ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಜಯ ಸಾಧಿಸಲಿದ್ದು, ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಿದ ಕಾಂಗ್ರೆಸ್ಸಿಗೆ ಮತದಾರರು ತಕ್ಕ ಕಾಠ ಕಲಿಸಿದ್ದಾರೆಂಬ ವಿಶ್ವಾಸವಿದೆ ಎಂದು ಜೆಡಿಎಸ್ ಪಕ್ಷದ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಜಯ ಸಾಧಿಸಲಿದ್ದು, ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಿದ ಕಾಂಗ್ರೆಸ್ಸಿಗೆ ಮತದಾರರು ತಕ್ಕ ಕಾಠ ಕಲಿಸಿದ್ದಾರೆಂಬ ವಿಶ್ವಾಸವಿದೆ ಎಂದು ಜೆಡಿಎಸ್ ಪಕ್ಷದ ಮುಖಂಡ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ಏ.9ರಂದು ನಡೆದ ಚುನಾವಣೆ ರೀತಿ ಹಿಂದೆಂದೂ ನಡೆದಿರಲಿಲ್ಲ. ನಾವೆಂದಿಗೂ ಅಂತಹ ಚುನಾವಣೆಯನ್ನು ನೋಡಿರಲಿಲ್ಲ. ಯಾರೂ ಕೇಳಿರಲಿಲ್ಲ. ಅಷ್ಟರಮಟ್ಟಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸಿತು ಎಂದು ದೂರಿದರು.

ಮತ ಎಂದರೆ ಮನೆ ಮಗಳಿದ್ದಂತೆ:

ಕಾಂಗ್ರೆಸ್ ಪಕ್ಷದಿಂದ ಹಣವೇ ಬಂದಿಲ್ಲವೆಂದು ಮತಗಟ್ಟೆ ಕಡೆಗೆ ಮತದಾರರು ಹೋಗಲೇ ಇಲ್ಲದಂತಹ ಸ್ಥಿತಿ ಇತ್ತು. ಮತದಾರರು ದೇಶದ ಪ್ರಜೆಗಳು, ಮತದಾರ ಈ ದೇಶದ ಪ್ರಭುಗಳು. ಮತವೆಂದರೆ ಇಂದಿಗೂ ಗೌರವವಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಮತವನ್ನು ನಮ್ಮ ಮನೆಯ ಮಗಳಿದ್ದಂತೆ ಅಂತಾ ಹೇಳಿದ್ದಾರೆ. ಅಂತಹ ಮಗಳನ್ನು ಎಷ್ಟು ಗೌರವದಿಂದ ಕಾಣುತ್ತೇವೋ, ಆಕೆಯನ್ನು ಯೋಗ್ಯ ಇದ್ದವರಿಗೆ ನೋಡಿ ಮದುವೆ ಮಾಡುತ್ತೇವೋ ಅದೇ ರೀತಿ ಮತ ಎಂಬ ಮಗಳನ್ನು ಯೋಗ್ಯ, ಅರ್ಹ ಅಭ್ಯರ್ಥಿಗೆ ನೋಡಿ, ನೀಡಬೇಕು ಎಂದು ಅವರು ಹೇಳಿದರು.

ಆದರೆ, ಇಂದಿನ ಪರಿಸ್ಥಿತಿ ಏನಾಗಿದೆ? ಅಭಿವೃದ್ಧಿಗೆ ಮನ ಸೋಲಲಿಲ್ಲ. ಕ್ಷೇತ್ರದ ಹಿತಕ್ಕಾಗಿ ಕೆಲಸ ಮಾಡುವವರಿಗೆ ಮತದಾರನ ಮನ ಸೋಲಲಿಲ್ಲ. ಕೆಲ ಭಾಗಗಳಲ್ಲಿ ಹಣ, ಆಮಿಷಕ್ಕೆ ಮನ ಸೋತಿದ್ದು ದುರ್ದೈವ. ಶ್ರಮಿಕರ ಕುಟುಂಬದಿಂದ ಬಂದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪನಿಗೆ ಎಲ್ಲರೂ ಅವಕಾಶ ನೀಡಬೇಕೆಂದು, ಮತ ನೀಡಿ, ಬೆಂಬಲಿಸಿದ್ದಾರೆಂದು ಭಾವಿಸುವೆ. ಎನ್‌ಡಿಎ ಪರ ಕ್ಷೇತ್ರದಲ್ಲಿ ವಾತಾವರಣ ಇದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಹೆಚ್ಚಾಗಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಹಣದ ಹೊಳೆಯೇ ಹರಿಯಿತು. ಕಾಂಗ್ರೆಸ್ಸಿಗೆ ಮತದಾರ ಪಾಠ ಕಲಿಸಿದ್ದಾನೆಂಬ ವಿಶ್ವಾಸ ನಮಗಿದೆ. ಎನ್‌ಡಿಎ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಸಂಘಟಿತರಾಗಿ ದಕ್ಷಿಣ ಚುನಾವಣೆ ಮಾಡಿದ್ದಾರೆ. ಯಾರೂ ಸಹ ಒಳ ಪೆಟ್ಟನ್ನು ಕೊಟ್ಟಿಲ್ಲ. ಎನ್‌ಡಿಎ ಅಭ್ಯರ್ಥಿ ಗೆಲುವಿಗಾಗಿ ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ನಮ್ಮ ಅಭ್ಯರ್ಥಿ ಇಲ್ಲಿ ಗೆಲ್ಲಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎನ್‌ಡಿಎ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಪರ ಜೆಡಿಎಸ್ ಜಿಲ್ಲಾ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಸಹ ಕೆಲಸ ಮಾಡಿದ್ದಾರೆ. ಬಿಜೆಪಿಯ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ವಿಜಯೇಂದ್ರ, ಜಿ.ಎಂ.ಸಿದ್ದೇಶ್ವರ ಸೇರಿದಂತೆ ಅನೇಕರು ಕೆಲಸ ಮಾಡಿದರು. ನಮ್ಮ ನಾಯಕರಾದ ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹ ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಮೈತ್ರಿಪಕ್ಷಗಳ ಸಂಘಟಿತ ಪ್ರಯತ್ನದ ಫಲವಾಗಿ ದಕ್ಷಿಣದಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾನೆ ಎಂದು ಅವರು ಹೇಳಿದರು.

- - -

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಜಯದ ಮಾಲೆ ಎನ್‌ಡಿಎ ಅಭ್ಯರ್ಥಿ ಕೊರಳೇರಲಿದೆ. ಮೇ.4ರಂದು ದಕ್ಷಿಣ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸುತ್ತೇವೆ. ಚುನಾವಣೆಗೆ ಶ್ರಮಿಸಿದ ಎಲ್ಲ ಮತದಾರ ಪ್ರಭುಗಳಿಗೆ ಜೆಡಿಎಸ್ ಪರವಾಗಿ ಕೃತಜ್ಞತೆ ಅರ್ಪಿಸುವೆ.

- ಎಚ್.ಎಸ್.ಶಿವಶಂಕರ, ಜೆಡಿಎಸ್ ಮುಖಂಡ, ಮಾಜಿ ಶಾಸಕ.