.