ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್‌ ವರದಿ ಜಾರಿಗೆ ಬಿಡುವುದಿಲ್ಲ

| Published : Sep 28 2024, 01:15 AM IST

ಸಾರಾಂಶ

ಮಲೆನಾಡಿನ ಸಾಕಷ್ಟು ಜನರು ಪ್ರವಾಸೋದ್ಯಮ ನಂಬಿ ಬದುಕುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ತಾಲೂಕಿನಲ್ಲಿ ಸಂಪೂರ್ಣ ಪ್ರವಾಸೋದ್ಯಮ ನೆಲ ಕಚ್ಚಲಿದೆ. ವಾರ್ಷಿಕ ಕೋಟ್ಯಂತರ ತೆರಿಗೆ ಪಾವತಿಸುವ ತಾಲೂಕಿನ ಪ್ರವಾಸೋದ್ಯಮದ ಸಂರಕ್ಷಣೆಗೆ ಸರ್ಕಾರ ಮುಂದಾಗ ಬೇಕು.ಮಲೆನಾಡಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ಜಾರಿಗೆ ಯಾವುದೆ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಮಲೆನಾಡಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿ ಜಾರಿಗೆ ಯಾವುದೆ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಶುಕ್ರವಾರ ತಾಲೂಕಿನ ಪೆಬ್ಬಲ್ಸ್‌ ಬೀನ್ ರೆಸಾರ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹಿಂದಿನಿಂದ ಅರಣ್ಯ ಉಳಿಸಿ, ಬೆಳೆಸಿರುವುದು ಮಲೆನಾಡಿಗರೆ ಹೊರತು ಅರಣ್ಯ ಇಲಾಖೆ ಅಲ್ಲ. ಮಲೆನಾಡಿಗರಿಂದ ಎಂದು ಅರಣ್ಯ ನಾಶವಾಗಿಲ್ಲ. ಆದ್ದರಿಂದ ಅರಣ್ಯ ರಕ್ಷಣೆ ಉದ್ದೇಶಕ್ಕೆ ಜಾರಿಯಾಗಲಿರುವ ಕಸ್ತೂರಿ ರಂಗನ್ ವರದಿ ಜಾರಿ ಅಗತ್ಯವಿಲ್ಲ. ಒಂದು ವೇಳೆ ವರದಿ ಜಾರಿಗೆ ಸರ್ಕಾರ ಮುಂದಾದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದರು.

ಮಲೆನಾಡಿನ ಸಾಕಷ್ಟು ಜನರು ಪ್ರವಾಸೋದ್ಯಮ ನಂಬಿ ಬದುಕುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ತಾಲೂಕಿನಲ್ಲಿ ಸಂಪೂರ್ಣ ಪ್ರವಾಸೋದ್ಯಮ ನೆಲ ಕಚ್ಚಲಿದೆ. ವಾರ್ಷಿಕ ಕೋಟ್ಯಂತರ ತೆರಿಗೆ ಪಾವತಿಸುವ ತಾಲೂಕಿನ ಪ್ರವಾಸೋದ್ಯಮದ ಸಂರಕ್ಷಣೆಗೆ ಸರ್ಕಾರ ಮುಂದಾಗ ಬೇಕು ಎಂದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ತಿಪ್ಪೆಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಮೂನ್ನೂರು ಅನಧಿಕೃತ ಹೋಂಸ್ಟೇಗಳನ್ನು ಗುರುತಿಸಲಾಗಿದ್ದು, ಕಾಲಮಿತಿಯಲ್ಲಿ ಅನುಮತಿ ಪಡೆದು ಸರ್ಕಾರದ ನಿಯಮದಂತೆ ಉದ್ಯಮ ನಡೆಸಿ, ಈಗಾಗಲೇ ಪ್ರವಾಸೋದ್ಯಮ ಇಲಾಖೆ ಹಲವು ನಿಬಂಧನೆಗಳನ್ನು ವಿಧಿಸಿದ್ದು ಇವುಗಳನ್ನು ಚಾಚುತಪ್ಪದೆ ಪಾಲಿಸಬೇಕು. ಸರ್ಕಾರದ ನಿಯಮವಳಿಗಳ ವಿರುದ್ಧವಾಗಿ ಕೆಲಸ ಮಾಡಿದರೆ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದರು.

ರೆಸಾರ್ಟ್‌ ಮಾಲೀಕರ ಸಂಘದ ಅಧ್ಯಕ್ಷ ಮಾಸ್ತಾರೆ ಲೋಕೇಶ್ ಮಾತನಾಡಿ, ತಾಲೂಕಿನ ರೆಸಾರ್ಟ್‌ ಹಾಗೂ ಹೋಸ್ಟೇಂಗಳ ವಿರುದ್ದ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಸಾಕಷ್ಟು ಅಪಪ್ರಚಾರ ಕೈಗೊಳ್ಳಲಾಗುತ್ತಿರುವುದು ಭಾರಿ ಪ್ರಮಾಣದಲ್ಲಿ ಉದ್ಯಮಕ್ಕೆ ಪೆಟ್ಟು ಬೀಳುತ್ತಿದೆ. ಅರಣ್ಯ ಇಲಾಖೆ ಎಂಬುದು ರೆಸಾರ್ಟ್ ಉದ್ಯಮಕ್ಕೆ ಶತ್ರುವಾಗಿ ಕಾಡುತ್ತಿದ್ದು ತಾಲೂಕಿನ ೧೫ ಪ್ರವಾಸಿ ತಾಣಗಳಿಗೆ ಪ್ರವೇಶವಿಲ್ಲದಂತೆ ತಡೆಯಲಾಗಿದೆ. ಸರ್ಕಾರ ಪ್ರವಾಸೋದ್ಯಮ ಬೆಳೆಸುವ ಬಗ್ಗೆ ಒಂದೆಡೆ ಮಾತನಾಡುತ್ತಿದೆ ಮತ್ತೊಂದೆಡೆ ತುಳಿಯುವ ಕೆಲಸ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ಮಾತನಾಡಿ, ಹೊರಗಿನಿಂದ ಬಂದು ಉದ್ಯಮ ನಡೆಸುತ್ತಿರುವವರಿಂದ ಪರಿಸರ ಹಾಳಾಗುತ್ತಿದೆ ಇದನ್ನು ತಡೆಗಟ್ಟುವ ಅಗತ್ಯವಿದೆ. ಒತ್ತುವರಿ ವಿಚಾರದಲ್ಲಿ ಸರ್ಕಾರ ಇಟ್ಟಿರುವ ಹೆಜ್ಜೆಯಿಂದ ಮೂಲನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಹಾನುಬಾಳ್ ಗ್ರಾಮ ಪಂಚಾಯತ್‌ ಅಧ್ಯಕ್ಷ ಸಂತೋಷ್‌, ಹೋಂಸ್ಟೇ ಮಾಲೀಕರ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿದರು.